ರಾಷ್ಟ್ರೀಯ ಹೆದ್ದಾರಿಗಳು ಸುರಕ್ಷಿತ ಸಂಚಾರಕ್ಕೆ ಯೋಗ್ಯವಾಗಿರಲಿ: ಜಿಲ್ಲಾಧಿಕಾರಿ

 ರಾಷ್ಟ್ರೀಯ ಹೆದ್ದಾರಿಗಳು ಸುರಕ್ಷಿತ ಸಂಚಾರಕ್ಕೆ ಯೋಗ್ಯವಾಗಿರಲಿ: ಜಿಲ್ಲಾಧಿಕಾರಿ
Share this post

ಉಡುಪಿ, ಸೆ 29, 2021: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಜನ ಸಾಮಾನ್ಯರ  ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.

ಅವರು ಇಂದು ನಗರದ ತಮ್ಮ ಕಛೇರಿ ಸಭಾಂಗಣದಲ್ಲಿ ನಡೆದ  ರಾಷ್ಟ್ರೀಯ ಹೆದ್ದಾರಿ 66 ಮತ್ತು 169ಎ ಗೆ ಸಂಬಂಧಿಸಿದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ವಾಹನಗಳ ಹಾಗೂ ಜನಸಾಮಾನ್ಯರು ಸುರಕ್ಷಿತ ಹಾಗೂ ಸುಗಮವಾಗಿ ಸಂಚಾರಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ರಸ್ತೆ ಕಾಮಗಾರಿಗಳನ್ನು ಕೈಗೊಂಡಾಗ ಮಾತ್ರ ಅಪಘಾತ ಮುಕ್ತವಾಗುದರ ಜೊತೆಗೆ ಜನರು ಯಾವುದೇ ತೊಂದರೆ ಇಲ್ಲದೆ ಸಂಚರಿಸಬಹುದು. ಇದಕ್ಕೆ ಒತ್ತು ನೀಡಬೇಕು ಎಂದರು.

ಕುಂದಾಪುರದ ಫ್ಲೈಓವರ್ ಹತ್ತಿರ ಬಾಕಿ ಉಳಿದಿರುವ ರಸ್ತೆಯ ಡಾಂಬರೀಕರಣ, ಮಳೆಯ ನೀರು ಸರಾಗವಾಗಿ ಹೋಗುವ ವ್ಯವಸ್ಥೆ ಬೀದಿದೀಪ, ಸೂಚನಾ ಫಲಕಗಳು ಅಳವಡಿಕೆ, ಪಾದಚಾರಿಗಳು ರಸ್ತೆ ದಾಟಲು ಅನುಕೂಲವಾಗುವ ದಾರಿ ಸೇರಿದಂತೆ ಮತ್ತಿತರ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಕೈಗೊಂಡು ಪೂರ್ಣಗೊಳಿಸಬೇಕು ಎಂದರು.

ಹೆದ್ದಾರಿ ರಸ್ತೆಗಳ ಕಾಮಗಾರಿಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದ ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಯಾವುದೇ ರೀತಿಯ ನೆರವು ಹಾಗೂ ಮತ್ತಿತರ ಸಮಸ್ಯಗಳಿದ್ದಲ್ಲಿ ಸಚಿವರ ಮೂಲಕ ಶೀಘ್ರದಲ್ಲಿಯೇ ಬಗೆಹರಿಸಿ ಕೊಡುವುದಾಗಿ ತಿಳಿಸಿದರು.

ಹೆದ್ದಾರಿ ರಸ್ತೆಗಳನ್ನು ಪ್ರತಿ ವರ್ಷದ ನಿರ್ವಹಣೆಯನ್ನು ಕಾಲ-ಕಾಲಕ್ಕೆ ಕೈಗೊಳ್ಳುವುದರ ಜೊತೆಗೆ ಯಾವುದೇ ರಸ್ತೆಯಲ್ಲಿ ಗುಂಡಿಗಳು ಬೀಳದ ಹಾಗೆ ನೋಡಿಕೊಳ್ಳಬೇಕು ಅವಶ್ಯವಿರುವಲ್ಲಿ ಸರ್ವಿಸ್ ರಸ್ತೆ ಹಾಗೂ ಚರಂಡಿ ನಿರ್ಮಾಣವನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಪರ್ಕಳದಿಂದ ಮಣಿಪಾಲ್‌ವರೆಗಿನ ರಸ್ತೆ ಅಗಲೀಕರಣದ ಸಂಬಂಧ ಉಚ್ಛನ್ಯಾಯಾಲಯದಲ್ಲಿ ಹೂಡಿರುವ ದಾವೆಯನ್ನು ಶೀಘ್ರದಲ್ಲಿಯೇ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಬೇಕು, ತಕರಾರು ಇಲ್ಲದೇ ಇರುವ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿರುವ ಹಿನ್ನೆಲೆ ಕಾಮಗಾರಿಯನ್ನು ತತ್‌ಕ್ಷಣದಲ್ಲಿಯೇ ಪ್ರಾರಂಭಿಸಬೇಕೆಂದು ಸೂಚನೆ ನೀಡಿದರು.

ಇಂದ್ರಾಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕೈಗೊಂಡಿರುವ ಹಿನ್ನೆಲೆ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ, ತಾತ್ಕಾಲಿಕ ರಸ್ತೆ ದುರಸ್ಥಿ ಕೈಗೊಳ್ಳಬೆಕೆಂದ ಅವರು ಕರಾವಳಿ ಜಂಕ್ಷನ್‌ನಿಂದ ಮಲ್ಪೆ ಬಂದರಿನವರೆಗೆ ರಸ್ತೆ ಕಾಮಗಾರಿಯನ್ನು ಅಗತ್ಯವಿರುವ ಪೂರ್ವ ತಯಾರಿಯನ್ನು ಕೈಗೊಳ್ಳಬೇಕು ಎಂದರು.

ಹೆಬ್ರಿಯಿಂದ ಸೋಮೆಶ್ವರ ಒಳಗೊಂಡಂತೆ ಆಗುಂಬೆವರೆಗಿನ ರಸ್ತೆಯ ಡಾಂಬರೀಕರಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯನ್ನು ಶೀಘ್ರದಲ್ಲೆಯೇ ಪೂರ್ಣಗೋಳಿಸಿ ಕಾಮಗಾರಿಯನ್ನು ಪ್ರಾರಂಬಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧೊಕಾರಿ ವಿಷ್ಣುವರ್ಧನ್, ಉಪ ವಿಭಾಗಾಧಿಕಾರಿ ರಾಜು, ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾದಿಕಾರದ ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರರು ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!