ಬಾಲಕನ ಕೊಲೆ: ಸಮಗ್ರ ತನಿಖೆಗೆ ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ ಆಗ್ರಹ
ಮಂಗಳೂರು, ಏಪ್ರಿಲ್ 05, 2021 : ಶನಿವಾರ ರಾತ್ರಿ ನಾಪತ್ತೆಯಾಗಿದ್ದ ಕೋಟೆಕಾರು ನಿವಾಸಿ ಬಸ್ ಚಾಲಕ ಹನೀಫ್ ರವರ ಮಗ ಆಕಿಫ್ (12) ಎಂಬ ಬಾಲಕ ನಿನ್ನೆ ಬೆಳಿಗ್ಗೆ ತಲಪಾಡಿ ಜಮೀಯತುಲ್ ಫಲಾಹ್ ಶಾಲೆಯ ವಠಾರದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಾಲಕನ ಕೊಲೆ ವಿವಿಧ ಸಂಶಯಗಳಿಗೆ ಕಾರಣವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ ಅಶ್ರಫ್ ಹೇಳಿದ್ದಾರೆ.
“ಕೊಲೆಯ ಮೂಲವನ್ನು ಕೆದಕಿದಾಗ ಆನ್ ಲೈನ್ ಗೇಮಿಂಗ್ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಕೊಲೆಮಾಡಲಾಗಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಬಗ್ಗೆ ಪೊಲೀಸು ಇಲಾಖೆ ಈಗಾಗಲೆ ಒಬ್ಬನನ್ನು ಬಂಧಿಲಾಗಿದ್ದು, ದಕ್ಷ ಅಧಿಕಾರಿಯಾಗಿರುವ ಮಂಗಳೂರು ಕಮಿಷನರ್ ಎಲ್ಲಾ ಆಯಾಮಗಳಲ್ಲಿ ತನಿಖೆಯನ್ನು ಕೈಗೆತ್ತಿಕೊಂಡಿರವ ಕಾರ್ಯವೈಖರಿಯಲ್ಲಿ ನಮಗೆ ವಿಶ್ವಾಸವಿದೆ. ಆದುದರಿಂದ ಕೂಡಲೆ ಇದರ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಹಚ್ಚಿ ಸಮಗ್ರ ತನಿಖೆಯನ್ನು ನಡೆಸಿ ನ್ಯಾಯವನ್ನು ಒದಗಿಸಿಕೊಡಬೇಕು,” ಎಂದು ವಿನಂತಿಸಿದ್ದಾರೆ.
“ಕಳೆದ 10 ದಿನಗಳಿಂದ ಮುಸ್ಲಿಮ್ ಯುವಕರ ಮೇಲೆ ಅಲ್ಲಲ್ಲಿ ಹಿಂಸಾತ್ಮಕ ಕೃತ್ಯ ನಡೆದಿರುವುದರ ಬಗ್ಗೆ ಈಗಾಗಲೆ ಉನ್ನತ ಪೋಲೀಸ್ ಅಧಿಕಾರಿಗಳಿಗೆ ಮುಸ್ಲಿಮ್ ಒಕ್ಕೂಟವು ಮನದಟ್ಟು ಮಾಡಿರುತ್ತದೆ. ಎಳೆಯ ಪ್ರಾಯದ ಯುವಕನನ್ನೆ ಅಪಹರಿಸಿ ಕೊಲೆ ಮಾಡಿರುವುದು ಇಡೀ ಸಮಾಜವೆ ತಲೆ ತಗ್ಗಿಸುವಂತೆ ಮಾಡಿದೆ. ಹೀಗೆ ಅಮಾಯಕರನ್ನು ಕೊಲೆಮಾಡಿ ವಿಘ್ನ ಸಂತೋಷ ಪಡುವ ದುಷ್ಟ ಶಕ್ತಿಗಳು ಅಂತ್ಯವಾಗಬೇಕು. ಈ ಕೃತ್ಯದಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ ಕೂಡ ಗ್ರಹ ಇಲಾಖೆ ಶೀಘ್ರದಲ್ಲಿ ಬಯಲಿಗಳೆಯಬೇಕು,” ಎಂದು ಅಶ್ರಫ್ ಹೇಳಿದ್ದಾರೆ.
ಚಿಕ್ಕ ಪ್ರಾಯದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ಕೃತ್ಯವನ್ನು ಅಶ್ರಫ್ ತೀವ್ರವಾಗಿ ಖಂಡಿಸಿದಲ್ಲದೆ ಸಂತಾಪವನ್ನು ವ್ಯಕ್ತ ಪಡಿಸಿ, ಆ ಯುವಕನ ಹೆತ್ತವರಿಗೂ ಕುಟುಂಬಕ್ಕೂ ದು:ಖವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹು ದಯಪಾಲಿಸಲಿ, ಸ್ವರ್ಗವನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತಾ ತಪ್ಪಿತಸ್ತರನ್ನು ಕೂಡಲೇ ಬಂಧಿಸಿ ಆ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ವಿನಂತಿಸಿದ್ದಾರೆ.