ಉಡುಪಿ: 30,436 ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ ಲಸಿಕಾ ಡೋಸ್
ಉಡುಪಿ, ಜ 8, 2022: ಕೋವಿಡ್ 19 ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಾದ ಪೊಲೀಸ್, ಕಂದಾಯ, ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಮತ್ತಿತರ ಸಿಬ್ಬಂದಿಗಳನ್ನು ಕೋವಿಡ್ 3 ನೇ ಅಲೆ ಬಾಧಿಸದಂತೆ ಹಾಗೂ 60 ವರ್ಷ ಮೇಲ್ಪಟ್ಟ ಅಸ್ವಸ್ಥತೆ ಹೊಂದಿರುವವರಿಗೆ ಮುನ್ನೆಚ್ಚರಿಕೆಯಾಗಿ ಕೋವಿಡ್-19 ಮುನ್ನೆಚ್ಚರಿಕಾ ಡೋಸ್ ನೀಡಲು ಸರ್ಕಾರ ನಿರ್ಧರಿಸಿದೆ.
ಉಡುಪಿ ಜಿಲ್ಲೆಯಲ್ಲಿ ಜನವರಿ 10 ರಿಂದ ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ ಹಾಗೂ 60ವರ್ಷ ಮೇಲ್ಪಟ್ಟ ಅಸ್ವಸ್ಥತೆ ಹೊಂದಿರುವ ಫಲಾನುಭವಿಗಳಿಗೆ ಮುಂಜಾಗ್ರತಾ ಡೋಸ್ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಪ್ರಾರಂಭವಾಗಲಿದೆ. ಎಲ್ಲಾ ಸರ್ಕಾರಿ ಕೋವಿಡ್ 19 ಲಸಿಕಾಕರಣ ಕೇಂದ್ರಗಳಲ್ಲಿ ಈ ಗುಂಪಿನ ಫಲಾನುಭವಿಗಳಿಗೆ ಉಚಿತವಾಗಿ ಲಸಿಕೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ 2ನೇ ಡೋಸ್ ಕೋವಿಶೀಲ್ಡ್ ಅಥವಾ 2ನೇ ಕೋವ್ಯಾಕ್ಸಿನ್ ಪಡೆದು 9 ತಿಂಗಳು ಪೂರೈಸಿದವರಿಗೆ (39ವಾರಗಳು) ಸರ್ಕಾರಿ ಲಸಿಕಾ ಕೇಂದ್ರದಲ್ಲಿ ಉಚಿತ ಮುನ್ನೆಚ್ಚರಿಕೆ ಡೋಸ್ ಲಸಿಕೆಯನ್ನು ನೀಡಲಾಗುವುದು. 2 ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದವರು ಮುನ್ನೆಚ್ಚರಿಕೆ ಲಸಿಕಾ ಡೋಸ್ ಆಗಿ ಕೋವಿಶೀಲ್ಡ್ ಲಸಿಕೆಯನ್ನು ಪಡೆಯಬೇಕು. 2 ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದವರು ಮುನ್ನೆಚ್ಚರಿಕೆ ಲಸಿಕಾ ಡೋಸ್ ಆಗಿ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆಯಬೇಕು. ಮುನ್ನೆಚ್ಚರಿಕೆ ಡೋಸ್ ಪಡೆಯಲು ಆರೋಗ್ಯ ಕಾರ್ಯಕರ್ತರಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ/ಕ್ಲಿನಿಕ್, ನರ್ಸಿಂಗ್ ಕಾಲೇಜು, ಪ್ಯಾರಾ ಮೆಡಿಕಲ್ ಕಾಲೇಜು, ಸರಕಾರಿ ಮತ್ತು ಖಾಸಗಿ ಆಯುಷ್ ಇಲಾಖೆಯ ಅಧಿಕಾರಿಗಳು/ನೌಕರರು/ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತೆಯರು ಅರ್ಹರಿರುತ್ತಾರೆ. 2ನೇ ಡೋಸ್ ಪಡೆದು 9 ತಿಂಗಳು ಪೂರೈಸಿದ್ದನ್ನು ಖಚಿತಪಡಿಸಿಕೊಂಡು ಲಸಿಕೆ ಪಡೆಯಬಹುದಾಗಿದೆ.
ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಡೋಸ್ ಪಡೆಯಲು ಆರೋಗ್ಯ ಕಾರ್ಯಕರ್ತರ ಗುರಿ 23125 ಆಗಿರುತ್ತದೆ. ಮುನ್ನೆಚ್ಚರಿಕೆ ಡೋಸ್ ಪಡೆಯಲು ಮುಂಚೂಣಿ ಕಾರ್ಯಕರ್ತರಾಗಿ ಕಂದಾಯ ಇಲಾಖೆ, ಆರ್.ಡಿ.ಪಿ.ಆರ್ ಇಲಾಖೆ, ನಗರ ಸ್ಥಳೀಯ ಸಂಸ್ಥೆ. ಮತ್ತು ಪೋಲಿಸ್ ಇಲಾಖೆಯ ಅಧಿಕಾರಿ/ನೌಕರರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ, ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಅರ್ಹರಿರುತ್ತಾರೆ. ಇವರುಗಳು 2ನೇ ಡೋಸ್ ಪಡೆದು 9 ತಿಂಗಳು ಪೂರೈಸಿದ್ದನ್ನು ಖಚಿತಪಡಿಸಿಕೊಂಡು ಲಸಿಕೆ ಪಡೆಯಬಹುದಾಗಿದೆ. ಮುನ್ನೆಚ್ಚರಿಕೆ ಡೋಸ್ ಪಡೆಯಲು ಮುಂಚೂಣಿ ಕಾರ್ಯಕರ್ತರ ಗುರಿ 7311 ಆಗಿದೆ.
ಎಲ್ಲಾ ಅರ್ಹ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಅಸ್ವಸ್ಥತೆ ಹೊಂದಿರುವವರು ಲಸಿಕೆ ಪಡೆದು , ಕೋವಿಡ್ ನಿಂದ ಹೆಚ್ಚಿನ ಸುರಕ್ಷತೆ ಪಡೆಯಬಹುದಾಗಿದೆ.
ಕೋವಿಡ್-19 ವಿರುದ್ದದ ಹೋರಾಟದಲ್ಲಿ ಸಾರ್ವಜನಿಕರ ರಕ್ಷಣೆಗೆ ಸದಾ ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಕೋವಿಡ್ -19 ನಿಂದ ಬಾಧಿತರಾದರೆ, ಇಡೀ ಸಮಾಜದ ಆರೋಗ್ಯ ರಕ್ಷಣೆ ಮತ್ತು ಕೋವಿಡ್ ನಿಯಂತ್ರಣ ಕಾರ್ಯಗಳ ನಿರ್ವಹಣೆಯಲ್ಲಿ ಅತ್ಯಂತ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಈ ಸಮಯದಲ್ಲಿ ಇವರ ರಕ್ಷಣೆಗಾಗಿ ಮುನ್ನೆಚ್ಚರಿಕ ಡೋಸ್ ನೀಡಲು ನಿರ್ಧರಿಸಲಾಗಿದ್ದು, ಜಿಲ್ಲೆಯ ಎಲ್ಲಾ ಅರ್ಹ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ 7 ದಿನಗಳ ಒಳಗೆ ಸಂಪೂರ್ಣವಾಗಿ ಮುನ್ನೆಚ್ಚರಿಕಾ ಡೋಸ್ ಗಳನ್ನು ನೀಡಲು ಗುರಿ ನಿಗಧಿಪಡಿಸಲಾಗಿದ್ದು, ಇದಕ್ಕಾಗಿ ವಿಶೇಷ ಲಸಿಕಾ ಶಿಬಿರಗಳನ್ನೂ ಸಹ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.