ಕಾರ್ಕಳದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ :ಸಚಿವ ವಿ.ಸುನಿಲ್ ಕುಮಾರ್
ಉಡುಪಿ, ಆ, 23, 2021: ಕಾರ್ಕಳ ತಾಲೂಕಿನ ಪ್ರವಾಸಿ ತಾಣಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಪ್ರವಾಸೋದ್ಯಮಕ್ಕೆ ಅಧಿಕ ಒತ್ತು ನೀಡಲಾಗುವುದು ಎಂದು ಇಂಧನ ಮತ್ತುಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಅವರು ಇಂದು ಕಾರ್ಕಳದ ಆನೆಕೆರೆ ಬಸದಿಯ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.
ಕಾರ್ಕಳದ ಆನೆ ಕೆರೆ ಬಸದಿಯನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಪಡಿಸಬೇಕು ಎನ್ನುವ ಹಿನ್ನೆಲೆಯಲ್ಲಿ 2 ಕೋಟಿ ವೆಚ್ಚದ ಕಾಮಗಾರಿ ನಿರ್ಮಾಣ ಹಂತದಲ್ಲಿದ್ದು, ಬಸದಿಯ ಜೀರ್ಣಾದ್ಧಾರ ಹಾಗೂ ಸಂಗೀತ ಕಾರಂಜಿ ನಿರ್ಮಾಣ, ವೀಕ್ಷಕರ ಗ್ಯಾಲರಿ ನಿರ್ಮಾಣ ಕಾಮಗಾರಿಗಳಿಗೆ ಸರಕಾರದಿಂದ 50 ಲಕ್ಷರೂ ಅನುದಾನ ಜೊತೆ ಸೇತುವೆ ತಡೆಗೋಡೆ ನಿರ್ಮಾಣಕ್ಕೆ 1ಕೋಟಿ ರೂ. ಅನುದಾನವನ್ನು ಬಿಡುಗಡೆಗೊಂಡಿದೆ. ಸಾಣೂರಿನ ಮಠದಕೆರೆ ಮತ್ತುರಾಮಸಮುದ್ರ ಅಭಿವೃದ್ಧಿಯನ್ನು ಕೈಗೊಳ್ಳಲು ಯೋಜನೆ ಸಿದ್ದವಾಗಿದೆ. ಮುಂದಿನ ದಿನಗಳಲ್ಲಿ ಎರಡೂ ಕೆರೆಗಳ ಸಂಪೂರ್ಣ ಅಭಿವೃದ್ಧಿಯನ್ನು ಮಾಡಲಾಗುತ್ತದೆ, ಕೋಟಿ ಚೆನ್ನಯ ಥೀಂ ಪಾರ್ಕ್, ಬೈಲೂರಿನಲ್ಲಿ ಪರಶುರಾಮ ಕೇಂದ್ರ ಹೀಗೆ ಎಲ್ಲ ದೃಷ್ಟಿಯಿಂದಲೂ ಕಾರ್ಕಳ ತಾಲೂಕು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದರು.
ಆನೆಕೆರೆ ಬಳಿಯ ಮಸೀದಿ ಹತ್ತಿರದಿಂದ ರಂಗನಾಥ ಕೆಫೆ ತನಕದ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕಿದ್ದು, ರಸ್ತೆ ಹಾದು ಹೋಗುವ ಪ್ರದೇಶಗಳ ಎರಡು ಖಾಸಗಿ ಭೂಮಾಲಕರ ಜತೆ ಮಾತುಕತೆ ನಡೆಸಲಾಗಿದ್ದು, ಎರಡೂ ಮನೆಗಳ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದೆ ನಂತರ ಆನೆಕೆರೆಗೆ ತಡೆಗೋಡೆ ಕಟ್ಟಿ ಹೂಳೆತ್ತಿ ಶಾಶ್ವತವನ್ನಾಗಿಸಲಾಗುವುದು ಎಂದರು.
ಹೊರಜಿಲ್ಲೆ ಹಾಗೂ ಹೊರ ತಾಲೂಕಿನಿಂದ ಪ್ರವಾಸಿಗರು ಆಗಮಿಸುವ ಪ್ರವಾಸಿಗರಿಗೆ ವೀಕ್ಷಣೆಗೆ ಅನುಕೂಲವಾಗುವಂತೆ ಪ್ರವಾಸಿ ತಾಣಗಳ ಕಾಮಗಾರಿಗಳನ್ನು ಅದಷ್ಟೂ ಬೇಗ ಪೂರ್ಣಗೊಳಿಸಬೇಕು, ಪ್ರವಾಸೊದ್ಯಮಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡ ಕಾರ್ಕಳ ನಗರವು ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಸುಮಾಕೇಶವ್, ಪುರಸಭೆ ಮುಖ್ಯಾಧಿಕಾರಿ ರೂಪಾ ಡಿ.ಶೆಟ್ಟಿ , ಕೆಆರ್‌ಐಡಿಎಲ್ ಅಧಿಕಾರಿ ಪ್ರಭಾಕರ್, ಹಿರಿಯ ನ್ಯಾಯವಾಧಿ ಎಂ.ಕೆ ವಿಜಯಕುಮಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಹಾವೀರ ಹೆಗ್ಡೆ ಉಪಸ್ಥಿತರಿದ್ದರು. ಗುಣಪಾಲ ಕಡಂಬಾಳ ಕಾರ್ಯಕ್ರಮ ನಿರ್ವಹಿಸಿದರು.