ಲಾಕ್ ಡೌನ್, ಸೆಮಿ ಲಾಕ್ ಡೌನ್ ನಿಂದ ಬಾದಿತ ಎಲ್ಲಾ ಕಾರ್ಮಿಕರಿಗೂ ಪೂರ್ಣ ವೇತನ ನೀಡಿ: ಶಿವಕುಮಾರ್ ಎಸ್. ಎಂ ಆಗ್ರಹ

 ಲಾಕ್ ಡೌನ್, ಸೆಮಿ ಲಾಕ್ ಡೌನ್ ನಿಂದ ಬಾದಿತ ಎಲ್ಲಾ ಕಾರ್ಮಿಕರಿಗೂ ಪೂರ್ಣ ವೇತನ ನೀಡಿ: ಶಿವಕುಮಾರ್ ಎಸ್. ಎಂ ಆಗ್ರಹ
Share this post

ಬೆಳ್ತಂಗಡಿ, ಮೇ ೦6, 2021: ಲಾಕ್ ಡೌನ್ ಘೋಷಿಸಿರುವ ಸರಕಾರ ಪ್ರತಿ ಕುಟುಂಬಕ್ಕೆ ಮಾಸಿಕ ತಲಾ ₹ 10 ಸಾವಿರ ನೀಡಬೇಕು. ಎಲ್ಲಾ ಕಾರ್ಮಿಕರಿಗೂ ಪೂರ್ಣ ವೇತನದ ಜೊತೆಗೆ ಮುಂಚೂಣಿ ಕಾರ್ಮಿಕರು, ಕೋವಿಡ್ ವಾರಿಯರ್ಸ್‌ ಗಳಿಗೆ ಸುರಕ್ಷಿತ ಕಿಟ್ ಕೊಡಬೇಕು ಎಂದು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯದರ್ಶಿ ಶಿವಕುಮಾರ್ ಎಸ್. ಎಂ ಹೇಳಿದರು.

ಅವರು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ಅನನ್ಯ ದಲ್ಲಿ ನಡೆದ ಮನೆಮನೆಗಳಲ್ಲಿ ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತಿದ್ದರು.

ಸರ್ಕಾರಗಳ ನಿರ್ಲಕ್ಷ್ಯಕ್ಕೆ ಇಂದು ಸಾಲು ಸಾಲಾಗಿ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ , ಇದು ಸರ್ಕಾರಿ ಪ್ರಾಯೋಜಿತ ವ್ಯವಸ್ಥಿತ ಕೊಲೆಯಾಗಿದ್ದು , ಇದರ ಹೊಣೆಯನ್ನು ರಾಜ್ಯ, ಕೇಂದ್ರ ಸರ್ಕಾರಗಳು ಹೊತ್ತುಕೊಳ್ಳಬೇಕು

ವಸಂತ ಆಚಾರಿ

“ಜವಾಬ್ದಾರಿಯುತ ಸರ್ಕಾರ ಬೇಜಾವ್ದಾರಿತನದಿಂದ ವರ್ತಿಸುವುದು ಸರಿಯಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ಲಾಕ್ ಡೌನ್ ಜೊತೆಗೆ ಕೇರಳ ಮಾದರಿಯಂತೆ ಆಹಾರ ಪದಾರ್ಥಗಳನ್ನು ಜನರಿಗೆ ಉಚಿತವಾಗಿ ನೀಡಬೇಕು. ಪ್ರತಿ ಕುಟುಂಬಕ್ಕೆ ಮಾಸಿಕ ತಲಾ 10 ಸಾವಿರ ನೇರ ನಗದು ನೀಡಬೇಕು. ಲಾಕ್ ಡೌನ್, ಸೆಮಿ ಲಾಕ್ ಡೌನ್ ನಿಂದ ಬಾದಿತ ಎಲ್ಲಾ ಕಾರ್ಮಿಕರಿಗೂ ಪೂರ್ಣ ವೇತನದ ಜೊತೆಗೆ ಮುಂಚೂಣಿ ಕಾರ್ಮಿಕರು, ಕೋವಿಡ್ ವಾರಿಯರ್ಸ್‌ ಗಳಿಗೆ ಸುರಕ್ಷಿತ ಕಿಟ್ ಗಳನ್ನು ನೀಡುವ ಮೂಲಕ ಜನರ ಬದುಕುವ ಹಕ್ಕನ್ನು ಖಾತ್ರಿಗೊಳಿಸಬೇಕು,” ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ , ದ.ಕ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಸರ್ಕಾರದ ಧೋರಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

“ಕೊರೋನಾ ಲಾಕ್ ಡೌನ್ ಹೆಸರಿನಲ್ಲಿ ರಾಜ್ಯ ಸರ್ಕಾರ ಅತ್ಯಂತ ಬೇಜವ್ದಾರಿತನದಿಂದ ವರ್ತಿಸುತ್ತಿದೆ. ರಾಜ್ಯದ ಬಡಜನರಿಗೆ ಸೂಕ್ತ ರೀತಿಯ ಸಾಮಾಜಿಕ ಭದ್ರತಾ ಕ್ರಮಗಳನ್ನು ಕೈಗೊಳ್ಳದೆ ಲಾಕ್ ಡೌನ್ ಘೋಷಿಸುವ ಮೂಲಕ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೊರೋನಾ ಸಾವಿನ ಜೊತೆಗೆ ಆಹಾರವಿಲ್ಲದೆ ಸಾವನ್ನಪ್ಪುವ ಪರಿಸ್ಥಿತಿ ಉದ್ಭವಿಸಬಹುದು,” ಎಂದು ಎಚ್ಚರಿಸಿದರು.

“ಕೊರೋನಾ 2 ನೇ ಅಲೆ ಹರಡುವುದನ್ನು ತಡೆಯಲು ಕೇಂದ್ರ, ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ. ಕಳೆದೊಂದು ವರ್ಷಗಳಿಂದ ಚಪ್ಪಾಳೆ, ಘಂಟೆ ಬಾರಿಸುವುದು, ದೀಪ ಹಚ್ಚುವುದು ಬಿಟ್ಟರೆ ಬೇರೇನೂ ಆಗಿರಲಿಲ್ಲ. ಸರ್ಕಾರಗಳ ನಿರ್ಲಕ್ಷ್ಯಕ್ಕೆ ಇಂದು ಸಾಲು ಸಾಲಾಗಿ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ , ಇದು ಸರ್ಕಾರಿ ಪ್ರಾಯೋಜಿತ ವ್ಯವಸ್ಥಿತ ಕೊಲೆಯಾಗಿದ್ದು , ಇದರ ಹೊಣೆಯನ್ನು ರಾಜ್ಯ, ಕೇಂದ್ರ ಸರ್ಕಾರಗಳು ಹೊತ್ತುಕೊಳ್ಳಬೇಕು,” ಎಂದು ಆಗ್ರಹಿಸಿದರು.

“ದೇಶದ ಜನರಿಗೆ ಕನಿಷ್ಠ ಉಚಿತ ಕೋವಿಡ್ ಲಸಿಕೆ ನೀಡಲು ಸಾಧ್ಯವಿಲ್ಲ ಎಂದಾದರೆ ದೇಶದ ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದನ್ನು ಸೂಚಿಸುತ್ತದೆ ಎಂದರು. ಆಸ್ಪತ್ರೆಗಳಲ್ಲಿ ಸೂಕ್ತ ಬೆಡ್ ಸಿಗದೆ ರಸ್ತೆ ಬದಿಯಲ್ಲಿ ಜನರು ಸಾಯುತ್ತಿರುವಾಗ , ಆಮ್ಲಜನಕ ಇಲ್ಲದೆ ಸಾವಿರಾರು ಜನರು ಸಾಯುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನ , ಪ್ರಧಾನಿ ನಿವಾಸ ನಿರ್ಮಾಣದಲ್ಲಿ ಬ್ಯೂಸಿಯಾಗಿದ್ದಾರೆ ಇಂತಹ ಪ್ರಧಾನಿಯನ್ನು ಜಗತ್ತು ಕಂಡಿಲ್ಲ,” ಎಂದು ಟೀಕಿಸಿದರು.

ಪ್ರತಿಭಟನೆಯ ಮೊದಲು ಇಂದು ನಿಧನರಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ , ವೈಚಾರಿಕ, ಪ್ರಗತಿಪರ ಸಾಹಿತಿ , ಸಿಪಿಐ(ಎಂ) ಸದಸ್ಯ ಡಾ.ಜಿ ಭಾಸ್ಕರ ಮಯ್ಯ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ತಾಲೂಕು ಸಮಿತಿ ಸದಸ್ಯ ಶೇಖರ್ ಎಲ್ , ವಿವಿಧ ಸಾಮೂಹಿಕ ಸಂಘಟನೆಗಳ ಮುಖಂಡರಾದ ಸುಕನ್ಯಾ ಹೆಚ್ , ಸುಜೀತ್ ಉಜಿರೆ, ಸುಹಾಸ್ ಬೆಳ್ತಂಗಡಿ , ಜಯನ್ ಮುಂಡಾಜೆ , ಕುಸುಮ ಮಾಚಾರ್ , ಭಾರತಿ ಬೆಳ್ತಂಗಡಿ , ಭರತ್ ಬೆಳ್ತಂಗಡಿ, ಉದ್ಯಮಿ , ಪ್ರಗತಿಪರ ಚಿಂತಕ ವೆಂಕಟೇಶ್ ಮಯ್ಯ ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!