ಪರಿಸರ ಪ್ರೇಮಿ ಪನ್ನಗ

 ಪರಿಸರ ಪ್ರೇಮಿ ಪನ್ನಗ
Share this post

ನಾಗರ ಪಂಚಮಿ ಪ್ರಯುಕ್ತ ವಿಶೇಷ ಲೇಖನ:ರಾಜೇಶ್ ಭಟ್ ಪಣಿಯಾಡಿ ಅವರಿಂದ

ಕರಾವಳಿ, ಮಲೆನಾಡಿನ ಪಚ್ಚೆ ಸಿರಿ ಎಲ್ಲರನ್ನೂ, ಅದರಲ್ಲೂ ಪ್ರಕೃತಿ ಪ್ರೇಮಿಗಳನ್ನು ಕೈಬೀಸಿ ಕರೆಯುವ ಸುಂದರ ಸೊಬಗಿನ ತಾಣ. ಅದಕ್ಕೆ ಪ್ರಕೃತಿಯನ್ನು ಪ್ರೀತಿಸುವ ಜನರ ಹಬ್ಬ ಹರಿದಿನಗಳೂ ಇದಕ್ಕೆ ಕಾರಣ. ಶ್ರಾವಣ ಮಾಸದ ಶುಕ್ಲ ಪಂಚಮಿಯಂದು ಆಚರಿಸಲ್ಪಡುವ ಹಬ್ಬ… ನಾಗರ ಪಂಚಮಿ. ಇದು ಹಬ್ಬಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವುದರ ಮೂಲಕ ಹಬ್ಬಹರಿದಿನಗಳ ಸಂಭ್ರಮಕ್ಕೆ ನಾಂದಿ ಹಾಡುತ್ತದೆ.

ಪ್ರಕೃತಿಯಲ್ಲಿ ದೇವರನ್ನು ಕಾಣುವ ಮಹಾ ಚಿಂತನೆಯಿಂದ ಈ ಹಬ್ಬ ಆಚರಣೆಗೆ ಬಂದಿರಬಹುದು. ಸದಾ ತಂಪನ್ನು ಬಯಸುವ ಸರಿಸೃಪ … ನಾಗ. ಇದು ಬನವನ್ನು ಆಶ್ರಯಿಸಿಕೊಂಡು ಹುತ್ತವನ್ನು ತನ್ನ ಮನೆ ಮಾಡಿಕೊಂಡಿರುತ್ತದೆ. ಕರುನಾಡಿನ ಜನರು ಕಲಿಯುಗದಲ್ಲಿ ಕಣ್ಣಿಗೆ ಕಾಣುವ ದೇವರು ನಾಗದೇವರು ಎಂದು ಬಲವಾಗಿ ನಂಬಿದವರು. ಹಾಗಾಗಿ ಈ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.

ನಾಗರ ಪಂಚಮಿಗೆ ಗರುಡ ಪಂಚಮಿ ಎಂದೂ ಕರೆಯುತ್ತಾರೆ. ಇದು ಒಡ ಹುಟ್ಟಿದವರ ಹಬ್ಬ ಎಂದೂ ಪ್ರತೀತಿ ಇದೆ. ಉತ್ತರ ಕರ್ನಾಟಕದಲ್ಲಿ ಇದಕ್ಕೆ ಜೋಕಾಲಿ ಹಬ್ಬ ಎಂದೂ ಕರೆಯುತ್ತಾರೆ. ಹುತ್ತಕ್ಕೆ ಅಥವಾ ನಾಗ ಶಿಲಾಪ್ರತಿಮೆಗೆ ಹಾಲೆರೆದು ಆರಶಿನ ಹಚ್ಚಿ ಫಲ ಪುಷ್ಪಗಳಿಂದ ಪೂಜಿಸಿದ ನಂತರ ಉಪಯೋಗಿಸಿದ ಅರಶಿನಕ್ಕೆ , ಹುತ್ತದ ಮಣ್ಣಿಗೆ ಔಷಧೀಯ ಗುಣವಿದ್ದು ಮುಖ್ಯವಾಗಿ ಮಣ್ಣನ್ನು ಹೊಕ್ಕುಳಿಗೆ ಅಥವಾ ಬೆನ್ನಿಗೆ ಹಚ್ಚಿ ಶುಭ ಹಾರೈಸುವ ಕ್ರಮವೂ ಇದೆ.

ನಾಗದೇವತೆಗಳು ಈ ಭೂಮಿಯನ್ನು ನಾವು ಅಂದರೆ ಮನುಷ್ಯಾದಿ ಇತರ ಪ್ರಾಣಿಗಳ ವಾಸಕ್ಕಾಗಿ ಬಿಟ್ಟು ಕೊಟ್ಟ ಸ್ಥಳ. ಭೂಮಿ ತಾಯಿಯನ್ನು ಹೊತ್ತುಕೊಂಡವನು ಸಂಕರ್ಷಣ ರೂಪಿ ನಾರಾಯಣ. ಆದಿಶೇಷನ ಮೈಯಲ್ಲಿ ನಾರಾಯಣ ಮಲಗಿದ್ದರೆ ತಲೆಯಲ್ಲಿ ಭೂಮಿ ತಾಯಿ ವಿರಾಜಮಾನಳಾಗಿದ್ದಾಳೆ. ಹಾಗಾಗಿ ನಮಗೆ ಈ ಪೃಥ್ವಿಜೆಯಿಂದ ಯಾವುದೇ ಶ್ರೇಯಸ್ಸು ಸಿಗಬೇಕಾದರೆ ಮೊದಲು ಭೂಮಿಯ ಒಡೆಯ ನಾಗರಾಜನ ಅನುಗ್ರಹ ಬೇಕೇ ಬೇಕು.

ಪದ್ಮ ಪುರಾಣದ ಪ್ರಕಾರ ಕಶ್ಯಪ ಹಾಗೂ ಕದ್ರು ದಂಪತಿಗಳ ಮಕ್ಕಳು ಈ ಸರ್ಪ ಸಂಕುಲ. ಅನಂತ, ವಾಸುಕಿ, ತಕ್ಷಕ, ಕಾರ್ಕೋಟಕ, ಪದ್ಮ, ಮಹಾಪದ್ಮ, ಶಂಕ, ಕುಲಿಕ ಎಂಬ ಅಷ್ಟ ಕುಲದ ಪ್ರವರ್ತಕರು ಇವರ ಈ ಎಂಟು ಮಕ್ಕಳು. ಪ್ರಾರಂಭದಲ್ಲಿ ಬ್ರಹ್ಮದೇವರು ಸರ್ಪ ಸಂಕುಲಗಳಿಗೆ ಆತ್ಮರಕ್ಷಣೆಗಾಗಿ ವಿಷದ ಹಲ್ಲನ್ನು ಕೊಟ್ಟಿದ್ದು ಅದನ್ನು ದುರುಪಯೋಗ ಪಡಿಸಿಕೊಂಡ ಸರ್ಪಗಳು ಪಶುಪಕ್ಷಿ ಮನುಷ್ಯ ಹೀಗೆ ಸಕಲ ಜೀವಜಂತುಗಳನ್ನು ಕಚ್ಚಿ ಸಾಯಿಸುತ್ತಿದ್ದವಂತೆ.

ಪರಿಸ್ಥಿತಿ ಮಿತಿ ಮೀರಿದಾಗ ಮನುಷ್ಯರು ತಮ್ಮ ರಕ್ಷಣೆಗೆ ಬ್ರಹ್ಮ ದೇವರಲ್ಲಿ ಮೊರೆ ಹೋದಾಗ ಕೋಪಗ್ರಸ್ತನಾದ ಬ್ರಹ್ಮ ದುಷ್ಟ ಸರ್ಪ ಸಂಕುಲ ನಾಶವಾಗಲಿ ಎಂದು ಶಾಪವಿತ್ತು ಪಾತಾಳ, ರಸಾತಳಕೆ ತೆರಳಲು ತಿಳಿಸುತ್ತಾನಂತೆ. ಆ ಶಾಪದ ಫಲವೇ ವೈವಸ್ವತ ಮನ್ವಂತರದಲ್ಲಿ ತಂದೆ ಪರೀಕ್ಷಿತ ರಾಜನ ಸಾವಿಗೆ ಕಾರಣವಾದ ಸರ್ಪಕುಲ ನಾಶ ಮಾಡಲು ಮಗನಾದ ರಾಜ ಜನಮೇಜಯ ಸರ್ಪ ಯಜ್ಞ ಮಾಡಲು ಸರ್ಪಗಳೆಲ್ಲ ಯಜ್ಞದಲ್ಲಿ ಆಹುತಿಯಾಗುತ್ತವೆ. ಆದರೆ ಆ ಸಮಯದಲ್ಲಿ ಆಸ್ತಿಕ ಬಂಧುಗಳ ಕೋರಿಕೆಗೆ ಮಣಿದು ಆತ ಯಜ್ಞ ನಿಲ್ಲಿಸಲು, ಹಿಂದೊಮ್ಮೆ ಬ್ರಹ್ಮದೇವರ ಯಜ್ಞ ಒಂದರಲ್ಲಿ ಸಾತ್ವಿಕರಾದ ಅಷ್ಟ ಕುಲ ನಾಗರು ಸಹಕರಿಸಿದ ಪುಣ್ಯಶೇಷದಿಂದ ಅವರು ಈ ಸರ್ಪ ಯಜ್ಞದಿಂದ ಮುಕ್ತಗೊಂಡು ಬ್ರಹ್ಮದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾದರಂತೆ. ಆ ದಿನವನ್ನು ನಾಡಿನೆಲ್ಲೆಡೆ ನಾಗರ ಪಂಚಮಿ ಎಂದು ಆಚರಿಸಲಾಗುತ್ತದೆ. ಅಲ್ಲದೆ ಇದೇ ನಾಗರ ಪಂಚಮಿಯ ದಿನ ಈ ನಾಗದೇವತೆಗಳಿಗೆ ವಿಶೇಷ ಅನುಗ್ರಹ ಶಕ್ತಿಯನ್ನು ಬ್ರಹ್ಮದೇವ ನೀಡಿದನಂತೆ ಎನ್ನುವುದು ಪುರಾಣದ ಹಿನ್ನೆಲೆ.

ಮನೋಕಾರಕನಾದ ನಾಗ ಮನುಷ್ಯನ ಮನಸ್ಸನ್ನು ಓದಿ ತಿಳಿಯುವ ಶಕ್ತಿಯನ್ನು ಹೊಂದಿದ್ದು ಈ ಪುಣ್ಯಪರ್ವದಂದು ಯಾರೆಲ್ಲ ಭಕ್ತಿ ಶ್ರದ್ಧೆಯಿಂದ ನಾಗನಿಗೆ ಎಳನೀರು ಹಾಗೂ ಹಾಲನ್ನು ಎರೆದು ಅರಶಿನ ಫಲ ಪುಷ್ಪಾದಿಗಳಿಂದ ಪೂಜಿಸುತ್ತಾರೋ ಅವರ ಸಕಲ ಮನೋ ಅಭೀಷ್ಟಗಳನ್ನು ದಯಪಾಲಿಸುತ್ತಾನೆ ಎನ್ನುವುದು ಈ ನಾಗಾರಾಧನೆಯ ಹಿಂದಿರುವ ತಾತ್ಪರ್ಯ ಎನ್ನುವುದು ಬಲ್ಲವರ ಚಿಂತನೆ.

.

Subscribe to our newsletter!

Other related posts

error: Content is protected !!