ಧರ್ಮಸ್ಥಳಕ್ಕೆ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಹಣಮಂತ ಕೊಟಬಾಗಿ ಭೇಟಿ,ಅನುದಾನ ಹಸ್ತಾಂತರ
ಮಂಗಳೂರು ಡಿಸೆಂಬರ್ 31, 2020: ಕರ್ನಾಟಕ ರಾಜ್ಯ ಸರಕಾರದ ಮದ್ಯಪಾನ ಸಂಯಮ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಹಣಮಂತ ತಮ್ಮಾಜಿ ಕೊಟಬಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ನೀಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಮತ್ತು ಸಂಯಮ ಮಂಡಳಿಯ ಸಹಯೋಗದೊಂದಿಗೆ ಸಮುದಾಯ ಮದ್ಯವರ್ಜನ ಶಿಬಿರಗಳನ್ನು ನಡೆಸಲು ಪೂರಕವಾಗಿ ಚರ್ಚೆ ನಡೆಸಲಾಯಿತು.
ಮದ್ಯವರ್ಜನ ಶಿಬಿರ ಸಂಯೋಜನೆಗೆ ಸರಕಾರದಿಂದ ಅನುಮೋದಿತ ಕ್ರಿಯಾಯೋಜನೆಯಲ್ಲಿ ನಿಗದಿಪಡಿಸಿದಂತೆ ರೂ.5 ಲಕ್ಷ ಮೊತ್ತವನ್ನು ವೇದಿಕೆಗೆ ಅನುದಾನವಾಗಿ ನೀಡಿದರು.
ಪ್ರಸ್ತುತ ವಿದ್ಯಮಾನದಲ್ಲಿ ಮಾದಕ ವಸ್ತುಗಳ ಹಾವಳಿ ಬಹಳಷ್ಟು ಇರುವುದರಿಂದ ಇಂದು ಸಮಾಜದಲ್ಲಿ ವಿವಿಧ ಪ್ರಕಾರದ ಮಾದಕ ವಸ್ತುಗಳನ್ನು ಬಳಕೆ ಮಾಡುವ ವ್ಯಸನಿಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುಂದಕ್ಕೆ ಮಂಡಳಿಯ ಹೆಸರನ್ನು ’ವ್ಯಸನಮುಕ್ತ ಸಲಹಾ ಮಂಡಳಿ’ ಈ ರೀತಿಯ ಯಾವುದೇ ಹೆಸರು ಇಂದಿನ ಕಾಲಮಾನಕ್ಕೆ ಸರಿಯಾಗಿ ಮರುನಾಮಕರಣ ಮಾಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ರಾಜ್ಯಾದ್ಯಂತ ಮಾಹಿತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚುಹೆಚ್ಚಾಗಿ ನಡೆಸಲಾಗುವುದೆಂದು ಮಂಡಳಿಯ ಅಧ್ಯಕ್ಷರು ಅಭಿಪ್ರಾಯ ಪಟ್ಟರು.
ಕರ್ನಾಟಕ ರಾಜ್ಯದಲ್ಲಿರುವ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಜೊತೆಯಲ್ಲಿ ಚರ್ಚಿಸಿಕೊಂಡು ತಾಲೂಕು ಮಟ್ಟದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಯುವಜನತೆಗೆ ನೀಡಬೇಕಾಗಿದೆ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕಿರುಚಿತ್ರಗಳನ್ನು ರಚಿಸಿದ್ದು, ವ್ಯಸನದ ಭೀಕರತೆಯನ್ನು ಜನಮಾನಸದಲ್ಲಿ ಬಿತ್ತರಿಸಿದಾಗ ವ್ಯಾಪಕ ಜಾಗೃತಿ ಬರಲು ಸಾಧ್ಯ. ಮಂಡಳಿಯ ಹೆಸರು ಬದಲಾವಣೆ ಪ್ರಸ್ತಾಪ ಸ್ವಾಗತಾರ್ಹವಾಗಿದೆ. ಈ ನಿಟ್ಟಿನಲ್ಲಿ ಸರಕಾರಕ್ಕೂ ಪತ್ರ ಬರೆಯಲಿದ್ದೇನೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯ ಪಟ್ಟರು.
ಕೋವಿಡ್ ಸಮಸ್ಯೆಯಿಂದ ಕಳೆದ 9 ತಿಂಗಳಿನಿಂದ ಮದ್ಯವರ್ಜನ ಶಿಬಿರಗಳನ್ನು ನಿಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮ ಅನುಸರಿಸಿಕೊಂಡು ಶಿಬಿರ ನಡೆಸುವ ಬಗ್ಗೆ ಯೋಚಿಸಲಾಗುವುದು. ಲಾಕ್‍ಡೌನ್ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಮೂಲಕ ಸರ್ವೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದಾಗ ಶೇ.85 ಮಂದಿ ಪಾನ ನಿಷೇಧದಿಂದ ಕುಟುಂಬಗಳಲ್ಲಿ ಸಂತೋಷ, ಸಮಾಜದಲ್ಲಿ ಶಾಂತಿ, ನೆಮ್ಮದಿ ಸಾಧ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ವಿಚಾರದಂತೆ ಮುಂದಕ್ಕೆ ವ್ಯಸನಮುಕ್ತ ಕುಟುಂಬ ನಿರ್ಮಾಣದ ಕಲ್ಪನೆಯೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.) ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಹೆಚ್. ಮಂಜುನಾಥ್‍ರವರು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಸಂಯಮ ಮಂಡಳಿಯ ಕಾರ್ಯದರ್ಶಿ ಶಂಕರಪ್ಪ, ಮತ್ತು ಜನಜಾಗೃತಿ ವೇದಿಕೆ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಸ್, ಯೋಜನಾಧಿಕಾರಿಗಳಾದ ಮೋಹನ್, ಜೈವಂತ್ ಪಟಗಾರ್ ಉಪಸ್ಥಿತರಿದ್ದರು.