ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾರ್ಗದರ್ಶನದಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ
ಬೆಳ್ತಂಗಡಿ, ಜನವರಿ 15, 2021: ಧಾರ್ಮಿಕ ಕೇಂದ್ರಗಳು ಮನುಕುಲಕ್ಕೆ ಬದುಕುವ ರೀತಿಯನ್ನು ತಿಳಿಸುವ ಕೇಂದ್ರಗಳೂ ಆಗಿವೆ. ಸ್ವಚ್ಛತೆಯ ಕಾರ್ಯ ಇಲ್ಲಿಂದ ಆರಂಭಗೊಂಡರೆ ರಾಜ್ಯದ ಪ್ರತಿ ಮನೆಯಲ್ಲಿಯೂ ಜಾಗೃತಿ ಮೂಡಿಸಬಹುದೆಂದು ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ‘ಸ್ವಚ್ಛ ಶ್ರದ್ಧಾ ಕೇಂದ್ರ,’ ಎಂಬ ಪರಿಕಲ್ಪನೆಗೆ ಚಾಲನೆ ನೀಡಿದರು.
ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ತಮ್ಮ ತಮ್ಮ ಶ್ರದ್ಧಾ ಕೇಂದ್ರಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಮುಂದಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಜನ ಸಹಭಾಗಿತ್ವದ ಈ ಕಲ್ಪನೆ ಸಾಮಾನ್ಯರಲ್ಲಿ ಬಹಳಷ್ಟು ಉತ್ಸಾಹವನ್ನು ಮೂಡಿಸಿದೆ. ಕಳೆದ ಐದು ವರ್ಷಗಳಿಂದ ನಿರಂತರವಾಗಿ ವರ್ಷಕ್ಕೆ ಎರಡು ಬಾರಿಯಂತೆ ಸಾಮುದಾಯಿಕ ಸ್ವಚ್ಛತಾ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಸಿಕೊಂಡು ಬಂದಿವೆ.
ಡಾ! ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಾಡಿನಾದ್ಯಂತ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನವನ್ನು 2016ರಿಂದ ಪ್ರಾರಂಭಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಸಿ ಈ ವರ್ಷ ಜನವರಿ 14 ಮಕರ ಸಂಕ್ರಾಂತಿಯಂದು ಕರ್ನಾಟಕ ರಾಜ್ಯದಾದ್ಯಂತ “ನಮ್ಮೂರು ನಮ್ಮ ಶ್ರದ್ಧಾಕೇಂದ್ರ” ಕಾರ್ಯಕ್ರಮದಡಿಯಲ್ಲಿ “ಸ್ವಚ್ಚತೆಯೆಡೆಗೆ ನಮ್ಮ ನಡಿಗೆ” ಎಂಬ ನಿಲುವಿನೊಂದಿಗೆ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದೇಶಕ್ಕೆ ಸ್ಪಂದಿಸಿದ ಭಕ್ತಾದಿಗಳು ರಾಜ್ಯಾದ್ಯಂತ ಮಂದಿರ, ಬಸದಿ, ಚರ್ಚ್ ಹಾಗೂ ಮಸೀದಿ ಒಳಗೊಂಡಂತೆ ಸುಮಾರು 12,164 ಕ್ಕೂ ಮಿಕ್ಕಿದ ಧಾರ್ಮಿಕ ಶ್ರದ್ಧಾಕೇಂದ್ರಗಳ ಸ್ವಚ್ಚತಾ ಮಹಾ ಅಭಿಯಾನವನ್ನು ಕೈಗೊಂಡು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆ.
ಸ್ವಚ್ಚತಾ ಕಾರ್ಯದಲ್ಲಿ 2,86,063 ಸ್ವಯಂ ಸೇವಕರು ಪಾಲ್ಕೊಂಡಿದ್ದರು.
ಸ್ವಚ್ಚತೆ ಕಾರ್ಯ ಕೈಗೊಂಡ ಜಿಲ್ಲೆಗಳು: 37 (ಯೋಜನೆಯ ಪ್ರಕಾರ)
ಒಟ್ಟು ತಾಲೂಕು: 180
ಶ್ರದ್ಧಾಕೆಂದ್ರಗಳು:
ದೇವಸ್ಥಾನ (11,590) ಚರ್ಚ್ (94) ಮಸೀದಿ (262) ಇತರೆ (218) ಒಟ್ಟು (12,164).