ಧರ್ಮಸ್ಥಳ ವತಿಯಿಂದ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ

 ಧರ್ಮಸ್ಥಳ ವತಿಯಿಂದ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ
Share this post

25 ಲಕ್ಷ ರೂ. ದೇಣಿಗೆ

ಬೆಳ್ತಂಗಡಿ, ಜನವರಿ 13, 2021: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಮೂಲಕ ನಮ್ಮ ಇಂದಿನ ಪ್ರಜಾರಾಜ್ಯದಲ್ಲಿ ರಾಮರಾಜ್ಯದ ಕನಸು ನನಸಾಗಬೇಕು. ದುರ್ಗುಣಗಳನ್ನು ತ್ಯಜಿಸಿ ಎಲ್ಲರೂ ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವುದೇ ರಾಮ ಮಂದಿರ ನಿರ್ಮಾಣದ ಉದ್ದೇಶವಾಗಿದೆ ಎಂದು ಉಡುಪಿ ಪೇಜಾವರದ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಅವರು ಬುಧವಾರ ಧರ್ಮಸ್ಥಳದಲ್ಲಿ ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಸಮಿತಿಯ ನಿಧಿ ಸಮರ್ಪಣಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಪ್ರತಿ ಮನೆಯಲ್ಲಿಯೂ ಮುಂಜಾನೆ ಮತ್ತು ಮುಸ್ಸಂಜೆ ಪ್ರತಿಯೊಬ್ಬರೂ ರಾಮನಾಮ ಸ್ಮರಣೆ ಮಾಡಬೇಕು. ತನ್ಮೂಲಕ ಧರ್ಮ ಮತ್ತು ಸಂಸ್ಕೃತಿಯ ಪುನರುತ್ಥಾನವಾಗಿ ರಾಮರಾಜ್ಯ ರೂಪುಗೊಳ್ಳಬೇಕೆಂದು ಅವರು ಹಾರೈಸಿದರು.

ಜನವರಿ 15 ರಿಂದ ಫೆಬ್ರವರಿ 25ರ ವರೆಗೆ ನಿಧಿ ಸಮರ್ಪಣಾ ಅಭಿಯಾನ ಆಯೋಜಿಸಿದ್ದು ಹತ್ತು ರೂ., ನೂರು ರೂ., ಹಾಗೂ 1000 ರೂ. ನ ಕೂಪನ್‍ಗಳ ಮೂಲಕ ಸಾರ್ವಜನಿಕರು ದೇಣಿಗೆ ನೀಡಬಹುದು. ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡಿ ದೇಣಿಗೆ ಸಂಗ್ರಹಿಸುವರು.

ಅಯೋಧ್ಯೆಯಲ್ಲಿ 500 ಕೋಟಿ ರೂ ವೆಚ್ಚದಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ ಪ್ರವಾಸಿಗರಿಗೆ ವಸತಿ ಗ್ರಂಥಾಲಯ ಮೊದಲಾದ ಸೌಲಭ್ಯಗಳಿಗಾಗಿ 100 ಕೋಟಿ ರೂ. ವೆಚ್ಚದ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

ನಿಧಿ ಸಮರ್ಪಣೆಗೆ ಚಾಲನೆ ನೀಡಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳದ ವತಿಯಿಂದ 25 ಲಕ್ಷ ರೂ. ದೇಣಿಗೆ ನೀಡುವುದಾಗಿ ಪ್ರಕಟಿಸಿದರು. ಮುಂದೆ ಶ್ರೀ ಸ್ವಾಮಿಯ ಪ್ರೇರಣೆಯಂತೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಸರ್ವರೂ ಸಕ್ರಿಯ ಸಹಕಾರ ನೀಡಿ ರಾಮ ಮಂದಿರವು ಶತಮಾನದ ವಿಸ್ಮಯವಾಗಿ ಅದ್ಭುತ ಮಂದಿರವಾಗಿ ಮೂಡಿ ಬರಬೇಕು. ಎಲ್ಲರ ಬೆಂಬಲದೊಂದಿಗೆ ಜನತಾ ರಾಮ ಮಂದಿರ ನಿರ್ಮಾಣವಾಗಲಿ ಎಂದು ಹೆಗ್ಗಡೆಯವರು ಹಾರೈಸಿದರು.

ಶಾಸಕ ಹರೀಶ್ ಪೂಂಜ, ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವೇಕ್ ಆಳ್ವ, ವಿಶ್ವ ಹಿಂದೂ ಪರಿಷದ್‍ನ ವಿನಯಚಂದ್ರ, ಬಸವರಾಜ್, ಗಣೇಶ್ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.

ವಿಶ್ವಹಿಂದೂ ಪರಿಷದ್ ಕಾರ್ಯದರ್ಶಿ ಎಂ.ಬಿ. ಪುರಾಣಿಕ್ ಸ್ವಾಗತಿಸಿದರು. ಬೆಳ್ತಂಗಡಿಯ ವಕೀಲ ಸುಬ್ರಹ್ಮಣ್ಯ ಅಗರ್ತ ಧನ್ಯವಾದವಿತ್ತರು. ನವೀನ್ ನೆರಿಯಾ ಕಾರ್ಯಕ್ರಮ ನಿರ್ವಹಿಸಿದರು

Subscribe to our newsletter!

Other related posts

error: Content is protected !!