ಜಲ ಸಂರಕ್ಷಣೆಗಾಗಿ ಜಲಶಕ್ತಿ ಅಭಿಯಾನ
ಉಡುಪಿ, ಏಪ್ರಿಲ್ 13, 2021: ದೇಶದ ಗ್ರಾಮೀಣ ಪ್ರದೇಶಗಳು ಎದುರಿಸುತ್ತಿರುವ ಜಲಮೂಲಗಳ ಕೊರತೆ , ಅಂರ್ತಜಲ ಸಮಸ್ಯೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ನೀರು ಹಾಗೂ ಕುಡಿಯುವ ನೀರಿನ ಕೊರೆತೆಯನ್ನು
ನಿವಾರಿಸಿ ,ಕೃಷಿ ಚಟುವಟಿಕೆಗಳನ್ನು ಅಭಿವೃಧ್ದಿಗೊಳಿಸಿ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಜಲಶಕ್ತಿ ಅಭಿಯಾನ ಎಂಬ ಬಹುದೊಡ್ಡ ಯೋಜನೆಯನ್ನು ರಾಷ್ಟ್ರಾದ್ಯಂತ ಅನುಷ್ಠಾನಗೊಳಿಸಿದೆ.
ಕೇಂದ್ರ ಸರ್ಕಾರವು ಮಾರ್ಚ್ 22, 2021 ರಿಂದ ನವೆಂಬರ್ 30, 2021 ರ ವರೆಗೆ ಜಲಶಕ್ತಿ ಅಭಿಯಾನ- Catch the Rain ಅಭಿಯಾನವನ್ನು ಹಮ್ಮಿಕೊಳ್ಳಲು ನಿರ್ದೇಶನ ನೀಡಿದ್ದು, ಪ್ರಧಾನ ಮಂತ್ರಿಗಳು ಈ ಅಭಿಯಾನಕ್ಕೆ ಈಗಾಗಲೇ ಚಾಲನೆಯನ್ನು ನೀಡಿ, ಮುಂಗಾರು ಪೂರ್ವದ 100 ದಿನ ಅವಧಿಯಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಮಳೆ ನೀರು ಸಂರಕ್ಷಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಕರೆ ನೀಡಿದ್ದಾರೆ.
ಮಳೆ ನೀರು ಸಂರಕ್ಷಣೆಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸಾಕಷ್ಟು ಅವಕಾಶಗಳಿದ್ದು, ಅದನ್ನು ಬಳಸಿಕೊಂಡು ಅಂತರ್ಜಲ ಸಂರಕ್ಷಣೆಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಗೊಳಿಸಬಹುದಾಗಿದೆ.
ಗ್ರಾಮದ ವ್ಯಾಪ್ತಿಯಲ್ಲಿರುವ ಕೆರೆ, ಕಲ್ಯಾಣಿಗಳ ಸಮಗ್ರ ಅಭಿವೃದ್ಧಿ, ನೀರು ಹರಿದು ಹೋಗುವ ನಾಲಾ/ ಕಾಲುವೆಗಳ ಪುನಶ್ಚೇತನ, ಹೊಸಕೆರೆ, ಗೋಕಟ್ಟೆಗಳ ನಿರ್ಮಾಣ, ಕಿಂಡಿಆಣೆಕಟ್ಟು, ಬೋರ್ವೆಲ್ ರಿಚಾರ್ಜ್, ಕಟ್ಟಡಗಳಿಗೆ ಮಳೆ ನೀರುಕೊಯ್ಲು, ಅರಣ್ಯೀಕರಣ ಕಾಮಗಾರಿ ಇತ್ಯಾದಿ ಸಮುದಾಯ ಕಾರ್ಯಕ್ರಮಗಳನ್ನು ನೀರಾವರಿ ಬಾವಿ ನಿರ್ಮಾಣ, ಸೋಕ್ ಪಿಟ್ಗಳ ನಿರ್ಮಾಣ, ಬದುಗಳ ನಿರ್ಮಾಣ, ಕೃಷಿಹೊಂಡ ಮೊದಲಾದ ವೈಯಕ್ತಿಕ ಕಾರ್ಯಕ್ರಮಗಳನ್ನು MGNREGA ಯಡಿ ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
MGNREGA ಕಾರ್ಯಕ್ರಮದಡಿ ಕೂಲಿದರ ವನ್ನುರೂ.275 ರಿಂದರೂ.289 ಕ್ಕೆ ಹೆಚ್ಚಿಸಲಾಗಿದ್ದು, ವರ್ಷಕ್ಕೆ ಪ್ರತೀಕುಟುಂಬಕ್ಕೆ 100 ದಿನಗಳು ಉದ್ಯೋಗ ಅಭಿಯಾನ ಜಾರಿಯಲ್ಲಿದ್ದು, ಉದ್ಯೋಗ ಚೀಟಿ ಹೊಂದದ ಕುಟುಂಬಗಳು ಗ್ರಾಮ ಪಂಚಾಯತ್ ಸಂಪರ್ಕಿಸಿ ಉದ್ಯೋಗ ಚೀಟಿ ಪಡೆದು ಗ್ರಾಮ ಪಂಚಾಯತ್ನಿಂದ ಕೂಲಿ ಉದ್ಯೋಗ ಪಡೆಯಬಹುದಾಗಿದೆ.
ಉಡುಪಿ ಜಿಲ್ಲೆಯಲ್ಲಿ MGNREGA ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಉತ್ತಮ ಸ್ಪಂದನೆ ದೊರೆತಿದ್ದು, 2020-21 ನೇ ಸಾಲಿನಲ್ಲಿ ರೂ.6.68 ಲಕ್ಷ ಮಾನವ ದಿನಗಳ ಸೃಜನೆ ಮಾಡಲಾಗಿದೆ. ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಒಟ್ಟು 7,687 ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ.
ಜಿಲ್ಲೆಯಲ್ಲಿ ಜಲಶಕ್ತಿ ಅಭಿಯಾನದ ಅಂಗವಾಗಿ ಪ್ರತೀಗ್ರಾಮಕ್ಕೆ ಕನಿಷ್ಟ 1 ಕೆರೆಯನ್ನು ಗುರುತಿಸಿ ಅದರ ಸಮಗ್ರ ಅಭಿವೃದ್ಧಿ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಒಟ್ಟು 141 ಕೆರೆ, 160 ಕಾಲುವೆ/ ತೋಡು ಹೂಳೆತ್ತುವುದು, 20 ಕಿಂಡಿ ಆಣೆಕಟ್ಟು ನಿರ್ಮಾಣ, 50 ಬೋರ್ವೆಲ್ ರಿಚಾರ್ಜ್, 1455 ನೀರಾವರಿ ಬಾವಿ ನಿರ್ಮಾಣದ ಗುರಿ ಹೊಂದಲಾಗಿದೆ. ಪ್ರತೀ ಗ್ರಾಮ ಪಂಚಾಯತ್ನಲ್ಲಿ ಕನಿಷ್ಟ ಒಂದು ಕಟ್ಟಡಕ್ಕೆ ಮಳೆ ನೀರು ಕೊಯ್ಲು ಕಾಮಗಾರಿ ನಿರ್ವಹಿಸುವಂತೆ, ಪ್ರತೀ ಗ್ರಾಮ ಪಂಚಾಯತ್ಗೆ ಕನಿಷ್ಟ 50 ಸೋಕ್ ಪಿಟ್ ನಿರ್ಮಾಣದ ಸೂಚನೆ ನೀಡಲಾಗಿದೆ.
ಜಿಲ್ಲೆಯ ಜನಪ್ರತಿನಿಧಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಲಶಕ್ತಿ ಅಭಿಯಾನದಲ್ಲಿ ಹಾಗೂ ಮಹಾತ್ಮಗಾಂಧಿ ನರೇಗಾ ಯೋಜನೆ ಕಾರ್ಯಕ್ರಮ ಹೊರತುಪಡಿಸಿ ಸಹ ಅಂತರ್ಜಲ ಮರುಪೂರ್ಣಗೊಳಿಸುವ ಮೇಲಿನ ಕಾರ್ಯಕ್ರಮದಲ್ಲಿ ಸ್ವ-ಇಚ್ಛೆಯಿಂದ ಭಾಗವಹಿಸಬಹುದಾಗಿದ್ದು, ಕೆರೆ ಅಭಿವೃದ್ಧಿ, ಅರಣ್ಯೀಕರಣ ಮೊದಲಾದ ಸಮುದಾಯ ಕಾರ್ಯಕ್ರಮ, ಸ್ವಂತ ಮನೆಗಳಲ್ಲಿ ಮಳೆ ನೀರುಕೊಯ್ಲು, ನೀರು ಇಂಗಿಸುವಿಕೆ, ಸೋಕ್ ಪಿಟ್ ನಿರ್ಮಾಣ ಇತ್ಯಾದಿಗಳನ್ನು ಸ್ವಂತವಾಗಿ ಸಹ ಮಾಡಿಸಿಕೊಳ್ಳುವ ಮೂಲಕ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಕಾರ್ಮಿಕ ಬಲದ ಲಭ್ಯತೆಯಿಂದಾಗಿ , ಜಲಶಕ್ತಿ ಅಭಿಯಾನ ಯೋಜನೆಯು ಮುಂಬರುವ ಮುಂಗಾರು ಮಳೆ ನೀರಿನ ಸಂರಕ್ಷಣೆ ಹಾಗೂ ಅಂತರ್ಜಲ ವೃಧ್ದಿಗಾಗಿ ಮಾಡಬೇಕಾದ ಸಿದ್ಧತೆಗಳ ಹಿನ್ನೆಲೆಯಲ್ಲಿ ಇಡೀ ದೇಶಕ್ಕೆ ಈ ಯೋಜನೆಯು ಅತ್ಯಂತ ಮಹತ್ವದ್ದಾಗಿದೆ.
ಉಡುಪಿ ಜಿಲ್ಲೆಯಲ್ಲಿ ಜಲಶಕ್ತಿ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: ಉಡುಪಿ ಜಿಲ್ಲಾ ಪಂಚಾಯತ್ ನ ದೂ. ಸಂಖ್ಯೆ 0820-2574945 ಅಥವಾ ತಮ್ಮ ಸಮೀಪದ ಗ್ರಾಮ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.