ಕನಿಷ್ಠ ಬೆಂಬಲಬೆಲೆ ಯೋಜನೆಯಡಿ ಭತ್ತ ಮಾರಾಟ: ನ.30 ರಿಂದ ಡಿ. 30ರವರೆಗೆ ಆನ್ಲೈನ್ ಮೂಲಕ ನೋಂದಣಿ
ಕಾರವಾರ, ನವೆಂಬರ್ 26, 2020: ಕನಿಷ್ಠ ಬೆಂಬಲಬೆಲೆ ಯೋಜನೆಯಡಿಯಲ್ಲಿ ಭತ್ತವನ್ನು ಮಾರಾಟ ಮಾಡಲಿಚ್ಚಿಸುವ ರೈತರು ನವೆಂಬರ 30 ರಿಂದ ಡಿಸೆಂಬರ 30ರವರೆಗೆ ಆನ್ಲೈನ್ ಮೂಲಕ ನೋಂದಣಿ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನಿಷ್ಠ ಬೆಂಬಲಬೆಲೆ ಯೋಜನೆಯಡಿಯಲ್ಲಿ ರೈತರಿಂದ ಭತ್ತವನ್ನು ಖರೀದಿಸಲು ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಇವರನ್ನು ಏಜೆನ್ಸಿಯನ್ನಾಗಿ ನೇಮಕ ಮಾಡಲಾಗಿದ್ದು,
ಸಾಮಾನ್ಯ ಭತ್ತಕ್ಕೆ 1,868 ರೂಪಾಯಿ ಹಾಗೂ ‘ಎ’ ಗ್ರೇಡ್ ಭತ್ತಕ್ಕೆ 1,888 ರೂಪಾಯಿ ಪ್ರತಿ ಕ್ವಿಂಟಲ್ಗೆ ದರ ನಿಗಧಿ ಪಡಿಸಲಾಗಿರುತ್ತದೆ.
ಶಿರಸಿ ತಾಲೂಕಿನ ಬನವಾಸಿಯ ರೈತ ಸಂಪರ್ಕ ಕೇಂದ್ರ, ಮುಂಡಗೋಡ ಹಾಗೂ ಕುಮಟಾದ ಎಪಿಎಂಸಿ ಆವರಣದಲ್ಲಿರುವ ಕೆಎಫ್ಸಿಎಸ್ಸಿ ನಿಗಮದ ಅಕ್ಷರ ದಾಸೋಹ ಮಳಿಗೆ ಹಾಗೂ ಹಳಿಯಾಳದಲ್ಲಿರುವಂತಹ ಕೆಎಫ್ಸಿಎಸ್ಸಿ ನಿಗಮದ ಸಗಟು ಮಳಿಗೆಯನ್ನು ಖರೀದಿ ನೋಂದಣಿ ಕೇಂದ್ರಗಳನ್ನಾಗಿ ಮಾಡಲಾಗಿರುತ್ತದೆ.
ರೈತರು ನೋಂದಣಿ ಮಾಡಿಸಲು ಕೃಷಿ ಇಲಾಖೆಯು ರೈತ ಸಂಪರ್ಕ ಕೇಂದ್ರದಿಂದ ನೀಡಿರುವ Farmer Registration & Unified Beneficiary System (FRUITS) ಗುರುತಿನ ಸಂಖ್ಯೆಯೊಂದಿಗೆ ನೋಂದಣಿ ಕೇಂದ್ರಕ್ಕೆ ಬಂದು ನೋಂದಣಿ ಮಾಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.