ಕುಮಟಾ ತಾಲೂಕಿನ ಉಪ್ಪಿನ ಪಟ್ಟಣದಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ
ಕಾರವಾರ ಏಪ್ರಿಲ್ 15, 2021: ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ ಪರಿಕಲ್ಪನೆಯಡಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ ಎಂ. ಪಿ ಏಪ್ರಿಲ್ 17 ರಂದು ಕುಮಟಾ ತಾಲೂಕಿನ ಉಪ್ಪಿನ ಪಟ್ಟಣ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಬೆಳಗ್ಗೆ 10 ರಿಂದ ಸಾಯಂಕಾಲ 5 ಗಂಟೆಯವರೆಗೆ ಗ್ರಾಮದಲ್ಲಿಯೆ ಇದ್ದು, ಗ್ರಾಮದ ಜನರ ಅಳಲನ್ನು ಆಲಿಸಲಿದ್ದಾರೆ. ಜಿಲ್ಲಾಧಿಕಾರಿಗಳೊಂದಿಗೆ ಕುಮಟಾ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರು ಸೇರಿದಂತೆ ಕಂದಾಯ ಇಲಾಖೆಯ ಇತರೆ ಅಧಿಕಾರಿಗಳು ಹಾಜರಿರಲಿದ್ದು, ಗ್ರಾಮದಲ್ಲಿಯೇ ಮೊಕ್ಕಾಂ ಹೂಡಲಿದ್ದಾರೆ.
ಗ್ರಾಮಸ್ಥರಲ್ಲಿ ಅರಿವು: ಗ್ರಾಮ ವಾಸ್ತವ್ಯದ ಭಾಗವಾಗಿ ಆಧಾರ್ ಕಾರ್ಡ್ ಅನುಕೂಲತೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಆನ್ಲೈನ್ ಮುಖಾಂತರ ಪಡೆಯುವ ಬಗ್ಗೆ, ನಿರಂತರ ಮತದಾರರ ಪಟ್ಟಿ ಪರಿಷ್ಕರಣೆ, ಉದ್ಯೋಗ ಖಾತ್ರಿ ಯೋಜನೆ ವಸತಿ ಯೋಜನೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ, ತೋಟಗಾರಿಕೆ, ಪಶು ಸಂಗೋಪನಾ ಇಲಾಖೆ ಸೇರಿದಂತೆ ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯಬಹುದಾದ ವಿವಿಧ ಇಲಾಖೆಗಳ ಸವಲತ್ತುಗಳ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗುತ್ತದೆ.
ಶಾಲೆ-ಅಂಗನವಾಡಿಗೂ ಭೇಟಿ: ಗ್ರಾಮದಲ್ಲಿರುವ ಸರ್ಕಾರಿ ವಸತಿ ನಿಲಯ, ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳಿಗೂ ಜಿಲ್ಲಾಧಿಕಾರಿ ಭೇಟಿ ನೀಡಿ ಶಿಕ್ಷಣ ಬೋಧನೆ, ಆಹಾರ ಮತ್ತು ಕಲಿಕೆಯ ಗುಣಮಟ್ಟ ಪರಿಶೀಲಿಸಲಿದ್ದಾರೆ.
ಗ್ರಾಮ ವಾಸ್ತವ್ಯದಲ್ಲಿ ಭಾಗಿಯಾಗಲು ಡಿ.ಸಿ.ಮನವಿ: ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಜನರ ಮನೆ ಬಾಗಿಲಿಗೆ ಬರುತ್ತಿರುವುದರಿಂದ, ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಕುಂದುಕೊರತೆಗಳ ಪರಿಹಾರಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ಖುದ್ದಾಗಿ ಬಂದು ಬಗೆಹರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.