ಕಾರವಾರ: ಕೂಲಿ ದರ ನಿಗದಿಪಡಿಸಲು ಆ.23 ರಂದು ಸಭೆ
ಕಾರವಾರ ಆ 22, 2022: ವಿವಿಧ ಕೂಲಿ ಕಾರ್ಮಿಕರಿಗೆ ಕೂಲಿದರ ನಿಗದಿಪಡಿಸುವ ಕುರಿತು ಚರ್ಚಿಸಿ, ಒಮ್ಮತದ ನಿರ್ಧಾರ ಕೈಗೊಳ್ಳಲು ನಗರದ ಅಜ್ವಿ ಓಶಿಯನ್ ಹೋಟೆಲ್ನ ಸಭಾಂಗಣದಲ್ಲಿ ಆ.23 ಸಂಜೆ 5ಕ್ಕೆ ಸಭೆ ಆಯೋಜಿಸಲಾಗಿದೆ ಎಂದು ಕಾರವಾರ ತಾಲೂಕಾ ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ತಿಳಿಸಿದ್ದಾರೆ.
ಗೌಂಡಿ, ಬಡಗಿ ಸೇರಿದಂತೆ ವಿವಿಧ ಕೂಲಿಕಾರ್ಮಿಕರುಗಳು ಪ್ರತಿದಿನ ಬೆಳಿಗ್ಗೆ ನಗರದ ಸಿದ್ದಿವಿನಾಯಕ ದೇವಸ್ಥಾನದ ಬಳಿ ಗುತ್ತಿಗೆದಾರರಿಗಾಗಿ ನಿಂತಿರುತ್ತಾರೆ. ಅವರ ಕೂಲಿ ದರ ಇತ್ತೀಚಿಗೆ ದುಬಾರಿಯಾಗಿದೆ. ಗೌಂಡಿಗಳಿಗೆ ದಿನಕ್ಕೆ 1,500ದವರೆಗೆ, ಇತರೆ ಕಾರ್ಮಿರು 800- 900 ರೂ.ವರೆಗೆ ಕೂಲಿಗೆ ಬೇಡಿಕೆ ಇಡುತ್ತಿದ್ದಾರೆ. ಕರ್ನಾಟಕದಲ್ಲೆಲ್ಲೂ ಇರದಷ್ಟು ದರ ನಮ್ಮಲ್ಲಾಗಿದೆ. ಹೀಗಾಗಿ ಇವರಿಗೆಲ್ಲ ಒಂದು ಕೂಲಿ ದರ ನಿಗದಿ ಮಾಡುವ ಅಗತ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಕೆಲವು ಕಡೆಗಳಲ್ಲಿ ಕೆಲ ಕೂಲಿಕಾರರೇ ಗುತ್ತಿಗೆ ಪಡೆದು ಕೆಲ ಕಾಮಗಾರಿಗಳನ್ನ ನಡೆಸುತ್ತಿರುವುದು ಕೂಡ ಗಮನಕ್ಕೆ ಬಂದಿದೆ. ಗುತ್ತಿಗೆದಾರರಿಗೆ ಕೂಲಿಯಾಳುಗಳ ಕೊರತೆಯ ಕಾರಣ ನಾಲ್ಕು ಪಟ್ಟು ಕೂಲಿ ನೀಡುವಂಥ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಎಲ್ಲಾ ಕೂಲಿಕಾರರಿಗೂ ಒಂದು ದರ ನಿಗದಿಪಡಿಸಬೇಕಿದೆ. ಆ ದರಕ್ಕಿಂತ ಹೆಚ್ಚು- ಕಡಿಮೆ ನೀಡಬಾರದು. ಇದರ ಬಗ್ಗೆ ಚರ್ಚೆ ನಡೆಸಲು ಬಿಲ್ಡರ್ಸ್ ಅಸೋಸಿಯೇಶನ್, ಕಾರ್ಪೆಂಟರ್ ಅಸೋಸಿಯೇಶನ್, ಸೆಂಟ್ರಿAಗ್ ಅಸೋಸಿಯೇಶನ್ ಹಾಗೂ ಮೇಸ್ತ್ರಿಗಳು, ಕಾಂಕ್ರೀಟ್ನವರು ಹೀಗೆ ಸಂಬಂಧಪಟ್ಟ ಎಲ್ಲರೂ ಈ ಸಭೆಯಲ್ಲಿ ಹಾಜರಿರಲು ಅವರು ಕೋರಿದ್ದಾರೆ.
ಸಭೆಯಲ್ಲಿ ಎಲ್ಲರೂ ಚರ್ಚೆ- ಮಾತುಕತೆ ನಡೆಸಿ, ಒಮ್ಮತದ ನಿರ್ಧಾರಕ್ಕೆ ಬರಬೇಕಿದೆ. ನಿಗದಿಪಡಿಸಿದ ದರದಂತೆ ಕೂಲಿಯಾಳುಗಳ ಸೇವೆಯನ್ನು ಪಡೆಯಲು ತೀರ್ಮಾನ ಕೈಗೊಳ್ಳಬೇಕಿದೆ ಎಂದು ಅವರು ತಿಳಿಸಿದ್ದಾರೆ.