ಪೊಲೀಸ್ ಇಲಾಖಾ ನೇಮಕಾತಿಯಲ್ಲಿ ಗೃಹರಕ್ಷಕರಿಗೆ ಮೀಸಲಾತಿ ನೀಡಿ: ಗೃಹ ಸಚಿವರಿಗೆ ಮಾಧವ ನಾಯಕ ಮನವಿ

 ಪೊಲೀಸ್ ಇಲಾಖಾ ನೇಮಕಾತಿಯಲ್ಲಿ ಗೃಹರಕ್ಷಕರಿಗೆ ಮೀಸಲಾತಿ ನೀಡಿ: ಗೃಹ ಸಚಿವರಿಗೆ ಮಾಧವ ನಾಯಕ ಮನವಿ
Share this post
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಹಸ್ತಾಂತರಿಸಿದ ಮಾಧವ ನಾಯಕ

ಕಾರವಾರ, ಡಿಸೆಂಬರ್ 04, 2020: ಗೃಹರಕ್ಷಕ ದಳದ ಹೆಸರನ್ನು ಕರ್ನಾಟಕ ಪ್ಯಾರಾ ಪೊಲೀಸ್ ಪಡೆಗೆ ಬದಲಾಯಿಸಲು ಮತ್ತು ಪೊಲೀಸ್ ಇಲಾಖಾ ನೇಮಕಾತಿಯಲ್ಲಿ ವಿಶೇಷ ಮೀಸಲಾತಿ ಸಹಿತ ಗೃಹರಕ್ಷಕರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ತೆಲಂಗಾಣ ಮಾದರಿಯಂತೆ ಒದಗಿಸುವಂತೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಕರ್ನಾಟಕ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.

ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿರುವವರ ಪರ ಹೋರಾಟ ಕೈಗೆತ್ತಿಕೊಂಡಿರುವ ಮಾಧವ ನಾಯಕ ಅವರು ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಕಾರವಾರದಲ್ಲಿ ಭೇಟಿಯಾಗಿ ಮನವಿ ಪಾತ್ರವನ್ನು ನೀಡಿದರು.

“ರಾಜ್ಯದಲ್ಲಿ ಅನೇಕ ಉನ್ನತ ಶಿಕ್ಷಣ ಪಡೆದ ಯುವಕರು ಹೋಮ್ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ನಮ್ಮ ನೆರೆಯ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ, ಕೇರಳ ಮತ್ತು ತೆಲಂಗಾಣಕ್ಕೆ ಹೋಲಿಸಿದರೆ ಅವರಿಗೆ ಸಿಗುವ ಭತ್ಯೆ ಮತ್ತು ಸೌಲಭ್ಯಗಳು ತೀರಾ ಕಡಿಮೆ. ಹೋಮ್ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿರುವವರಲ್ಲಿ ಹೆಚ್ಚಿನವರು ಆರ್ಥಿಕವಾಗಿ ಹಿಂದುಳಿದ ವರ್ಗದವರು “ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

“ಸಮಾಜಕ್ಕೆ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಇರುವ ಗೃಹರಕ್ಷಕ ದಳದ ಸಿಬ್ಬಂದಿಗಳು ನೆರೆಯ ರಾಜ್ಯಗಳಲ್ಲಿ ತಮ್ಮ ಸಹವರ್ತಿಗಳು ಪಡೆಯುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹೋಮ್ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿರುವ ಅನೇಕರಿಗೆ ಸರಿಯಾದ ಡ್ಯೂಟಿ ಇರುವುದಿಲ್ಲ, ಇದ್ದರೂ ಸಕಾಲದಲ್ಲಿ ಸಂಬಳವಿಲ್ಲ. ಸುಮಾರು ಒಂದು ವರ್ಷದಿಂದ ಕೆಲವರು ಸಂಬಳ ಪಡೆದಿಲ್ಲ,” ಎಂದು ಹೇಳಿದ್ದಾರೆ.

“ಅವರಿಗೆ ಉದ್ಯೋಗ ಭದ್ರತೆಯಿಲ್ಲ. ಬಂದೋಬಸ್ತ್ ನಲ್ಲಿ ಇರುವಾಗ ಅವರಿಗೆ ಸರಿಯಾದ ಆಹಾರ ದೊರೆಯುವುದಿಲ್ಲ ಮತ್ತು ಸರಿಯಾದ ಆಶ್ರಯದಿಂದ ವಂಚಿತರಾಗಿದ್ದಾರೆ” ಎಂದು ನಾಯಕ್ ಹೇಳಿದರು.

“ಈ ಸಿಬ್ಬಂದಿಗಳು ನಿಸ್ವಾರ್ಥ ಸೇವೆಯನ್ನು ನೀಡುತ್ತಾ ಇದ್ದಾರೆ. ಅವರಿಗೆ ಸರಿಯಾದ ಸೌಲಭ್ಯ ನೀಡುವುದು ರಾಜ್ಯ ಸರ್ಕಾರದ ಕರ್ತವ್ಯ. ಇತರ ರಾಜ್ಯಗಳಲ್ಲಿ ಪಡೆಯುವ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು. ರಾಜ್ಯ ಸರ್ಕಾರವು ತೆಲಂಗಾಣ ಮಾದರಿಯನ್ನು ಅನುಸರಿಸಬೇಕು ಮತ್ತು ಸರಿಯಾದ ಸಂಬಳ, ಉಚಿತ ಬಸ್ ಪಾಸ್, ಉಚಿತ ಪಡಿತರ, ಉತ್ತಮ ಸಮವಸ್ತ್ರ ಮತ್ತು ಇತರ ಭದ್ರತೆ ಮತ್ತು ಸಹಾಯವನ್ನು ಒದಗಿಸಬೇಕು, ” ಎಂದು ಹೇಳಿದ್ದಾರೆ.

ನಾಯಕ್ ತೆಲಂಗಾಣ ಸರ್ಕಾರ ಒದಗಿಸಿರುವ ಕೆಲವು ಸೌಲಭ್ಯಗಳ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ

  • 20,000 ಸಂಬಳ ಮತ್ತು 2 ಬಿಎಚ್‌ಕೆ ಮನೆ.
  • ಹೋಮ್ ಗಾರ್ಡ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ 6 ತಿಂಗಳ ಹೆರಿಗೆ ರಜೆ ವೇತನದೊಂದಿಗೆ ನೀಡಲಾಗುತ್ತದೆ. ಪುರುಷರಿಗೆ 15 ದಿನಗಳ ರಜೆ .
  • ಬಂದೋಬಸ್ತ್‌ಗೆ ಹೋಗುವವರಿಗೆ ಸರಿಯಾದ ಆಹಾರ ಮತ್ತು ಆಶ್ರಯ.
  • ಕುಟುಂಬಕ್ಕೆ ಉಚಿತ ಔಷಧಿ ಮತ್ತು ವಿಮೆ.
  • ಹೋಮ್ ಗಾರ್ಡ್ ಸಾವಿನ ಸಂದರ್ಭದಲ್ಲಿ ಕುಟುಂಬಕ್ಕೆ ಹಣಕಾಸಿನ ನೆರವು.
  • ಗೃಹರಕ್ಷಕ ದಳದಲ್ಲಿ 5 ವರ್ಷ ಪೂರ್ಣಗೊಳಿಸಿದವರಿಗೆ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಸಮಯದಲ್ಲಿ ಮೀಸಲಾತಿ ನೀಡಲಾಗುತ್ತದೆ.

ಈ ಸೌಲಭ್ಯಗಳನ್ನು ನಮ್ಮ ಗೃಹರಕ್ಷಕರಿಗೆ ರಾಜ್ಯ ಸರ್ಕಾರ ಒದಗಿಸಬೇಕು. ಗೃಹರಕ್ಷಕರಿಗೆ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಉತ್ತಮ ಅನುಭವವಿದೆ. ಹೀಗಾಗಿ ಐದು ವರ್ಷ ಪೂರೈಸಿದವರಿಗೆ ಪೊಲೀಸ್ ನೇಮಕಾತಿ ಸಮಯದಲ್ಲಿ ಮೀಸಲಾತಿ ನೀಡಬೇಕು ಎಂದು ಅವರು ಕೆನರಾ ಪೋಸ್ಟ್‌ಗೆ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!