ಕೃಷಿಗೆ ಪ್ರೋತ್ಸಾಹ ನೀಡಲು ಧರ್ಮಸ್ಥಳ ವತಿಯಿಂದ ‘ಯಂತ್ರಶ್ರೀ’ ಮುಖಾಂತರ ನೂತನ ಯೋಜನೆ: ಡಾ. ಹೆಗ್ಗಡೆ

 ಕೃಷಿಗೆ ಪ್ರೋತ್ಸಾಹ ನೀಡಲು ಧರ್ಮಸ್ಥಳ ವತಿಯಿಂದ  ‘ಯಂತ್ರಶ್ರೀ’ ಮುಖಾಂತರ ನೂತನ ಯೋಜನೆ: ಡಾ. ಹೆಗ್ಗಡೆ
Share this post
53 ನೆ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ ಉಧ್ಘಾಟನೆ


ಬೆಳ್ತಂಗಡಿ ಅ 24: ಕೃಷಿಕರಿಗೆ ಪ್ರೋತ್ಸಾಹ ನೀಡಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ 15 ಕೋಟಿ ರೂಪಾಯಿ ವೆಚ್ಚದಲ್ಲಿ “ಯಂತ್ರ ಶ್ರೀ” ಯೋಜನೆಯಡಿ ಯಂತ್ರಗಳನ್ನು ಖರೀದಿಸಿ ಎಂಟು ಸಾವಿರ ಎಕರೆ ಪ್ರದೇಶದಲ್ಲಿ ಕೃಷಿಗೆ ಕಾಯಕಲ್ಪ ನೀಡಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಕಟಿಸಿದರು.

ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಶನಿವಾರ ತಮ್ಮ 53 ನೆ ವರ್ಷದ ಪಟ್ಟಾಭಿಷೇಕ ವರ್ಧಂತಿಯ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ರಾಮಾಭಿವೃದ್ಧಿ ಯೋಜನೆಯು ಕರ್ನಾಟಕ ರಾಜ್ಯದ 25 ಜಿಲ್ಲೆಗಳ 164 ಹೋಬಳಿ ಕೇಂದ್ರಗಳಲ್ಲಿ ರೈತ ಯಂತ್ರೋಪಕರಣ ಬಾಡಿಗೆ ಕೇಂದ್ರ ಸ್ಥಾಪಿಸಿದೆ. ಸುಮಾರು 505 ಪೂರ್ಣಕಾಲಿಕ ಸಿಬ್ಬಂದಿಗಳುಳ್ಳ 164 ಕೇಂದ್ರಗಳಲ್ಲಿ ಇದುವರೆಗೆ ಸುಮಾರು 7 ಲಕ್ಷಕ್ಕೂ ಮಿಕ್ಕಿದ ರೈತರು ಬಾಡಿಗೆ ಯಂತ್ರಗಳ ಪ್ರಯೋಜನವನ್ನು ಮಾಡಿಕೊಂಡಿದ್ದು ಈ ಕಾರ್ಯಕ್ರಮವೀಗ ಕರ್ನಾಟಕ ಸರಕಾರದ ಕೃಷಿ ಇಲಾಖೆಯ ಯಶಸ್ವೀ ಕಾರ್ಯಕ್ರಮಗಳಲ್ಲಿ ಒಂದಾಗಿ ಮೂಡಿಬಂದಿದೆ .

ಗ್ರಾಮಾಭಿವೃದ್ಧಿ ಯೋಜನೆ ಮೂಲಕ 21 ಕೋಟಿ ರೂಪಾಯಿ ವೆಚ್ಚದಲ್ಲಿ 20,000 ಟ್ಯಾಬ್ ಗಳನ್ನು ಹಾಗೂ 10000 ಲ್ಯಾಪ್ ಟಾಪ್ ಗಳನ್ನು ವಿತರಿಸಲಾಗುವುದು,
” ವಾತ್ಸಲ್ಯ” ಕಾರ್ಯಕ್ರಮದಡಿಯಲ್ಲಿ ನಿರ್ಗತಿಕರಿಗೆ ವಸತಿ ಹಾಗೂ ಜೀವನಾವಶ್ಯಕ ಸೌಲಭ್ಯಗಳನ್ನು ಒದಗಿಸಲಾಗುವುದು. ಈಗಾಗಲೇ 10,400 ನಿರ್ಗತಿಕ ಕುಟುಂಬಗಳನ್ನು ಗುರುತಿಸಿದ್ದು 2 ಕೋಟಿ ರೂಪಾಯಿ ವಿನಿಯೋಗಿಸಲಾಗುವುದು.
ರಾಜ್ಯದಲ್ಲಿ 150 ಕೆರೆಗಳಿಗೆ ಕಾಯಕಲ್ಪ ನೀಡಲು 10 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದರು.

ಬೆಂಗಳೂರಿನ ನೆಲಮಂಗಲದಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಸದ್ಯದಲ್ಲಿಯೇ ಆರೋಗ್ಯಸೇವೆಯನ್ನು ಪ್ರಾರಂಭಿಸಲಾಗುವುದು. ಧರ್ಮಸ್ಥಳದಲ್ಲಿ ಅನ್ನಪೂರ್ಣ ಭೋಜನಾಲಯದ ವಿಸ್ತರಣೆ, ಸರದಿ ಸಾಲಿನಲ್ಲಿ ಆನ್ಲೈನ್ ಸೇವೆ ಕಾದಿರಿಸುವಿಕೆ, ವಾಣಿಜ್ಯ ಸಂಕೀರ್ಣ ವಿಸ್ತರಣೆ ಮೊದಲಾದ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶನಿವಾರ ಡಿ. ವೀರೇಂದ್ರ ಹೆಗ್ಗಡೆಯವರನ್ನು ಗೌರವಿಸಿ ಅಭಿನಂದಿಸಿದರು.

ಧರ್ಮೋತ್ಥಾನ ಟ್ರಸ್ಟ್ ಆಶ್ರಯದಲ್ಲಿ ರಾಜ್ಯದಲ್ಲಿ 250ಕ್ಕೂ ಮಿಕ್ಕಿ ಪ್ರಾಚೀನ ದೇವಾಲಯಗಳನ್ನು ಜೀರ್ಣೋದ್ಧಾರ ಗೊಳಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ 1135 ದೇವಾಲಯಗಳ ನಿರ್ಮಾಣಕ್ಕಾಗಿ 14 ಕೋಟಿ ರೂಪಾಯಿ ನೆರವು ನೀಡಲಾಗಿದೆ. ಧರ್ಮಸ್ಥಳದಲ್ಲಿ ಒಂದು ತಿಂಗಳು 30 ಕಲಾವಿದರಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ. ಲಕ್ಷದೀಪೋತ್ಸವದ ಬಳಿಕ ಮೇಳದ ಕಲಾವಿದರು ಸೇವೆ ಬಯಲಾಟ ಪ್ರದರ್ಶನ ನೀಡುವರು.

Also read: Mangaluru Police special squad to curb cattle theft


ದೀಪಾವಳಿ ಬಳಿಕ ಎಲ್ಲಾ ಸಮಸ್ಯೆಗಳು ಪರಿಹಾರವಾಗಿ ನವಭಾರತ ನಿರ್ಮಾಣವಾಗಲಿದೆ ಎಂದು ಹೆಗ್ಗಡೆಯವರು ಹಾರೈಸಿದರು.

ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ. ಚಿನ್ನಪ್ಪಗೌಡ ಅಭಿನಂದನಾ ಭಾಷಣ ಮಾಡಿದರು.

ಹಿರಿಯ ನೌಕರರಾದ ಹರಿನಾರಾಯಣ ನೂರಿತ್ತಾಯ (ಪ್ರಧಾನ ಅರ್ಚಕರು), ಕೃಷ್ಣಕುಮಾರ್ ಶೆಟ್ಟಿ (ಹಣ್ಣುಕಾಯಿ ವಿಭಾಗ) ಮತ್ತು ಶಂಕರ ಶೆಟ್ಟಿ (ವಸತಿ ವಿಭಾಗ) ಅವರನ್ನು ಹೆಗ್ಗಡೆಯವರು ಸನ್ಮಾನಿಸಿದರು.

ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಮಾಣಿಲದ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು.

ಮುಂಬೈನ ಶಿವಸೇನಾ ಪಾರ್ಟಿಯ ಕಾರ್ಯದರ್ಶಿ ಹಾಗೂ ಶ್ರೀ ಉದ್ಭವ್ ಠಾಕ್ರೆ, ಮಾನ್ಯ ಮುಖ್ಯಮಂತ್ರಿಗಳು ಮಹಾರಾಷ್ಟ್ರ ಸರ್ಕಾರ ಇವರ ಆಪ್ತ ಸಹಾಯಕ ಶ್ರೀ ಮಿಲಿಂದ್ ಕೆ. ನಾರ್ವೇಕರ್ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಶುಭ ಹಾರೈಸಿದರು.

Subscribe to our newsletter!

Other related posts

error: Content is protected !!