ಬಿಬಿಎಂಪಿ ಮುಖ್ಯ ಆಯುಕ್ತರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

 ಬಿಬಿಎಂಪಿ ಮುಖ್ಯ ಆಯುಕ್ತರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
Share this post

ಬೆಂಗಳೂರು, ಮೇ 08, 2022: ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಇಂದು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದರು.

ಇಂಟಿಗ್ರೇಟೆಡ್ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಪರಿಶೀಲನೆ:

ಯಲಹಂಕ ಪೊಲೀಸ್ ಸ್ಟೇಷನ್ ಜಂಕ್ಷನ್ ನಿಂದ ಯಲಹಂಕ‌ ನ್ಯೂ ಟೌನ್ ಜಲಮಂಡಳಿಯ ಜಂಕ್ಷನ್ ವರಗೆ 175 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ 1.8 ಕಿ.ಮೀ ಉದ್ದದ ಇಂಟಿಗ್ರೇಟೆಡ್ ಎಲಿವೇಟೆಡ್ ಕಾರಿಡಾರ್ ಪ್ರಗತಿ ಕಾಮಗಾರಿಯನ್ನು ಮಾನ್ಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೊಡ್ಡಬಳ್ಳಾಪುರ ಮುಖ್ಯ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಪೊಲೀಸ್ ಸ್ಟೇಷನ್ ವೃತ್ತ, ಎನ್.ಇ.ಎಸ್ ಜಂಕ್ಷನ್, ಶೇಷಾದ್ರಿಪುರಂ ಜಂಕ್ಷನ್ ಹಾಗೂ ಬಿ.ಡಬ್ಲ್ಯೂ.ಎಸ್.ಎಸ್.ಬಿ ಜಂಕ್ಷನ್ ಬರಲಿದ್ದು, ಇಂಟಿಗ್ರೇಟೆಡ್ ಎಲಿವೇಟೆಡ್ ಕಾರಿಡಾರ್ ನಿಂದ ಈ ಭಾಗದ ಬಹುತೇಕ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಈ ಪೈಕಿ ಕಾಮಗಾರಿಯನ್ನು ಹಂತ-ಹಂತವಾಗಿ ಕೈಗೆತ್ತಿಕೊಂಡಿದ್ದು, ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾಮಗಾರಿಯನ್ನು ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ವೇಳೆ ಎಂ.ಎಸ್.ಪಾಳ್ಯ ಜಂಕ್ಷನ್ ನಲ್ಲಿ ನಗರೋತ್ಥಾನ ಯೋಜನೆ ಅನುದಾನದಲ್ಲಿ ಗ್ರೇಡ್ ಸೆಪರೇಟರ್ ಕಾಮಗಾರಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿದರು.

ಸಂಪಿಗೆ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲನೆ:

ಮಂತ್ರಿ ಮಾಲ್ ಬಳಿಯಿಂದ ಯಶವಂತಪುರ ಜಂಕ್ಷನ್ ವರೆಗೆ ಕೈಗೆತ್ತಿಕೊಂಡಿರುವ ವೈಟ್ ಟಾಂಪಿಂಗ್ ಕಾಮಗಾರಿಯನ್ನು ಪರಿಶೀಲನೆ ನಡೆಸಿ, ಸದರಿ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದ್ದು, ಪಾದಚಾರಿ ಮಾರ್ಗ, ಜಲಮಂಡಳಿಯ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿ, ಬೆಸ್ಕಾಂ, ಓ.ಎಫ್.ಸಿ ಕೇಬಲ್ ಅಳವಡಿಕೆಗೆ ಡಕ್ಟ್ ಅಳವಡಿಕೆ ಸೇರಿದಂತೆ ಇನ್ನಿತರೆ ಮೂಲ ಸೌಲಭ್ಯಗಳ ಅಳವಡಿಕೆಯ ಸಣ್ಣ-ಪುಟ್ಟ ಕಾಮಗಾರಿಗಳಿಗೆ ವೇಗನೀಡಿ ತ್ವರಿತವಾಗಿ ಕೆಲಸ ಪೂರ್ಣಗೊಳಿಸಬೇಕು. ಅಲ್ಲದೆ ಶೀಘ್ರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಯಾಂಕಿ ಬಂಡ್ ರಸ್ತೆ ಪರಿಶೀಲನೆ:

ಭಾಷ್ಯಂ ವೃತ್ತದಿಂದ ಮಲ್ಲೇಶ್ವರ 18ನೇ ಕ್ರಾಸ್ ನವರೆಗಿನ ಸ್ಯಾಂಕಿ ಬಂಡ್ ರಸ್ತೆ 900 ಮೀಟರ್ ಉದ್ದದ ರಸ್ತೆಯನ್ನು 60 ಕೋಟಿ ರೂ. ವೆಚ್ಚದಲ್ಲಿ 15 ಮೀಟರ್ ರಸ್ತೆ ಅಗಲೀಕರಣ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು, ಕೆಲಸ ಪ್ರಾರಂಭಿಸಲು ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯುತ್ತಿದೆ. ಈ ಪೈಕಿ ಮುಖ್ಯ ಆಯುಕ್ತರು ಇಂದು ಸ್ಥಳ ಪರಿಶೀಲನೆ ನಡೆಸಿ, ಕೂಡಲೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕೆಲಸ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಸ್ಯಾಂಕಿ ಬಂಡ್ ರಸ್ತೆ ಬದಿಯ ಪಾದಚಾರಿ ಮಾರ್ಗ ಆಳಾಗಿದ್ದು, ಕೂಡಲೆ ದುರಸ್ತಿಪಡಿಸಿ ಪಾದಚಾರಿಗಳು ಸುಗವಾಗಿ ಸಂಚರಿಸುವಂತೆ ನಿರ್ಮಾಣ ಮಾಡಲು ಸೂಚಿಸಿದರು.

ಜಯಮಹಲ್ ರಸ್ತೆ ಪರಿಶೀಲನೆ:

ಜಯಮಹಲ್ ರಸ್ತೆ ಅಗಲೀಕರಣ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯ ಆಯುಕ್ತರು ಇಂದು ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಮೇಕ್ರಿ ವೃತ್ತದ ಕಡೆಯಿಂದ ಜಯಮಹಲ್ ರಸ್ತೆ ಕಡೆ ಬರುವ ರಸ್ತೆಯಲ್ಲಿ ಯುಜಿಡಿ ಪೈಪ್ ಗಳು ಹಾಗೂ ನೀರಿನ ಕೊಳವೆಗಳಿರುವುದನ್ನು ಕಂಡು ಅದನ್ನು ಬೇರೆಡೆ ಸ್ಥಳಾಂತರಿಸಿ ವಾಹನಗಳ ಸುಗಮ‌ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಯಮಹಲ್ ರಸ್ತೆ ಅಗಲೀಕರಣಕ್ಕೆ ಪ್ಯಾಲೆಸ್ ನಿಂದ ಸ್ಥಳ ಹಸ್ತಾಂತರಗೊಳ್ಳಬೇಕಿದ್ದು, ಸದ್ಯ ಇರುವ ರಸ್ತೆ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲು ಇದೇ ವೇಳೆ ಸೂಚಿಸಿದರು.

ಕೋರಮಂಗಲ ರಾಜಕಾಲುವೆ(ಕೆ-100) ಜಲಮಾರ್ಗ ಯೋಜನೆ ಪರಿಶೀಲನೆ:

ಕೋರಮಂಗಲ ರಾಜಕಾಲುವೆ(ಕೆ-100) ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗೆ ಕೈಗೆತ್ತಿಕೊಂಡಿರುವ ಜಲಮಾರ್ಗ ಯೋಜನೆಯ ಕಾಮಗಾರಿಯ ಪ್ರಗತಿಯನ್ನು ಮುಖ್ಯ ಆಯುಕ್ತರು ಪರಿಶೀಲನೆ ನಡೆಸಿ, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಿದರು.

ಮುಖ್ಯಮಂತ್ರಿಗಳ ನವನಗರೋತ್ಥಾನ ಯೋಜನೆಯಡಿ 175 ಕೋಟಿ ರೂ. ವೆಚ್ಚದಲ್ಲಿ ಕೋರಮಂಗಲ ರಾಜಕಾಲುವೆ(ಕೆ-100) ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗಿನ 9.6 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ ಜಲಮಾರ್ಗ ಯೋಜನೆ ಕಾಮಗಾರಿಯು ತ್ವರಿತಗತಿಯಲ್ಲಿ ನಡೆಯುತ್ತಿದೆ. ರಾಜಕಾಲುವೆ ಪಕ್ಕದಲ್ಲಿರುವ ಮನೆಗಳಿಂದ ಸೀವೇಜ್ ನೀರನ್ನು ನೇರವಾಗಿ ರಾಜಕಾಲುವೆಗೆ ಹರಿದು ಬಿಡುತ್ತಿದ್ದನ್ನು ತಡೆಯಲಾಗಿದ್ದು, ಜಲಮಂಡಳಿ ಅಧಿಕಾರಿಗಳು ಪರಿಶೀಲನೆ ನಡೆಸಿ ಹೊಸದಾಗಿ ಒಳಚರಂಡಿ ಮಾರ್ಗಗಳಲ್ಲಿ ಸೀವೆಜ್ ನೀರು ಹೋಗುವಂತೆ ಸಂಪರ್ಕ ಕಲ್ಪಿಸಿರುತ್ತಾರೆ.

9.6 ಕಿ.ಮೀ ಉದ್ದದ ರಾಜಕಾಲುವೆಯ ಪೈಕಿ 6 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ ಹೂಳೆತ್ತಿ ಕಲುಷಿತಗೊಂಡಿರುವ ರಾಜಕಾಲುವೆಯ ತಳಭಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ನೀರು ಇಂಗುವಂತೆ ವಿನ್ಯಾಸಗೊಳಿಸಿ ಅಭಿವೃದ್ಧಿ ಕಾರ್ಯವನ್ನು ಮುಕ್ತಾಯದ ಹಂತದಲ್ಲಿದೆ. ಉಳಿದ 3.6 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ.

ಜೆ.ಸಿ ರಸ್ತೆಯಿಂದ ಶಾಂತಿನಗರ ಬಸ್ ನಿಲ್ದಾಣದವರೆಗಿನ 1.5 ಕಿ.ಮೀ ಉದ್ದದ ರಾಜಕಾಲುವೆ ಮಾರ್ಗದಲ್ಲಿ ಎರಡೂ ಬದಿಯ ತಡೆಗೋಡೆ, ತಳಮಟ್ಟದ ಸೇತುವೆಗಳನ್ನು ವಾಸ್ತುಶಿಲ್ಪದ ಮಾದರಿಯಲ್ಲಿ ವಿನ್ಯಾಸಗೊಳಿಸುವುದು. ಹಸಿರೀಕರಣ, ರಾತ್ರಿ ಸಮಯದಲ್ಲಿ ಉದ್ಯಾನವನದ ರೀತಿಯಲ್ಲಿ ಅಲಂಕಾರಿಕ ವಿದ್ಯುಧೀಕರಣ ಅಳವಡಿಕೆ ಕಾರ್ಯ, ಗ್ರಾನೈಟ್ ಅಳವಡಿಕೆ, ತೋಟಗಾರಿಕೆ, ಪಾದಚಾರಿ ಮಾರ್ಗ, ಗ್ರಿಲ್ ಅಳವಡಿಕೆ, ಕುಂಬಾರಗುಂಡಿ ಬಳಿ ರಾಜಕಾಲುವೆಯಲ್ಲಿ ಹರಿಯುವ ನೀರನ್ನು ಶುದ್ಧೀಕರಿಸಲು 05 ಎಂ.ಎಲ್.ಡಿ ಎಸ್.ಟಿ.ಪಿಯ ಕಾಮಗಾರಿ ಪ್ರಗತಿಯಲ್ಲಿದೆ.

ರಾಜಕಾಲುವೆ ಮೇಲೆ ಎರಡೂ ಬದಿ ಸಂಚರಿಸಲು ನಿರ್ಮಿಸುತ್ತಿರುವ 6 ಬ್ರಿಡ್ಜ್ ಗಳು ಪೂರ್ಣಗೊಂಡಿದ್ದು, ಉಳಿದ 3 ಬ್ರಿಡ್ಜ್ ಕೆಲಸ ಪ್ರಗತಿಯಲ್ಲಿದೆ. ವಿದ್ಯುತ್ ಅಳವಡಿಕೆಗಾಗಿ ಅತ್ಯಾಧುನಿಕ ಟ್ರಾನ್ಸ್ ಫಾರ್ಮ್ ಗಳನ್ನು ಅಳವಡಿಸಲಾಗಿದೆ. ಜೊತೆಗೆ ರಾಜಕಾಲುವೆಯ ಎರಡೂ ಬದಿಯ ಸರ್ವೀಸ್ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಸವೀರ್ಸ್ ರಸ್ತೆಯಲ್ಲಿ ರಾಜಕಾಲುವೆಗೆ ಮಳೆ ನೀರು ಹರಿದು ಹೋಗದಂತೆ ಪೈಪ್ ಲೈನ್, ಕೇಬಲ್ ಅಳವಡಿಕೆಗೆ ಚೇಂಬರ್ ಗಳ ಕಾಮಗಾರಿ ಮುಗಿಯುವ ಹಂತದಲ್ಲಿರುತ್ತದೆ.

ತಪಾಸಣೆಯ ವೇಳೆ ಮುಖ್ಯ ಇಂಜಿನಿಯರ್ ಗಳು, ಕಾರ್ಯಪಾಲಕ ಇಂಜಿನಿಯರ್ ಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!