ಚಾರ್ಮಾಡಿ ಘಾಟ್: ಷರತ್ತಿಗೊಳಪಟ್ಟು ಲಘು ವಾಹನಗಳ ಸಂಚಾರಕ್ಕೆ ಅವಕಾಶ
ಮಂಗಳೂರು, ಆ.13, 2021: ಮಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಆಗಸ್ಟ್ 12 ರಿಂದ ಮುಂದಿನ ಆದೇಶದ ವರೆಗೆ ಕಿ.ಮೀ 75(ಚಾರ್ಮಾಡಿ ಗ್ರಾಮ)ರಿಂದ ಕಿಮೀ 86.20 (ದಕ್ಷಿಣ ಕನ್ನಡ ಜಿಲ್ಲಾ ಗಡಿ) ರವರೆಗಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಜೆ 7 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಅನುಮತಿ ನೀಡಲಾದ ವಾಹನಗಳ ವರ್ಗೀಕರಣ ಇಂತಿದೆ:
- ನಾಲ್ಕು ಚಕ್ರದ ವಾಹನಗಳು, ಟೆಂಪೋ ಟ್ರಾವೆಲರ್ಸ್, ಆಂಬುಲೆನ್ಸ್, ಕಾರು, ಜೀಪು, ವ್ಯಾನ್, ಎಲ್.ಸಿ.ವಿ (ಮಿನಿ ವ್ಯಾನ್) ಹಾಗೂ ದ್ವಿ ಚಕ್ರ ವಾಹನಗಳು ದಿನದ 24 ಗಂಟೆಯೂ ಷರತ್ತಿಗೊಳಪಟ್ಟು ಸಂಚರಿಸಬಹುದು.
- ಸಾರ್ವಜನಿಕರು ಸಂಚರಿಸುವ ಕೆ.ಎಸ್.ಆರ್.ಟಿ.ಸಿ. ಕೆಂಪು ಬಸ್ಸು, ಆರು ಚಕ್ರದ ಲಾರಿಗಳು ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಸಂಚರಿಸಬಹುದು.
- ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೋ ಕಂಟೈನರ್ಸ್ ಹಾಗೂ ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್, ಟ್ರಕ್ ಟ್ರೈಲರ್, ಕೆ.ಎಸ್.ಆರ್.ಟಿ.ಸಿ ರಾಜಹಂಸ ಮತ್ತು ಎಲ್ಲಾ ಬಗೆಯ ಅಧಿಕ ಭಾರದ ಸರಕು ಸಾಗಣೆ ವಾಹನಗಳ ಸಂಚಾರವನ್ನು ದಿನದ 24 ಗಂಟೆಯೂ ನಿರ್ಬಂಧಿಸಲಾಗಿದೆ.
ನಿಬಂಧನೆಗಳು:
ಈ ರಸ್ತೆಯ ಮೂಲಕ ಪ್ರಯಾಣಿಸುವ ಪ್ರಯಾಣಿಕರು ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸಿ ಜಲಪಾತ ಮತ್ತು ಪ್ರಾಕೃತಿಕ ವೀಕ್ಷಣೆ ಮಾಡಲು ಅವಕಾಶವಿರುವುದಿಲ್ಲ.
ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಸದಾ ಇಬ್ಬನಿ ಕವಿದಿರುವ ಪ್ರಯುಕ್ತ ರಾತ್ರಿ ವೇಳೆಯಲ್ಲಿ ವಾಹನಗಳನ್ನು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುಕ್ಕಾಗಿ ಆರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಿ ಪ್ರಯಾಣಿಕರಿಗೆ ಎಚ್ಚರಿಕೆ ನೀಡಲಾಗುವುದು.
ರಸ್ತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸರಹದ್ದಿನಲ್ಲಿ ಸುಗಮ ಸಂಚಾರಕ್ಕೆ ಸೂಕ್ತ ಪೊಲೀಸ್ ಗಸ್ತು ವ್ಯವಸ್ಥೆ ಮಾಡಲಾಗುವುದು.
ನಿಭಂದನೆಗಳನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಶಿಸ್ತಿನ/ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಗಳ ಮೇರೆಗೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.