ಝಿಕಾ ವೈರಸ್: ಅಗತ್ಯ ಮುನ್ನೆಚ್ಚರಿಕಾ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
ಮಂಗಳೂರು, ಜು.15, 2021: ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ಕೇರಳದಲ್ಲಿ ಝೀಕಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಗಡಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ನಿರ್ದೇಶನ ನೀಡಿದರು.
ಅವರು ಗುರುವಾರ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಡಿ ಭಾಗದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಕೇರಳದಿಂದ ಸಾಕಷ್ಟು ಜನರು ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕಾರ್ಯಗಳಿಗೆ ಬಂದು – ಹೋಗುವುದು ಸಾಮಾನ್ಯ, ಝಿಕಾ ವೈರಸ್ ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ಈ ಸೊಳ್ಳೆಗಳು ನೀರಿನ ಸಿಮೆಂಟ್ ತೊಟ್ಟಿ, ಬ್ಯಾರಲ್, ಇತರೆ ನೀರಿನ ಸಂಗ್ರಹಣೆಗಳು, ಹೂವಿನ ಕುಂಡಗಳು, ಮನೆಯ ಮೇಲ್ಯಾವಣಿಗಳಲ್ಲಿ ನಿಂತ ನೀರು, ಟಯರ್, ಘನತ್ಯಾಜ್ಯಗಳಿಂದ ಉತ್ಪತ್ತಿಯಾಗುತ್ತವೆ ಎಂದರು.
ಕೇರಳದಿಂದ ಬರುವ ಎಲ್ಲಾ ರೋಗಿಗಳ ಬಗ್ಗೆ ನಿಗಾವಹಿಸಬೇಕು, ಯಾವುದೇ ಜ್ವರವಿದ್ದರೂ ಸಮೀಪದ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ನಾಗರಿಕರಿಗೆ ತಿಳಿಸಬೇಕು.
ಸೊಳ್ಳೆ ಹಾಗೂ ಅದರ ಲಾರ್ವಾವನ್ನು ಮೊದಲು ನಿರ್ನಾಮ ಮಾಡಬೇಕು, ಅದಕ್ಕಾಗಿ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ತಾಣಗಳಲ್ಲಿ ನೀರು ನಿಲ್ಲದಂತೆ ಮಾಡಬೇಕು, ಆ ಪ್ರದೇಶಗಳಲ್ಲಿ ಫಾಗಿಂಗ್ ಮಾಡಬೇಕು, ಸೊಳ್ಳೆ ಪರದೆ ಬಳಕೆ ಮಾಡಬೇಕು, ಆಸ್ಪತ್ರೆಗಳಲ್ಲಿ ಸೊಳ್ಳೆಗಳು ಬಾರದಂತಹ ವಾತಾವರಣ ನಿರ್ಮಾಣ ಹಾಗೂ ಸೊಳ್ಳೆ ಪರದೆಗಳ ಬಳಕೆ ಮಾಡಬೇಕು, ಐಎಂಎ ಹಾಗೂ ಜಿಲ್ಲೆಯ ಖಾಸಗಿ ಆಸ್ಪತೆಗಳ ಸಂಸ್ಥೆಗೆ ಈ ಬಗ್ಗೆ ತಿಳಿಸಬೇಕು, ಸೊಳ್ಳೆಗಳ ನಿಯಂತ್ರಿಸುವಿಕೆಯಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಅತಿ ಮುಖ್ಯವಾಗಿದ್ದು, ಅವರು ಅತಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದರು.
ಕೇರಳ ರಾಜ್ಯದಿಂದ ಬರುವ ಎಲ್ಲಾ ರೋಗಿಗಳ ಬಗ್ಗೆ ನಿಗಾವಹಿಸಬೇಕು, ಯಾವುದೇ ಜ್ವರವಿದ್ದರೂ ಸಮೀಪದ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ನಾಗರಿಕರಿಗೆ ತಿಳಿಸಬೇಕು, ಎಲ್ಲಾ ಸ್ಯಾನಿಂಗ್ ಹಾಗೂ ಹೆರಿಗೆ ಆಸ್ಪತ್ರೆಗಳ ಮುಖ್ಯಸ್ಥರು ತಮ್ಮಲ್ಲಿ ದಾಖಲಾಗುವ ಗರ್ಭಿಣಿಯರಲ್ಲಿ ಅಂಗಾಂಗ ನ್ಯೂನತೆ (ಮೈಕ್ರೋ ಸಫಾಲಿ) ಕಾಣಿಸಿಕೊಂಡಿದ್ದರೆ ಕೂಡಲೇ ಸಂಬಂಧಪಟ್ಟವರ ರಕ್ತ ಪರೀಕ್ಷೆಯನ್ನು ನಡೆಸಲು ಕ್ರಮ ತೆಗೆದುಕೊಂಡು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕೆಂದರು.
ಸಾರ್ವಜನಿಕರು ತಮ್ಮ ಮನೆಯ ಮೇಲ್ಚಾವಣಿಗಳು ಹಾಗೂ ಪರಿಸರದಲ್ಲಿ ನೀರು ನಿಲ್ಲದಂತೆ ಹಾಗೂ ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು, ಕಟ್ಟಡಗಳಲ್ಲಿ ನೆಲ ಅಂತಸ್ತಿನಲ್ಲಿ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗದೆ ಶೇಖರಣೆಗೊಂಡಿದ್ದಲ್ಲಿ ನೀರು ಹರಿದುಹೋಗುವಂತೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ತರಹದ ಲಕ್ಷಣಗಳನ್ನು ಝಿಕಾ ಸೋಂಕು ಹೊಂದಿದ್ದು, ಮುಖ್ಯವಾಗಿ ರೋಗಿಯ ಪ್ರವಾಸದ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಡಿಸಿಪಿ ದಿನೇಶ್ ಕುಮಾರ್, ವಿಭಾಗಾಧಿಕಾರಿ ಮದನ್ ಮೋಹನ್, ಜಿಲ್ಲಾ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಮಲೇರಿಯಾ ನಿಯಂತ್ರಣಾಧಿಕಾರಿ ನವೀನ್ ಚಂದ್ರ, ಡಿಯುಡಿಸಿಯ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.
ಜಿಲ್ಲೆಯ ತಾಲೂಕು ಮಟ್ಟದ ಅಧಿಕಾರಿಗಳು ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.