ನಾರಾಯಣ ಗುರು ಅಭಿವೃಧ್ದಿ ನಿಗಮ ಸ್ಥಾಪಿಸಲು ಚಿಂತನೆ : ಸಚಿವ ವಿ.ಸುನಿಲ್ ಕುಮಾರ್
ಉಡುಪಿ, ಆ 21, 2021: ಬಿಲ್ಲವ ಸಮುದಾಯದ ಅಭಿವೃದ್ದಿಗಾಗಿ ರಾಜ್ಯದಲ್ಲಿ ನಾರಾಯಣ ಗುರು ಅಭಿವೃದ್ದಿ ನಿಗಮ ಆರಂಭಿಸುವ ಚಿಂತನೆ ಇದೆ ಎಂದು ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಅವರು ಇಂದು ಬನ್ನಂಜೆಯ ನಾರಾಯಣ ಗುರು ಸಭಾ ಭವನದಲ್ಲಿ ನಡೆದ , ರಾಜ್ಯಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಮೇಲು ಕೀಳು ಭಾವನೆ, ಜಾತಿಯ ಸಂಘರ್ಷಗಳು, ಅಸಮಾನತೆಯ ಧ್ವನಿ ಇಂದಿಗೂ ಕಂಡು ಬರುತ್ತಿದೆ, ನಾರಾಯಣ ಗುರುಗಳ ಭೋದನೆಗಳ ಮೂಲಕ ಪ್ರಸ್ತುತ ಸಮಾಜದಲ್ಲಿ ಪರಿವರ್ತನೆ ತರುವುದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ, ಬಿಲ್ಲವ ಸಮುದಾಯಕ್ಕೆ ಆರ್ಥಿಕ ಚೇತನ ನೀಡಲು ನಾರಾಯಣ ಗುರು ಅಭಿವೃಧ್ದಿ ನಿಗಮ ಆರಂಭಿಸಿ, ಅದರಂತೆ ಕಾರ್ಯಯೋಜನೆ ರೂಪಿಸಲಾಗುವುದು ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಶತಮಾನಗಳ ಕಾಲ ಸಾಮಾಜಿಕ ತುಡಿತಕ್ಕೆ ಒಳಗಾದ ಸಮಾಜದಲ್ಲಿನ ಜನರನ್ನು, ಅಸ್ಪಶ್ಯçತೆ ಒಳಗಾದವರನ್ನು ಮುಖ್ಯವಾಹಿನಿಗೆ ಒಗ್ಗೂಡಿಸಿ ಕರೆತರುವ ಪ್ರಯತ್ನ ಮಾಡಿದ ನಾರಾಯಣ ಗುರುಗಳು, ರಕ್ತ ಕ್ರಾಂತಿಯಿಲ್ಲದೇ ಸಮಾಜದಲ್ಲಿ ಪರಿವರ್ತನೆ ತಂದರು. ಇಂದಿಗೂ ಅವರ ಭೋದನೆಗಳು ಪ್ರಸ್ತುತ, ತಾನು ಮುಜರಾಯಿ ಸಚಿವನಾಗಿದ್ದಾಗ ನಾರಾಯಣ ಗುರು ಮಂದಿರಗಳನ್ನು ದೇವಾಲಯಗಳ ಪಟ್ಟಿಗೆ ಸೇರ್ಪಡೆ ಮಾಡಿದ್ದು, ನಾರಾಯಣ ಗುರು ಮಂದಿರಗಳ ಅಭಿವೃದ್ದಿಗೆ ಸರ್ಕಾರದಿಂದ ವಿವಿಧ ಅನುದಾನ ದೊರೆಯಲು ಸಾದ್ಯವಾಗಿದೆ ಎಂದರು.
ನಾರಾಯಣ ಗುರುಗಳ ಕುರಿತು ವಿಶೇಷ ಉಪನ್ಯಾಸ ನೀಡಿದ, ಕಾರ್ಕಳದ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್, ಅಸಮಾನತೆ, ಅಸೃಷ್ಯತೆ, ಮೂಢನಂಬಿಕೆಗಳಿಗೆ ಶಿಕ್ಷಣದಿಂದ ಮಾತ್ರ ಪರಿಹಾರ ಸಾಧ್ಯ ಎಂದು ತಿಳಿಸಿದವರು ನಾರಾಯಣ ಗುರುಗಳು, ಅವರ ಭೋದನೆಗಳು ಎಲ್ಲಾ ಕಾಲಕ್ಕೂ ಸೂಕ್ತವಾಗಿವೆ, ಶೋಷಿತರ, ದಮನಿತರ ಪರವಾಗಿ ರಕ್ತಪಾತವಿಲ್ಲದ ಚಳುವಳಿ ಆರಂಭಿಸಿದ ಅವರು, ಸಮಾಜದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಾನತೆಯ ಬೆಳವಣಿಗೆಗೆ ಪ್ರಯತ್ನಿಸಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚೆರಿತ್ರೆ ಶಾಲಾ ಪಠ್ಯ ಪುಸ್ತಕದಲ್ಲಿ ಅಳವಡಿಕೆಯಾಗಬೇಕು ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು,ಅಸಮಾನತೆ ವಿರುದ್ದದ ಹೋರಾಟಕ್ಕೆ ನಾರಾಯಣ ಗುರು ಅವರ ಕೊಡುಗೆ ಅಮೂಲ್ಯವಾದುದು ಎಂದರು.
ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್, ಬನ್ನಂಜೆ ಬಿಲ್ಲವರ ಸೇವಾ ಸಂಘ (ರಿ) ಅಧ್ಯಕ್ಷ ಆನಂದ್ ಪೂಜಾರಿ ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ವಂದಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು.