ಉಡುಪಿ: ಕನ್ನಡ ರಾಜ್ಯೋತ್ಸವ ಆಚರಣೆ
ಉಡುಪಿ, ನ 1 : ಉಡುಪಿ ಜಿಲ್ಲಾಡಳಿತ ವತಿಯಿಂದ , 65 ನೇ ಕನ್ನಡ ರಾಜ್ಯೋತ್ಸವ
ದಿನಾಚರಣೆಯನ್ನು ಅಜ್ಜರಕಾಡು ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ಆಚರಿಸಲಾಯಿತು.
ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವದ ಸಂದೇಶ ನೀಡಿದರು.
ಜಿಲ್ಲಾ ಸಶತ್ರ ಮೀಸಲು ಪಡೆ, ಕರಾವಳಿ ಕಾವಲು ಪೊಲೀಸ್, ಗೃಹರಕ್ಷಕ ದಳ, ಅರಣ್ಯ ಇಲಾಖೆ ಮತ್ತಿತರ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 36 ಮಂದಿ ಸಾಧಕರಿಗೆ ಮತ್ತು 4 ಸಂಘ ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಗರಿಷ್ಠ ಅಂಕ ಪಡೆದ 9 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗಳನ್ನು ವಿತರಿಸಲಾಯಿತು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ.ಜಾತಿಯ ವಿದ್ಯಾರ್ಥಿನಿ ಕು.ಸ್ಪೂರ್ತಿ ಅಶೋಕ ರಾಥೋಡ ಮತ್ತು ಕೊಲ್ಲೂರಿನ ಶ್ರೀ ಮೂಕಾಂಬಿಕಾ ಪ್ರೌಢಶಾಲೆಯ ಪ.ಪಂಗಡದ ವಿದ್ಯಾರ್ಥಿನಿ ಕು.ರಶ್ಮಿತಾ ಇವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ, ಸ್ವಾತಂತ್ರ್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಲ ಇವರ ಸ್ಮರಣಾರ್ಥ 1 ಲಕ್ಷ ರೂಪಾಯಿಗಳ ಬಹುಮಾನ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್, ಕರಾವಳಿ ಅಭಿವೃದ್ದಿ ಪ್ರಾದಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಡುಪಿ ನಗರಾಬಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ
ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದರು.
ಕೋವಿಡ್ ಹಿನ್ನಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನೇರಪ್ರಸಾರವನ್ನು ಸಾರ್ವಜನಿಕರು ಮನೆಯಲ್ಲಿಯೇ ಕುಳಿತು, ವೆಬ್ಕಾಸ್ಟ್ ಮತ್ತು ಫೇಸ್ಬುಕ್ ಲೈವ್ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.