ಕ್ಯಾಂಪ್ಕೊದಿಂದ ರೂ.ಒಂದು ಕೋಟಿ ವೆಚ್ಚದಲ್ಲಿ ವೈದ್ಯಕೀಯ ಆಕ್ಸಿಜನ್ ಪೂರೈಕೆ ಯೋಜನೆ

 ಕ್ಯಾಂಪ್ಕೊದಿಂದ ರೂ.ಒಂದು ಕೋಟಿ ವೆಚ್ಚದಲ್ಲಿ ವೈದ್ಯಕೀಯ ಆಕ್ಸಿಜನ್ ಪೂರೈಕೆ ಯೋಜನೆ
Share this post

ಮಂಗಳೂರು, ಮೇ 07, 2021: ದೇಶದಲ್ಲಿ ಕೋವಿಡ್ ಎರಡನೇ ಅಲೆಯಿಂದ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವೆಡೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಉಂಟಾಗಿದೆ. ಸರಕಾರಗಳು ಸಾಕಷ್ಟು ಆಮ್ಲಜನಕವನ್ನು ಪೂರೈಸುವ ವ್ಯವಸ್ಥೆಗಳನ್ನು ಕಲ್ಪಿಸಲು ಶ್ರಮಿಸುತ್ತಿರುವ ಸಂದರ್ಭದಲ್ಲಿ ಮಂಗಳೂರಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ಕೋವಿಡ್ ವಿರೋಧದ ಹೋರಾಟದಲ್ಲಿ ಸರಕಾರದೊಂದಿಗೆ ಕೈ ಜೋಡಿಸಲು ನಿರ್ಧರಿಸಿದೆ.

ಅಂದಾಜು ₹1 ಕೋಟಿ ವೆಚ್ಚದಲ್ಲಿ ರಾಜ್ಯದ ವಿವಿಧೆಡೆಗಳಲ್ಲಿನ ಆಸ್ಪತ್ರೆಗಳಿಗೆ ವೈದ್ಯಕೀಯ ಆಮ್ಲಜನಕವನ್ನು ಪೂರೈಸುವ ನಿಟ್ಟಿನಲ್ಲಿ ಯೋಜನೆಯನ್ನು ಹಾಕಿಕೊಂಡಿದೆ.

ಈ ಯೋಜನೆಯ ಪ್ರಕಾರ, ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದಿಸುವ ಪ್ಲಾಂಟ್ ಅಳವಡಿಸಲು ನಿರ್ಧರಿಸಲಾಗಿದ್ದು, ಉಳಿದಂತೆ ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಆಸ್ಪತ್ರೆಗಳಿಗೆ ಅಮ್ಲಜನಕದ ಜಂಬೋ ಸಿಲಿಂಡರ್ ಗಳನ್ನು ಕ್ಯಾಂಪ್ಕೊ ಪೂರೈಸಲಿದೆ.

ಸದಾ ರೈತರ ಪರವಾಗಿರುವ ಸಹಕಾರಿ ಸಂಸ್ಥೆ ಕ್ಯಾಂಪ್ಕೊ, ಲಾಕ್ಡೌನ್ ಸಮಯದಲ್ಲೂ ನಿಗದಿತವಾದ ಸ್ಥಿರ ದರದಲ್ಲಿ ರೈತರಿಂದ ಬೆಳೆ ಖರೀದಿ ಮಾಡಿ ಕೃಷಿಕರ ಸಹಾಯಕ್ಕೆ ನಿಂತಿದ್ದು, ಇದೀಗ ಕೋವಿಡ್ ಬಾಧಿಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ರೋಗಿಗಳಿಗೆ ಉಸಿರಾಟದ ತೊಂದರೆಯುಂಟಾಗದಂತೆ ಆಮ್ಲಜನಕವನ್ನು ಪೂರೈಸುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಈ ನಿಟ್ಟಿನಲ್ಲಿ, ಸಂಸ್ಥೆಯು ಈಗಾಗಲೇ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಡಿ.ವಿ.ಸದಾನಂದ ಗೌಡ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಈ ಭಾಗದ ಶಾಸಕರುಗಳೊಂದಿಗೆ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಲ್ಲಿ ಕಾರ್ಯತತ್ಪರವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿ, ವ್ಯವಸ್ಥಾಪಕ ನಿರ್ದೇಶಕರಾದ ಎಚ್.ಎಮ್. ಕೃಷ್ಣ ಕುಮಾರ್ ಮತ್ತು ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!