ಮಂಗಳೂರು: ಗ್ರಾಹಕರ ಸಮಾವೇಶ ಆಯೋಜಿಸಲು ನಳಿನ್ ಕುಮಾರ್ ಕಟೀಲ್ ಸೂಚನೆ

 ಮಂಗಳೂರು: ಗ್ರಾಹಕರ ಸಮಾವೇಶ ಆಯೋಜಿಸಲು ನಳಿನ್ ಕುಮಾರ್ ಕಟೀಲ್ ಸೂಚನೆ
Share this post

ಮಂಗಳೂರು, ಅ 14, 2021: ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿವಿಧ ಯೋಜನೆಗಳಡಿ ಜನಸಾಮಾನ್ಯರ ಅಭಿವೃದ್ಧಿಗಾಗಿ ಜಾರಿಗೊಳಿಸಿರುವ ಸಾಲ-ಸೌಲಭ್ಯಗಳ ಮಾಹಿತಿ ನೀಡುವ ಗ್ರಾಹಕರ ಸಮಾವೇಶವನ್ನು ಇದೇ ಅ.30 ರಂದು ಆಯೋಜಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಅವರಿಗೆ ನಿರ್ದೇಶನ ನೀಡಿದರು.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಬ್ಯಾಂಕ್‍ಗಳ ಪ್ರಾದೇಶಿಕ ಮ್ಯಾನೇಜರುಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇಂದ್ರ ಸರಕಾರ ಕೊರೊನಾ ನಂತರದ ಆರ್ಥಿಕತೆಗೆ ಒತ್ತು ನೀಡುವ ಸಲುವಾಗಿ ಗ್ರಾಹಕರ ಸಮಾವೇಶ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಿದೆ. ಹಾಗಾಗಿ ಇದರಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕ್‍ಗಳು ಭಾಗವಹಿಸಬೇಕು ಹಾಗೂ ಅರ್ಹರಿಗೆ ಸಾಧ್ಯವಾದಷ್ಟು ಸಾಲವನ್ನು ಮಂಜೂರು ಮಾಡಬೇಕು.

ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ಈ ಕಾರ್ಯಕ್ರಮದಲ್ಲಿ ವಿತರಣೆ ಮಾಡುವಂತೆ ನೋಡಿಕೊಳ್ಳಬೇಕು. ಹಾಗಾಗಿ ಉತ್ತಮ ಸಂಖ್ಯೆಯಲ್ಲಿ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗುವಂತೆ ಎಲ್ಲಾ ಬ್ಯಾಂಕ್‍ಗಳು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಸಮಾವೇಶದಲ್ಲಿ ಭಾಗವಹಿಸುವ ಎಲ್ಲಾ ಬ್ಯಾಂಕ್‍ಗಳು ಸ್ಥಳದಲ್ಲಿ ತಮ್ಮ ಬ್ಯಾಂಕುಗಳ ಸ್ಟಾಲ್ ಹಾಕಿ ಸಾರ್ವಜನಿಕರಿಗೆ ವಿವಿಧ ಯೋಜನೆಗಳಡಿ ನೀಡಲಾಗುವ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು. ಮೀನುಗಾರಿಕೆ, ಹೈನುಗಾರಿಕೆ, ಕೃಷಿ, ತೋಟಗಾರಿಕೆ, ಕೆ.ಎಮ್.ಎಫ್., ಮಂಗಳೂರು ಮಹಾನಗರ ಪಾಲಿಕೆ ಈ ಸಮಾವೇಶಕ್ಕೆ ಸಹಕಾರ ನೀಡಬೇಕು ಹಾಗೂ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸುವಂತೆ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಿಎಮ್ ಜನ ಸುರಕ್ಷಾ ಯೋಜನೆಗಳ ಬಗ್ಗೆ ವಿಶೇಷ ಜಾಗೃತಿ ಮೂಡಿಸಬೇಕು. ವಿಮೆ, ಪಿಂಚಣಿ, ಸಾಮಾಜಿಕ ಭದ್ರತಾ ಯೋಜನೆಗಳು, ಮುದ್ರಾ, ಶೈಕ್ಷಣಿಕ ಸಾಲ ಸೌಲಭ್ಯ, ಆತ್ಮ ನಿರ್ಭಾರ್ ಯೋಜನೆಗಳು ಸೇರಿದಂತೆ ಲಭ್ಯವಿರುವ ವಿವಿಧ ಸಾಲ ಸೌಲಭ್ಯಗಳ ಅರಿವು ಮೂಡಿಸಬೇಕು, ಮುಖ್ಯವಾಗಿ ಸಾಲದ ಅರ್ಜಿ ಸ್ವೀಕರಿಸುವ, ಮಂಜೂರಾತಿ ಅಥವಾ ತಾತ್ವಿಕ ಮಂಜೂರಾತಿ ನೀಡುವ ಬಗ್ಗೆ ಸಾರ್ವಜನಿಕರಿಗೆ ತಿಳಿಯಬೇಕು ಹಾಗೂ ಈ ಕಾರ್ಯಕ್ರಮದಲ್ಲಿ ಸಾಲ ಸೌಲಭ್ಯ ಪಡೆದು ವಿವಿಧ ಯೋಜನೆಗಳಲ್ಲಿ ಯಶಸ್ವಿಯಾದವರ ಯಶೋಗಾಥೆಗಳ ಬಗ್ಗೆ ಮಾಹಿತಿ ಪ್ರಚಾರ ಪಡಿಸಬೇಕು ಎಂದರು.

ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಬಂಧಕ ರಾಬರ್ಟ್ ಡಿ ಸಿಲ್ವ, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಎಂ.ಪಿ, ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಸಂಗೀತ ಎಸ್ ಕರ್ತಾ ವೇದಿಕೆಯಲ್ಲಿದ್ದರು.

ನಬಾರ್ಡ್-ಸಾಮರ್ಥ್ಯ ಆಧಾರಿತ ಸಾಲ ಯೋಜನೆ-2022-23 ಬಿಡುಗಡೆ:

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್)ನ ಸಾಮಥ್ರ್ಯ ಆಧಾರಿತ ಸಾಲ ಯೋಜನೆ-2022-23 ಅನ್ನು ಸಂಸದ ನಳಿನ್ ಕುಮಾರ್ ಕಟೀಲ್ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ಜಿಲ್ಲೆಯ ಸಹಾಯಕ ಉಪ ಪ್ರಬಂಧಕ ಸಂಗೀತ ಎಸ್ ಕರ್ತ, ಜಿಲ್ಲೆಯಲ್ಲಿ ಆದ್ಯತ ರಂಗಕ್ಕೆ ನೀಡಬಹುದಾದ ಸಾಮರ್ಥ್ಯ ಆಧಾರಿತ ಸಾಲ ಯೋಜನೆಯ ಕುರಿತು ಮಾತನಾಡಿದರು. 2022-23ರ ಸಾಮಥ್ರ್ಯ ಆಧಾರಿತ ಬೆಳೆ ಸಾಲ ಯೋಜನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್‍ನ ಪರಿಷ್ಕೃತ ಮಾರ್ಗದರ್ಶನದಂತೆ ತಯಾರಿಸಲಾಗಿದೆ.

ಆದ್ಯತಾರಂಗಕ್ಕೆ ಬಳಸಿಕೊಳ್ಳಬಹುದಾದ ಸಾಲ ಯೋಜನೆಯ ಸುಮಾರು 15,318 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ. ಈ ಯೋಜನೆಯಲ್ಲಿ ವಿಶೇಷವಾಗಿ ಕೃಷಿ ಸಾಲ, ಪಶುಸಂಗೋಪನೆ ಮತ್ತು ಮೀನುಗಾರಿಕಾ ಚಟುವಟಿಕೆಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಇತರೆ ಕೃಷಿ ಸಂಬಂಧಿತ ಚಟುವಟಿಕೆಗಳು ಹಾಗೂ ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಆದ್ಯತೆ ನೀಡಲಾಗಿದೆ ಎಂದವರು ಮಾಹಿತಿ ನೀಡಿದರು.


Subscribe to our newsletter!

Other related posts

error: Content is protected !!