ನಮ್ಮೂರ ಚೆಲುವೆ ಚಿತ್ತಾರಿ…

ನದಿಗಳು ಮಾನವನ ಜೀವನ ರೂಪುಗೊಳ್ಳಲು ಮತ್ತು ಬೆಳೆಯಲು ಸಹಕರಿಸುವ ಪ್ರಕೃತಿ ವರದಾನ. ಪ್ರಾಚೀನ ಕಾಲದಲ್ಲಿ ಅದೆಷ್ಟು ನಾಗರಿಕತೆಗಳ ಉಗಮ ಮತ್ತು ನಾಶ ಎಲ್ಲವೂ ನದಿಗಳ ಬಯಲಲ್ಲೇ ಆಗಿರುವುದು ವಿಶೇಷ. ಇಂತಹ ಪವಿತ್ರ ನದಿಗಳು ಇಂದಿಗೂ ನಮ್ಮನ್ನು ಸಲಹುತ್ತಿವೆ.
ನಾನು ಕೂಡ ಬೆಳೆದದ್ದು ನದಿಯ ಕಿನಾರೆಯ ಒಂದು ಗ್ರಾಮದಲ್ಲಿ. ಅಲ್ಲಿ ಮೈತುಂಬಿ, ಸೂರ್ಯನಿಗೆ ಕನ್ನಡಿಯಾಗಿ ಮೀನುಗಾರರ ಉಸಿರಿಗೆ ಕೃಷಿಕರ ಪಾಲಿನ ಭಾಗ್ಯ ದೇವತೆಯಾಗಿ ನಮ್ಮೂರ ತುಂಬಾ ಹಸಿರ ಹೊದಿಕೆ ಹೊದಿಸಿ ಹರಿದು ‘ಚಿತ್ತಾರಿ’ ಕೊನೆಗೆ ಕಡಲ ಒಡಲ ಸೇರುತ್ತಾಳೆ.
ಬಾಲ್ಯದ ದಿನದಲ್ಲಿ ನನಗೂ ಆ ನದಿಗೂ ಬಹಳ ನಂಟು. ಅದು ಗೆಳೆತನ ಎಂದರು ಕರೆಯಬಹುದು. ಅಲ್ಲಿ ಆಡಿದ ಆಟ .ಮೀನು ಹಿಡಿವ ಉತ್ಸಾಹ, ದೋಣಿಯಲ್ಲಿ ಅತ್ತ-ಇತ್ತ ಪಯಣ ಹೀಗೆ ನೆನಪುಗಳು ಸಾವಿರ. ಇನ್ನೂ ಮುಂಗಾರಿನಲ್ಲಂತೂ ತುಂಬಿ ಹರಿಯುತ್ತಿದ್ದ ಆ ನದಿಯ ನೀರು ನಮ್ಮ ಹಿತ್ತಲ ತನಕ ಬರುತ್ತಿತ್ತು. ಆ ನೀರಲ್ಲಿ ಆಡಿದ ದಿನಗಳು ಇಂದಿಗೂ ಹಸಿರಾಗಿವೆ. ಹರಿವ ನೀರಲ್ಲಿ ಬಿಟ್ಟ ದೋಣಿಯ ಸಾಲು. ನದಿಯಲ್ಲಿ ಬಿದ್ದ ಕಾಲ್ಚೆಂಡು, ಕ್ರಿಕೆಟ್ ಬಾಲು. ಅದ ತೆಗೆಯಲು ಪಟ್ಟ ಹರಸಾಹಸ ನಮ್ಮ ಗೋಳು. ಇಂದಿಗೂ ಮನ ನೆನೆಯುತ್ತದೆ.
ಆದರೆ ನಾ ಕಂಡ ಚಿತ್ತಾರಿ ನದಿಯ ಗತಿ, ಪರಿಸ್ಥಿತಿ ಎಲ್ಲವೂ ಬದಲಾಗಿದೆ. ನದಿ ದಂಡೆಯ ಹಸಿರು ಬಯಲುಗಳಲ್ಲಿ ಅರ್ಧದಷ್ಟು ಮಣ್ಣು ತುಂಬಿಸಿ ಸಮತಟ್ಟು ಮಾಡಲಾಗಿದೆ. ಇನ್ನು ಮರಳಿಗಾಗಿ ನದಿಯ ಒಡಲನ್ನು ಮನಸೋ ಇಚ್ಛೆ ಬಗೆಯಲಾಗುತ್ತಿದೆ. ಬಯಲುಸೀಮೆ ಯಲ್ಲಿದ್ದ ಕೆರೆಕಟ್ಟೆಗಳನ್ನು ಮುಚ್ಚುವುದು, ಹರಿವ ಜೀವನದಿಗೆ ತ್ಯಾಜ್ಯವಸ್ತುವನ್ನು ಸುರಿಯುವುದು ನಡೆದಿದೆ. ಇವುಗಳೆಲ್ಲವೂ ನದಿಯ ಒಡಲು ಉಸಿರುಗಟ್ಟುವಂತೆ ಮಾಡುತ್ತಿವೆ. ಮೊದಲಿದ್ದ ವೈಭವ ಶೋಭೆ ಎಲ್ಲವೂ ಮಾನವನ ಹಸ್ತಕ್ಷೇಪದಿಂದ ಕ್ಷೀಣಿಸಿದೆ.
ಈ ಪರಿಸ್ಥಿತಿ ಮುಂದುವರಿದುದೇ ಆದರೆ ನದಿಯ ಹರಿವು ಕ್ಷೀಣಿಸುವುದರಲ್ಲಿ ಯಾವುದೇ ಸಂದೇಹ ಬೇಡ. ಇಷ್ಟು ವರ್ಷ ಇತಿಹಾಸವಿರುವ ನದಿಯನ್ನು ನಾವು ಉಳಿಸಬೇಕು. ಒಂದು ವೇಳೆ ನಾವಿಂದು ಎಚ್ಚೆತ್ತುಕೊಳ್ಳದಿದ್ದರೆ ವಿನಾಶಕ್ಕೆ ನಾವೇ ಮುನ್ನುಡಿ ಬರೆದಂತೆ ಆಗುವುದಂತೂ ಸತ್ಯ.
