ದೇಶ ಓರ್ವ ಜನಾನುರಾಗಿ ನಾಯಕನನ್ನು ಕಳೆದುಕೊಂಡಿದೆ

 ದೇಶ ಓರ್ವ ಜನಾನುರಾಗಿ ನಾಯಕನನ್ನು ಕಳೆದುಕೊಂಡಿದೆ
Share this post

ರಾಜ್ಯಸಭೆ ಸದಸ್ಯರೂ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಶ್ರೀಯುತ ಆಸ್ಕರ್ ಫರ್ನಾಂಡಿಸ್ ಅವರು ನಮ್ಮನ್ನೆಲ್ಲ ಅಗಲಿರುವುದು ದುಃಖವಾಗಿದೆ. ಅವರ ಅಗಲಿಕೆಯಿಂದ ದೇಶ ಒಬ್ಬ ಮುತ್ಸದ್ಧಿ, ಜಾತ್ಯತೀತ ಮನೋಭಾವದ, ಜನಾನುರಾಗಿ ನಾಯಕನನ್ನು ಕಳೆದುಕೊಂಡಂತಾಗಿದೆ.

Also read: Smiling Face of Oscar Anna is a memory now

ಪಕ್ಕದ ಉಡುಪಿ ಜಿಲ್ಲೆಯವರಾಗಿದ್ದ ಆಸ್ಕರ್ ಫರ್ನಾಂಡಿಸ್‍ರನ್ನು ಹಲವಾರು ಬಾರಿ ನಾನೂ ಸೇರಿದಂತೆ ಕಾರವಾರದ ಗಣ್ಯರು ಭೇಟಿ ಮಾಡಿದ್ದೆವು. ಯಾರೇ ತಮ್ಮ ಬಳಿ ಸಮಸ್ಯೆ ಹೇಳಿಕೊಳ್ಳಲು ಬಂದರೆ ಅವರು ಸಮಸ್ಯೆ ಹೇಳಿ ಮುಗಿಸುವವರೆಗೂ ತಾಳ್ಮೆಯಿಂದ ಕೇಳುತ್ತಿದ್ದರು. ತೊಂದರೆಗಳ ಬಗ್ಗೆ ಸ್ಪಷ್ಟವಾಗಿ ಅರಿತ ಬಳಿಕ ಅದಕ್ಕೊಂದು ಪರಿಹಾರ ಸೂಚಿಸುತ್ತಿದ್ದರು. ಹೀಗಾಗಿ ಆಸ್ಕರ್ ಅವರಲ್ಲಿ ರಾಜಕೀಯಕ್ಕಿಂತ ಜನಾನುರಾಗಿ ಗುಣ ಗಾಢವಾಗಿತ್ತು ಎಂಬುದನ್ನು ಬಹಳ ಹತ್ತಿರದಿಂದ ನೋಡಿದ ನನಗೆ ಅನುಭವವಾಗಿದೆ.

2013ರಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಕಾರವಾರದ ಬಳಿ ಬೈಪಾಸ್ ಮೂಲಕ ಸಾಗಿಸುವ ಕುರಿತಂತೆ ಅಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರಿಗೆ ಮನವಿ ಮಾಡಲು ವಕೀಲರಾದ ಕೆ.ಆರ್.ದೇಸಾಯಿ,ನಾಗರಾಜ ನಾಯಕ, ಸೇರಿದಂತೆ ಹಲವು ಹಿರಿಯರೊಂದಿಗೆ ತೆರಳಿದ್ದೆ. ಈ ವೇಳೆ ನಾವು ನೀಡಿದ ಮನವಿಯನ್ನು ಅವರು ಪರಿಗಣಿಸಿದ್ದರು.

ಆದರೆ ಆ ಬಳಿಕ ಸ್ಥಳಿಯ ಹಲವರು ಬೈಪಾಸ್ ವಿರೋಧಿಸಿ ಅವರಿಗೆ ಮನವಿ ಮಾಡಿದ್ದರು. ಜನಪರವಾದ ನಿರ್ಣಯ ಕೈಗೊಳ್ಳುವಷ್ಟರಲ್ಲಿ ಸರ್ಕಾರವೂ ಬದಲಾಗಿ ಆಸ್ಕರ್ ಸಚಿವ ಸ್ಥಾನ ಕಳೆದುಕೊಂಡಿದ್ದರು. ಆದರೂ ಅವರು ಪರ–ವಿರೋಧದ ವಿಚಾರಗಳನ್ನು ಕೂಲಂಕುಷವಾಗಿ ಆಲಿಸುತ್ತಿದ್ದರು ಎಂಬುದು ಸ್ಪಷ್ಟವಾಗಿತ್ತು. ಹಲವಾರು ಬಾರಿ ಆಸ್ಕರ್ ಅವರನ್ನು ಭೇಟಿ ಮಾಡಿದ್ದಾಗಲೂ ಇದು ನಮಗೆ ಅರಿವಿಗೆ ಬಂದಿದೆ.

ರಾಜಕೀಯ ಕ್ಷೇತ್ರದಲ್ಲಿ ಇಂತಹ ಅಪರೂಪದ ಹಾಗೂ ಅತಿ ತಾಳ್ಮೆಯ ವ್ಯಕ್ತಿತ್ವ ಹೊಂದಿದ್ದ ಆಸ್ಕರ್ ಅವರ ಅಗಲಿಕೆ ನಿಜಕ್ಕೂ ಭಾರಿ ನಷ್ಟ ಎಂದೇ ಭಾವಿಸುತ್ತೇನೆ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಮಾಧವ ನಾಯಕ, ಜನಶಕ್ತಿ ವೇದಿಕೆ ಅಧ್ಯಕ್ಷ

ಕಾರವಾರ

Subscribe to our newsletter!

Other related posts

error: Content is protected !!