ನೆರೆ ಜಿಲ್ಲೆಯಿಂದ ಆಗಮಿಸುವವರು RT-PCR ನೆಗೆಟಿವ್ ಪರೀಕ್ಷಾ ವರದಿ ನೀಡುವುದು ಕಡ್ಡಾಯ

 ನೆರೆ ಜಿಲ್ಲೆಯಿಂದ ಆಗಮಿಸುವವರು RT-PCR ನೆಗೆಟಿವ್ ಪರೀಕ್ಷಾ ವರದಿ ನೀಡುವುದು ಕಡ್ಡಾಯ
Share this post

ಮಂಗಳೂರು, ಮಾರ್ಚ್ 15, 2021: ಕೇರಳದಿಂದ ಜಿಲ್ಲೆಗೆ ಆಗಮಿಸುವ ಪ್ರತೀಯೊಬ್ಬರು 72 ಗಂಟೆಯೊಳಗೆ ನಡೆಸಲಾದ RT-PCR ನೆಗೆಟಿವ್ ಪರೀಕ್ಷಾ ವರದಿಯನ್ನು ಹೊಂದಿರುವುದು ಕಡ್ಡಾಯವಾಗಿದೆ  ಹಾಗೂ RAT ಪರೀಕ್ಷಾ ವರದಿಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚಿಸಿದರು.

ಜಿಲ್ಲೆಯ ಗಡಿ ಪ್ರದೇಶದಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿ ಸಾರ್ವಜನಿಕರು ವಿರಳವಾಗಿ ಸಂಚರಿಸುವ ರಸ್ತೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅನಾವಶ್ಯಕ ರಸ್ತೆಗಳನ್ನು ಮುಚ್ಚುವಂತೆ ಹೇಳಿದ ಅವರು ತಾಲೂಕುವಾರು ಚೆಕ್‍ಪೋಸ್ಟ್ ಗಳೊಂದಿಗೆ ಹೆಚ್ಚುವರಿ ಚೆಕ್‍ಪೋಸ್ಟ್ ಗಳನ್ನು ತೆರೆಯಬೇಕು ಎಂದರು.

ಹೊರರಾಜ್ಯಗಳಿಂದ  ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಸ್ಕ್ರೀನಿಂಗ್ ಮಾಡುವುದರೊಂದಿಗೆ 15 ದಿನಗಳಿಗೊಮ್ಮೆ ಪರೀಕ್ಷೆ ಮಾಡಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯಾರ್ಥಿಗಳು ತಮ್ಮ ಸ್ವಂತ ಊರಿಗೆ ಹೋದಂತಹ ಸಂದರ್ಭದಲ್ಲಿ ಮರಳಿ ಜಿಲ್ಲೆಗೆ ಬರುವಾಗ ಕಡ್ಡಾಯವಾಗಿ ನೆಗೆಟಿವ್ ಪರೀಕ್ಷಾ ವರದಿಯನ್ನು ತರಬೇಕು ಹಾಗೂ ಅವರ ಜೊತೆಗೆ ಜಿಲ್ಲೆಗೆ ಆಗಮಿಸುವ ಪೋಷಕರು ನೆಗೆಟಿವ್ ವರದಿಯನ್ನು ತರಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಹೆಚ್ಚು-ಹೆಚ್ಚು ಕೋವಿಡ್ ಟೆಸ್ಟ್ ಗಳನ್ನು ಮಾಡುವುದರೊಂದಿಗೆ ರೋಗಿಗಳನ್ನು ಗುರುತಿಸಿ ಅವರಿಗೆ ಚಿಕಿತ್ಸೆ ನೀಡಬೇಕು. ಅಲ್ಲದೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚುವ ಕಾರ್ಯ ಚುರುಕುಗೋಳಿಸಬೇಕು ಎಂದರು.

ಗ್ರಾಮ ಪಂಚಾಯತ್‍ನ ಟಾಸ್ಕ್ ಫೋರ್ಸ್‍ಗಳಲ್ಲಿ  ಪ್ರತೀ ಶನಿವಾರ ಸಭೆ ನಡೆಸಿ ಕೋವಿಡ್ ನ 2ನೇ ಅಲೆ ಸಂಭವಿಸದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಮಾರ್ಗಸೂಚಿಗಳ ಬಗ್ಗೆ ಚರ್ಚಿಸಬೇಕು. ಹಾಗೂ ಸಾರ್ವಜನಿಕರಿಗೆ ವ್ಯಾಕ್ಸಿನೇಷನ್ ತೆಗೆದುಕೊಳ್ಳಲು  ಉತ್ತೇಜನ ನೀಡುವುದರೊಂದಿಗೆ ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂಬುದರ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಕೇರಳ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ಹೇಚ್ಚಾಗಿವೆ ಈ ಹಿನ್ನಲೆಯಲ್ಲಿ ಜಿಲ್ಲೆಗೆ ಹೊಂದಿಕೊಂಡಿರುವ ಚೆಕ್‍ಪೋಸ್ಟ್ ಗಳಲ್ಲಿ ಹಾಗೂ ಇನ್ನು ಹೆಚ್ಚಿನ ಅವಶ್ಯಕತೆ ಇರುವಲ್ಲಿ ನೂತನವಾಗಿ ಚೆಕ್‍ಪೋಸ್ಟ್ಗಳನ್ನು ನಿರ್ಮಾಣಮಾಡಿ ಪ್ರತಿಯೊಬ್ಬರ ಕೋವಿಡ್-19 ವರದಿಯನ್ನು ಪರಿಶೀಲಿಸಬೇಕು. ಅಲ್ಲದೆ ಪ್ರತಿದಿನ ದೈನಂದಿನ ಕೆಲಸಕಾರ್ಯಗಳಿಗೆ ಹಾಗೂ ವಿದ್ಯಾಭ್ಯಾಸಕ್ಕೆ ಸಂಚರಿಸುವವರ ಮಾಹಿತಿಯನ್ನು ಕ್ರೋಢೀಕರಿಸಿಕೊಂಡು ಕಡತದಲ್ಲಿ ನಮೂದಿಸುವಂತೆ ಸೂಚಿಸಿದರು.

ಸಭೆ ಸಮಾರಂಭಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರದಂತೆ ಕಂದಾಯ ಇಲಾಖೆ, ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಹಾಗೂ ಗ್ರಾಮಪಂಚಾಯತಿ ಅಧಿಕಾರಿಯವರು ನಿಗಾವಹಿಸಬೇಕು. ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ದಂಡ ವಿಧಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ,  ಮಂಗಳೂರು ಮಹಾನಗರಪಾಲಿಕೆ ಆಯುಕ್ತರು (ಪ್ರಭಾರ) ದಿನೇಶ್ ಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯರಿ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪಾಪಾ ಭೋವಿ, ತಾಲೂಕು ಆರೋಗ್ಯಾಧಿಕಾರಿಗಳು, ತಹಶೀಲ್ದಾರರು  ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!