ಬಿಬಿಎಂಪಿ ವ್ಯಾಪ್ತಿಯಲ್ಲಿ ಫಾಗಿಂಗ್: ಶೀಘ್ರ ಟೆಂಡರ್
ಬೆಳಗಾವಿ, ಸುವರ್ಣಸೌಧ, ಡಿ.21, 2021: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಧೂಮೀಕರಣ (ಫಾಗಿಂಗ್) ಕೈಗೊಳ್ಳಲು ಎಲ್ಲಾ ವಲಯಗಳಲ್ಲಿ ಶೀಘ್ರವೇ ಟೆಂಡರ್ ಕರೆದು ಕ್ರಮವಹಿಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿಂದು ಶೂನ್ಯ ವೇಳೆಯಲ್ಲಿ ಸದಸ್ಯ ಯು.ಬಿ. ವೆಂಕಟೇಶ್ ಅವರು ಗಮನ ಸೆಳೆದ ವಿಷಯಕ್ಕೆ ಉತ್ತರ ನೀಡಿರುವ ಮುಖ್ಯಮಂತ್ರಿಗಳು ಮಾಧ್ಯಮದಲ್ಲಿ ಬಿತ್ತರವಾದ ವರದಿ ಕುರಿತಂತೆ ಎಲ್ಲಾ ವಲಯಗಳ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಯಲಹಂಕ ವಲಯದಲ್ಲಿ ಟೆಂಡರ್ ಮೂಲಕ ಸೊಳ್ಳೆ ನಿಯಂತ್ರಣ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
ರಾಜರಾಜೇಶ್ವರಿ ನಗರದಲ್ಲಿ ಟೆಂಡರ್ ಕರೆಯಲು ಅನುಮೋದನೆಗಾಗಿ ಕಡತ ಸಲ್ಲಿಸಲಾಗಿದೆ. ಉಳಿದ ವಲಯಗಳಲ್ಲಿ ವಾರ್ಡುವಾರು ಕೊಟೇಷನ್ ಮುಖಾಂತರ ಕಾರ್ಯಾದೇಶ ನೀಡಿ ಸೊಳ್ಳೆ ನಿಯಂತ್ರಣ ಕಾರ್ಯನಿರ್ವಹಿಸಲಾಗುತ್ತದೆ. ಎಲ್ಲಾ ವಲಯಗಳಿಗೆ ಕೆಟಿಪಿಪಿ ನಿಯಮಾನುಸಾರ ಟೆಂಡರ್ ಮೂಲಕ ಫಾಗಿಂಗ್ ಕೈಗೊಳ್ಳಲು ಟೆಂಡರ್ ಸಿದ್ಧತಾ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರವೇ ಟೆಂಡರ್ ಆಹ್ವಾನಿಸಲಾಗುವುದು ಎಂದು ತಿಳಿಸಿದ್ದಾರೆ.