ಗ್ರಾಮೀಣ ವಿದ್ಯಾರ್ಥಿಗಳಿಗೆ ಅಂತರ್ಜಾಲ ಶಿಕ್ಷಣ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನತಾಣ ಕಾರ್ಯಕ್ರಮ ಉದ್ಘಾಟನೆ
ಬೆಳ್ತಂಗಡಿ, ನ 09: ಗ್ರಾಮೀಣ ಪ್ರದೇಶದ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಅಂತರ್ಜಾಲ ಶಿಕ್ಷಣ ಒದಗಿಸುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಜ್ಞಾನತಾಣ,’ ಕಾರ್ಯಕ್ರಮದಡಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇಪ್ಪತ್ತು ಸಾವಿರ ಟ್ಯಾಬ್‍ಗಳು ಹಾಗೂ ಹತ್ತು ಸಾವಿರ ಲ್ಯಾಪ್‍ಟಾಪ್‍ಗಳನ್ನು ವಿತರಿಸಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು.
ಸುಮಾರು 81 ಕೋಟಿ ರೂಪಾಯಿ ವೆಚ್ಚದ ಈ ಕಾರ್ಯಕ್ರಮದಲ್ಲಿ ಒಂದು ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ
ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಅವರು ಸೋಮವಾರ ಅಂತರ್ಜಾಲ ಶಿಕ್ಷಣಕ್ಕೆ ಕಾಯಕಲ್ಪ ನೀಡುವ ಜ್ಞಾನತಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ಥಳೀಯ ಆರು ವಿದ್ಯಾರ್ಥಿಗಳಿಗೆ ಟ್ಯಾಬ್ ಮತ್ತು ಲ್ಯಾಪ್‍ಟಾಪ್‍ಗಳನ್ನು ವಿತರಿಸಿದರು.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜ್ಞಾನತಾಣ ಕಾರ್ಯಕ್ರಮ ಉದ್ಘಾಟಿಸಿದರು.
“ಟ್ಯಾಬ್ ಮತ್ತು ಲ್ಯಾಪ್‍ಟಾಪ್ ಶ್ರೀಮಂತರಿಗೆ ಮಾತ್ರ ಎಂಬ ಭಾವನೆ ಸಲ್ಲದು. ಶ್ರೀ ಸಾಮಾನ್ಯರಿಗೂ ಅದರ ಉಪಯೋಗವಾಗಬೇಕು ಎಂಬ ಉದ್ದೇಶದಿಂದ ಕಾಲದ ಅವಶ್ಯಕತೆಗೆ ಸ್ಪಂದಿಸಿ ಈ ಯೋಜನೆ ರೂಪಿಸಲಾಗಿದೆ. ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಮನೆಯಲ್ಲಿದ್ದರೂ ಜೀವನದ ಪ್ರತಿಯೊಂದು ಕ್ಷಣವನ್ನೂ ವ್ಯರ್ಥ ಮಾಡದೆ ಉತ್ಪಾದಕ ಕ್ಷಣವಾಗಿ ಆದರ್ಶ ವ್ಯಕ್ತಿತ್ವ ರೂಪಿಸಿಕೊಂಡು ಉತ್ತಮ ಜೀವನ ನಡೆಸಬಹುದು,” ಎಂದರು.
“ಹಿರಿಯರಿಗೂ ಇದರಲ್ಲಿ ಸೂಕ್ತ ಮಾರ್ಗದರ್ಶನವಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು,” ಎಂದು ಅವರು ಸಲಹೆ ನೀಡಿದರು.
ಡಿ. ಹರ್ಷೇಂದ್ರ ಕುಮಾರ್, ಅನಿಲ್ ಕುಮಾರ್ ಮತ್ತು ಶಾಂತರಾಮ ಪೈ ಉಪಸ್ಥಿತರಿದ್ದರು.
ನಿರ್ದೇಶಕಿ ಮಮತಾ ರಾವ್ ಸ್ವಾಗತಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯೋಜನಾಧಿಕಾರಿ ಯಶವಂತ ಧನ್ಯವಾದವಿತ್ತರು. ಜಯಕರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಮುಖ್ಯಾಂಶಗಳು:
• ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜ್ಞಾನತಾಣ ಕಾರ್ಯಕ್ರಮ ಉದ್ಘಾಟಿಸಿದರು.
• ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸೋಮವಾರ ಏಕ ಕಾಲದಲ್ಲಿ ಒಟ್ಟು ಹತ್ತು ಸಾವಿರ ಲ್ಯಾಪ್‍ಟಾಪ್‍ಗಳು ಹಾಗೂ ಇಪ್ಪತ್ತು ಸಾವಿರ ಟ್ಯಾಬ್‍ಗಳನ್ನು ವಿತರಿಸಲಾಯಿತು.
• ಐದನೆ ತರಗತಿಯಿಂದ ಹತ್ತನೆ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಆರು ವರ್ಷಗಳ ಪಠ್ಯವನ್ನು ಒದಗಿಸಲಾಗಿದೆ.
• 450 ಗೌರವ ಶಿಕ್ಷಕರನ್ನು ಒದಗಿಸಲಾಗುವುದು.
• ಡಿಸೆಂಬರ್ ಒಂದರೊಳಗೆ ವಿತರಣಾ ಕಾರ್ಯ ಪೂರ್ಣಗೊಳಿಸಿ ಮುಂದಿನ ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುವುದು.
- Arecanut and Pepper Price at TSS- Sirsi
- Boost Tourism with Safety and Modern Facilities: MP Kota Srinivas Poojary
- ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಸ್ವಾಗತಾರ್ಹ ವಾತಾವರಣ ಕಲ್ಪಿಸಿ : ಸಂಸದ ಕೋಟಾ ಶ್ರೀನಿವಾಸ ಪೂಜಾರಿ
- ಅಸಾಧರಣ ಸಾಧನೆ ಮಾಡಿದ ಮಕ್ಕಳಿಂದ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನ
- Special Health Camps for Endosulfan Victims in Dakshina Kannada