ಧರ್ಮಸ್ಥಳ ಲಕ್ಷದೀಪೋತ್ಸವ : ಉಜಿರೆಯಿಂದ ಧರ್ಮಸ್ಥಳಕ್ಕೆ 8ನೇ ವರ್ಷದ ಪಾದಯಾತ್ರೆ
ಬೆಳ್ತಂಗಡಿ, ಡಿಸೆಂಬರ್ 10, 2020: ಕಷ್ಟಕಾಲದಲ್ಲಿ ನಂಬಿದವರಿಗೆ ಇಂಬು ಕೊಟ್ಟು ಅಭಯದಾನ ನೀಡುವ ಪವಿತ್ರ ಕ್ಷೇತ್ರ ಧರ್ಮಸ್ಥಳ. ಅನಿರೀಕ್ಷಿತವಾಗಿ, ಅಪಾಯದ ಮಟ್ಟವನ್ನು ಅಳತೆ ಮಾಡಲೂ ಸಾಧ್ಯವಾಗದ ಕೊರೊನಾ ಭೀತಿಯಿಂದಾಗಿ ಜನರೆಲ್ಲ ಭಯ ಮತ್ತು ಆತಂಕದಿಂದ ಸೋತಿದ್ದಾರೆ. ಭೀತಿಯ ವಾತಾವರಣ ನಿವಾರಿಸಿ ಅವರಲ್ಲಿ ಪ್ರೀತಿ, ಭಕ್ತಿ, ವಿಶ್ವಾಸದೊಂದಿಗೆ ಅವಾಲುಗಳನ್ನು ಧೈರ್ಯದಿಂದ ಎದುರಿಸಲು ಧರ್ಮಸ್ಥಳದಿಂದ ಅಭಯದಾನ ನೀಡಲಾಗಿದೆ. ಸಹಸ್ರಾರು ಫಲಾನುಭವಿಗಳಿಂದ ನಮಗೆ ದೊರಕಿದ ಧನ್ಯತೆಯ ಮೌನ ಸಂದೇಶವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಗುರುವಾರ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಭಕ್ತರನ್ನು ಮತ್ತು ಅಭಿಮಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೊರೊನಾದಿಂದಾಗಿ ಧರ್ಮಸ್ಥಳದಲ್ಲಿ ಕಳೆದ ವರ್ಷ ದೇವರ ಅಪ್ಪಣೆಯಂತೆ ಜಾತ್ರೆ, ಉತ್ಸವಗಳನ್ನು ರದ್ದು ಮಾಡಲಾಗಿದೆ. ಆದರೆ ಶ್ರೀ ಸ್ವಾಮಿಯ ಸೇವೆಯ ಜೊತೆಗೆ ಭಕ್ತರ ಸೇವೆಯನ್ನು ಮುಂದುವರಿಸಲಾಗಿದೆ. ಇದರಿಂದ ನಮಗೆ ಧನ್ಯತೆ ಮೂಡಿಬಂದಿದೆ. ದಾನ-ಧರ್ಮಾದಿ ಸತ್ಕಾರ್ಯಗಳು ಅವಿರತವಾಗಿ ಇಲ್ಲಿ ನಡೆಯುತ್ತವೆ. ದೇವರ ಸೇವೆಯೊಂದಿಗೆ ಭಕ್ತರ ಭಯ, ಆಪತ್ತು ನಿವಾರಿಸುವುದು ಕೂಡಾ ನಮ್ಮ ಉದ್ದೇಶವಾಗಿದೆ. ಭಕ್ತಿ, ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ಹಿತ-ಮಿತ ಆಹಾರ ಸೇವನೆಯೊಂದಿಗೆ ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟನಿಟ್ಟಾಗಿ ಎಲ್ಲರೂ ಪಾಲಿಸಿ ಆರೋಗ್ಯ ರಕ್ಷಣೆಯೊಂದಿಗೆ ಆಯುಷ್ಯ ವೃದ್ಧಿ ಮಾಡಿಕೊಳ್ಳಬೇಕು. ಕೊರೊನಾ ಬಗ್ಗೆ ಭಯ, ಆತಂಕ ಬೇಡ. ಆದರೆ, ಮುನ್ನೆಚ್ಚರಿಕೆ ಇರಲಿ. ಸದ್ಯ ಜನಜೀವನ ಸಹಜ ಸ್ಥಿತಿಯತ್ತ ಬರುತ್ತಿರುವುದು ಸ್ವಾಗತಾರ್ಹವಾಗಿದೆ. ಎಲ್ಲರೂ ಭಯ ಮುಕ್ತ ವಾತಾವರಣದಲ್ಲಿ ಶಾಂತಿ, ನೆಮ್ಮದಿಯ ಜೀವನ ನಡೆಸುವಂತೆ ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಹೆಗ್ಗಡೆಯವರು ಪ್ರಾರ್ಥಿಸಿದರು.
ಡಿ. ಹರ್ಷೇಂದ್ರ ಕುಮಾರ್, ಉಜಿರೆಯ ಶರತ್‍ಕೃಷ್ಣ ಪಡ್ವೆಟ್ನಾಯ, ಡಾ. ಬಿ. ಯಶೋವರ್ಮ ಮತ್ತು ರಾಜೇಶ್ ಪೈ ಉಪಸ್ಥಿತರಿದ್ದರು.