ಯಕ್ಷಗಾನ ಸಮ್ಮೇಳನಕ್ಕೆ ಆಗಮಿಸುವ ಸರ್ವರಿಗೂ ಮೂಲಸೌಕರ್ಯ ಕೊರತೆಯಾಗದಂತೆ ಕ್ರಮ ವಹಿಸಿ: ಸುನೀಲ್ ಕುಮಾರ್

 ಯಕ್ಷಗಾನ ಸಮ್ಮೇಳನಕ್ಕೆ ಆಗಮಿಸುವ ಸರ್ವರಿಗೂ ಮೂಲಸೌಕರ್ಯ ಕೊರತೆಯಾಗದಂತೆ ಕ್ರಮ ವಹಿಸಿ: ಸುನೀಲ್ ಕುಮಾರ್
Share this post

ಉಡುಪಿ, ಫೆ 08, 2023: ಉಡುಪಿಯಲ್ಲಿ ಫೆಬ್ರವರಿ 11 ಮತ್ತು 12 ರಂದು ನಡೆಯುವ ರಾಜ್ಯಮಟ್ಟದ ಯಕ್ಷಗಾನ ಸಮ್ಮೆಳನಕ್ಕೆ ಆಗಮಿಸುವ  ಕಲಾವಿದರು ಮತ್ತು ಕಲಾಸಕ್ತರು ಹಾಗೂ ಸಾರ್ವಜನಿಕರಿಗೆ  ಯಾವುದೇ ರೀತಿಯ  ಕೊರತೆ ಆಗದಂತೆ ಅಗತ್ಯ ಮೂಲ ಸೌಕರ್ಯಗಳು ಸೇರಿದಂತೆ , ಊಟೋಪಚಾರದ ವ್ಯವಸ್ಥೆಯನ್ನು ಮಾಡಬೇಕೆಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅಧಿಕಾರಿಗಳು ಹಾಗೂ ಸಂಘಟಕರಿಗೆ ಸೂಚನೆ ನೀಡಿದರು.

ಅವರು ಇಂದು ರಾಜ್ಯಮಟ್ಟದ ಯಕ್ಷಗನ ಸಮ್ಮೇಳನ ಸಿದ್ಧತೆಗಳ ಕುರಿತ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ, ಕಾರ್ಯಕ್ರಮದ ಉದ್ಘಾಟನೆ ಹಾಗೂ ವಿವಿಧ ಗೋಷ್ಠಿಗಳು ಹಾಗೂ ಸಂವಾದಗಳು ನಿಗಧಿತ ಸಮಯಕ್ಕೆ ಸರಿಯಾಗಿ ಅರ್ಥಪೂರ್ಣವಾಗಿ ಆಯೋಜಿಸಬೇಕು. ಯಕ್ಷಗಾನ ಸಮ್ಮೇಳನಕ್ಕೆ ರಾಜ್ಯ ಮತ್ತು ಹೊರರಾಜ್ಯದಿಂದ ಆಗಮಿಸುವ ಯಕ್ಷಗಾನ ಕಲಾವಿದರು, ಕಲಾಭಿಮಾನಿಗಳು, ಜನಸಾಮಾನ್ಯರು ಸೇರಿದಂತೆ 50000 ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಆಗಮಿಸುವ ಪ್ರತಿಯೊಬ್ಬರಿಗೂ  ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಆಸನದ ವ್ಯವಸ್ಥೆ , ಆಹಾರ ವ್ಯವಸ್ಥೆ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಸಂಬಂಧಿಸಿದ ಆಹ್ವಾನ ಪತ್ರಿಕೆಯನ್ನು ಶಿಷ್ಠಾಚಾರದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಿಗೆ ಹಾಗೂ ಕರಾವಳಿ ಭಾಗದ 3 ಜಿಲ್ಲೆಯ ಎಲ್ಲಾ ಶಾಸಕರು , ಲೋಕಸಭಾ ಸದಸ್ಯರು, ಯಕ್ಷಗಾನ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಲಾವಿದರಿಗೆ, ಗಣ್ಯರಿಗೆ ತಲುಪಿಸಿ ಆಹ್ವಾನಿಸಬೇಕೆಂದರು.

ಸಮಾರಂಭದಲ್ಲಿ 75 ಕ್ಕೂ ಹೆಚ್ಚು ಜನ ಆಯ್ದ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದ್ದು, ಹೊರಜಿಲ್ಲೆಯಿಂದ ಬಂದ ಇವರಿಗೂ ಸೇರಿದಂತೆ ಇತರೆ ಕಲಾವಿದರಿಗೆ ವಸತಿ ಸೇರಿದಂತೆ ಆತಿಥ್ಯ ವ್ಯವಸ್ಥೆಯನ್ನು ಮಾಡಬೇಕು ಎಂದರು.

ಕಾರ್ಯಕ್ರಮದ ವೇದಿಕೆಯ ಪೆಂಡಾಲ್ ನಲ್ಲಿ ಧ್ವನಿ ಹಾಗೂ ಬೆಳಕಿನ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿ ಇರುವ ಹಾಗೆ ನೋಡಿಕೊಳ್ಳಬೇಕು, ಮೈದಾನದಲ್ಲಿಯೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಎಲ್ಲವೂ ಅಚ್ಚುಕಟ್ಟಾಗಿ ನಡೆಯಲು ಸ್ವಯಂ ಸೇವಕರನ್ನು ನಿಯೋಜಿಸಬೇಕೆಂದು ತಿಳಿಸಿದರು.

 ಮೈದಾನದಲ್ಲಿ 100 ಕ್ಕೂ ಹೆಚ್ಚು ವಾಣಿಜ್ಯ ಹಾಗೂ ವಿವಿಧ ಇಲಾಖೆಗಳ ಸವಲತ್ತುಗಳ ಪ್ರದರ್ಶನ ಮಳಿಗೆಗಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದ ಅವರು, ಸಮ್ಮೇಳನಕ್ಕೆ ಆಗಮಿಸುವ ವಾಹನಗಳ ನಿಲುಗಡೆಗೆ ಅಗತ್ಯ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಬೇಕೆಂದರು.

    ಸಮ್ಮಳನಕ್ಕೆ ಆಗಮಿಸುವ ಜನಸಾಮಾನ್ಯರು ಇಲ್ಲಿನ ಸುತ್ತಮುತ್ತಲಿನ ಪ್ರವಾಸಿತಾಣಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಪ್ರವಾಸಿತಾಣಗಳ ಮಾರ್ಗಸೂಚಿಗಳು ಸುಲಭವಾಗಿ ಲಭ್ಯವಾಗುವಂತೆ ಕ್ರಮ ವಹಿಸಬೇಕೆಂದು ಪ್ರವಾಸೋಧ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಮ್ಮೇಳನಕ್ಕೆ ಆಗಮಿಸುವ ಸರ್ವರಿಗೂ ಲಭ್ಯವಾಗುವಂತೆ ಕಾಪಿ, ತಿಂಡಿ, ಊಟೋಪಚಾರ ನಿರಂತರವಾಗಿ ಬೆಳಗ್ಗೆಯಿಂದ ರಾತ್ರಿಯವರೆಗೂ ನಡೆಯಲಿದ್ದು ಇದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದರು.

ಶಾಸಕ ರಘುಪತಿ ಭಟ್ ಮಾತನಾಡಿ, ಸರ್ಕಾರ ಯಕ್ಷಗಾನ ಸಮ್ಮೇಳನ ನಡೆಸಲು ಕಳೆದ ಆಯವ್ಯಯದಲ್ಲಿ ಘೋಷಿಸುವುದರೊಂದಿಗೆ ನಮ್ಮ ಜಿಲ್ಲೆಯಲ್ಲಿಯೇ ಆಯೋಜಿಸಲು ಅವಕಾಶ ಮಾಡಿಕೊಟ್ಟಿದೆ ಇದನ್ನು ಮಾದರಿ  ಸಮ್ಮೇಳನವಾಗುವ ರೀತಿಯಲ್ಲಿ ನಡೆಸಲು ಅಧಿಕಾರಿಗಳು, ಸಂಘಟಕರು , ಯಕ್ಷಗಾನ ಕಲಾವಿದರು ಹಾಗೂ ಆಸಕ್ತರು ಎಲ್ಲಾ ರೀತಿಯ ನೆರವು ಹಾಗೂ ಸಹಕಾರ ನೀಡಬೇಕೆಂದರು.

ಸಮ್ಮೇಳನವನ್ನು ವಿಶೇಷವಾಗಿ ಯುವ ಜನರಲ್ಲಿ ಕಲಾ ಆಸಕ್ತಿ ತರಬೇಕೆಂಬ ಉದ್ದೇಶದಿದಂಲೇ ಆಯೋಜಿಸಲಾಗುತ್ತಿದ್ದು, ಯುವಜನರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಸಮ್ಮೇಳನದ ಧ್ವಜವನ್ನು ಬಿಡುಗಡೆ ಮಾಡಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಜಿಲ್ಲಾ ಪಂಚಯತ್ ಮುಖ್ಯ ಕಾರ್ಯನಿರ್ವಹಾಣಧಿಕಾರಿ ಪ್ರಸನ್ನ ಹೆಚ್. ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಯಕ್ಷಗಾನ ಅಕಾಡೆಮಿಯ ಆಡಳಿತಾಧಿಕಾರಿ ಅಶೋಕ್ ಎನ್ ಛಲವಾದಿ, ರಿಜಿಸ್ಟಾçರ್ ಶಿವರುದ್ರಪ್ಪ, ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಜಿ.ಎಲ್. ಹೆಗಡೆ, ಪ್ರಧಾನ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ, ಸಂಚಾಲಕ ಮುರಳಿ ಕಡೆಕಾರ್, ಸದಸ್ಯರಾದ ಧನಂಜಯ ಶೆಟ್ಟಿ, ಪ್ರೊ.ಎಂ.ಎಲ್.ಸಾಮಗ, ನಾರಾಯಣ ಎಂ ಹೆಗಡೆ, ಮಹಾವೀರ ಪಂಡಿ, ಸುರೇಂದ್ರ ಪಣಿಯೂರು, ಪೌರಾಯುಕ್ತ ಡಾ.ಉದಯ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!