ದೀಪ ಸಂಜೀವಿನಿ ಹಣತೆಗಳನ್ನು ಖರೀದಿಸಿ: ಶಾಸಕ ರಘುಪತಿ ಭಟ್
ಉಡುಪಿ, ಅ 27, 2021: ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಜೀವನೋಪಾಯ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಉಡುಪಿ ಜಿಲ್ಲೆಯ ಸಂಜೀವಿನಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಮ್ಮ ಕೈಚಳಕದಿಂದ ವಿವಿಧ ವಿನ್ಯಾಸದ ಮಣ್ಣಿನ ಹಣತೆಗಳನ್ನು ತಯಾರಿಸಿದ್ದು, ‘ದೀಪ ಸಂಜೀವಿನಿ’ ಎಂಬ ಹೆಸರೊಂದಿಗೆ ಈ ಹಣತೆಗಳು ಮಾರುಕಟ್ಟೆ ಪ್ರವೇಶಿಸಿವೆ.
ಈ ಹಣತೆಗಳಿಗೆ ಯೋಗ್ಯ ಮಾರುಕಟ್ಟೆ ಒದಗಿಸಲು ಇಂದು ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ನ ಗೋಲ್ಡನ್ ಜುಬಲಿ ಹಾಲ್ ನಲ್ಲಿ ನಡೆದ ಕ್ರೆಡಿಟ್ ಔಟ್ರೀಚ್ ಕಾರ್ಯಕ್ರಮದಲ್ಲಿ ದೀಪ ಸಂಜೀವಿನಿಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಅತ್ಯಾವಶ್ಯಕ. ಜಿಲ್ಲಾ ಪಂಚಾಯತ್ ನಿಂದ ದೀಪಾವಳಿ ಹಬ್ಬದ ಸಮಯದಲ್ಲಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಹಣತೆಗಳಿಗೆ ಮಾರುಕಟ್ಟೆ ನೆರವು ಒದಗಿಸುವುದು ಉತ್ತಮ ಕಾರ್ಯ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಣತೆಗಳನ್ನು ಖರೀದಿಸುವುದರ ಮೂಲಕ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಮಹಾ ಪ್ರಬಂಧಕ ರಾಮ ನಾಯ್ಕ, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಉಪಮಹಾ ಪ್ರಬಂಧಕ ಕೆ. ಕಾಳಿ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿ.ಎಂ. ಪಿಂಜರ್, ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಅವಿನಾಶ್ ಹಾಗೂ ನವ್ಯ ಉಪಸ್ಥಿತರಿದ್ದರು.