ಎಂ.ಆರ್. ಪಿ.ಎಲ್ ನೇಮಕಾತಿ: ಸ್ಥಳೀಯರಿಗೆ ಆದ್ಯತೆ ನೀಡಲು ಮುಸ್ಲಿಮ್ ಒಕ್ಕೂಟ ಆಗ್ರಹ
ಮಂಗಳೂರು, ಮೇ 23, 2021: ಎಂ.ಆರ್. ಪಿ.ಎಲ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಭೂಮಿ ಕಳಕೊಂಡ ಸ್ಥಳೀಯ ಹಾಗೂ ಕರ್ನಾಟಕದವರನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ. ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೇಮಕಾತಿಗೊಂಡ 184 ಹುದ್ದೆಗಳಲ್ಲಿ ಕರ್ನಾಟಕದ ಕೇವಲ 13 ಜನರನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಅದರಲ್ಲೂ ದ.ಕ ಮತ್ತು ಉಡುಪಿ ಜಿಲ್ಲೆಯ ತಲಾ ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉತ್ತರ ಪ್ರದೇಶ, ಬಿಹಾರ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಕೆ. ಅಶ್ರಫ್
ದ.ಕ.ಜಿಲ್ಲೆಯ ಜನರ ಬಹಳ ಮಹತ್ವಾಕಾಂಕ್ಷಿ ಎಂ.ಆರ್.ಪಿ.ಎಲ್. ಯೋಜನೆಗಾಗಿ ಇಲ್ಲಿನ ಜನ ಸಾವಿರಾರು ಎಕ್ರೆ ಜಮೀನನ್ನು ಬಿಟ್ಟುಕೊಟ್ಟಿದ್ದಾರೆ. ನೂರಾರು ವರ್ಷಗಳಿಂದ ಬಾಳಿ ಬದುಕಿದ ತಮ್ಮ ಮನೆ, ಮಠ, ವ್ಯಾಪಾರ, ವ್ಯವಹಾರ, ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಈ ಯೋಜನೆಯಿಂದ ತಮಗೆ ಪ್ರಯೋಜನವಾಗಬಹುದು, ಉದ್ಯೋಗ ಸಿಗಬಹುದು ಎಂಬಿತ್ಯಾದಿ ಕನಸುಗಳನ್ನು ಕಟ್ಟಿಕೊಂಡಿದ್ದ ಸ್ಥಳೀಯ ಜನರನ್ನು ಇದೀಗ ಸಂಪೂರ್ಣವಾಗಿ ವಂಚಿಸಲಾಗಿದೆ. ಇದರ ಹಿಂದೆ ಭ್ರಷ್ಟಾಚಾರದ ಗಬ್ಬು ವಾಸನೆ ಬಡಿಯುತ್ತಿದೆ. ಈ ಅನ್ಯಾಯದ ವಿರುದ್ಧ ನಾವೆಲ್ಲರೂ ಜಾತಿ ಮತ ಭೇದ ಮರೆತು ಒಗ್ಗಟ್ಟಿನಿಂದ ಹೋರಾಡುವ ಅಗತ್ಯವಿದೆ ಎಂದು ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸರಕಾರದ ಹಿಂದೀಕರಣದ ವಿರುದ್ಧ ಹೋರಾಟ: ಅಥಾವುಲ್ಲಾ ಜೋಕಟ್ಟೆ
ಸ್ಥಳೀಯ ಜನ ಪ್ರತಿನಿಧಿಗಳು ಮತ್ತು ಸಂಸದರ ಮೌನ ಪ್ರಶ್ನಿಸಿರುವ ಅಶ್ರಫ್ ಸರೋಜಿನಿ ಮಹಿಷಿ ಮತ್ತು ಜಸ್ಟೀಸ್ ಸಾಚಾರ್ ವರದಿಯಲ್ಲಿ ಸಾರ್ವಜನಿಕ ಉದ್ಯೋಗ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂಬ ಶಿಫಾರಸು ಅಸ್ತಿತ್ವದಲ್ಲಿ ಇದ್ದರೂ ಕೇಂದ್ರ ಸರಕಾರ ಸ್ಥಳೀಯರಿಗೆ ಅನ್ಯಾಯ ಎಸಗಿದೆ ಎಂದರು.
“ಇದೀಗ ನೇಮಕಾತಿಗೊಂಡ 184 ಹುದ್ದೆಗಳಲ್ಲಿ ಕರ್ನಾಟಕದ ಕೇವಲ 13 ಜನರನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಅದರಲ್ಲೂ ದ.ಕ ಮತ್ತು ಉಡುಪಿ ಜಿಲ್ಲೆಯ ತಲಾ ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉತ್ತರ ಪ್ರದೇಶ, ಬಿಹಾರ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ತಾರತಮ್ಯದ ವಿರುದ್ಧ ಜಿಲ್ಲೆಯ ಜನರನ್ನೆಲ್ಲ ಸೇರಿಸಿ ಉಗ್ರ ಹೋರಾಟ ಮಾಡಲಾಗುವುದು,” ಎಂದು ಎಚ್ಚರಿಸಿದರು.