ಮೊರಾರ್ಜಿ ದೇಸಾಯಿ ವಸತಿಶಾಲೆ: 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮಂಗಳೂರು,ಜು.12, 2024: ಜಿಲ್ಲೆಯ ಮಂಗಳೂರಿನ ನೆಲ್ಲಿತೀರ್ಥ, ಗುರುಪುರ ಮೂಡಬಿದ್ರೆಯ ಕಲ್ಲಬೆಟ್ಟು, ಮುಲ್ಕಿಯ ಕಮ್ಮಾಜೆ, ಬೆಳ್ತಂಗಡಿಯ ಮಚ್ಚಿನ, ಮುಂಡಾಜೆ, ಹೊಸಂಗಡಿ, ಬಂಟ್ವಾಳದ ವಗ್ಗ, ಪೂಂಜಾಲಕಟ್ಟೆ, ಪುತ್ತೂರಿನ ಬಲ್ನಾಡು ಉಪ್ಪಿನಂಗಡಿ ಹಾಗೂ ಸುಳ್ಯದ ಪಂಜ, ಮೊರಾರ್ಜಿ ದೇಸಾಯಿ, ಡಾ. ಬಿ.ಆರ್. ಅಂಬೇಡ್ಕರ್, ಇಂದಿರಾ ಗಾಂಧಿ, ನಾರಾಯಣ ಗುರು ವಸತಿ ಶಾಲೆಗಳಿಗೆ 20204-25ನೇ ಶೈಕ್ಷಣಿಕ ಸಾಲಿನಲ್ಲಿ 6ನೇ ತರಗತಿ ಪ್ರವೇಶಾತಿಗೆ ವಿಶೇಷ ವರ್ಗದ ಅಡಿಯಲ್ಲಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸ್ತುತ ಜಿಲ್ಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ 10ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು, ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲದೆ, ಊಟ, ವಸತಿ, ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಇನ್ನಿತರ ಸಾಮಗ್ರಿಗಳನ್ನು ನೀಡಲಾಗುತ್ತದೆ.
ಅಭ್ಯರ್ಥಿಯು ಎಸ್‍ಎಟಿಎಸ್ ಸಂಖ್ಯೆ, ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಮೀಸಲಾತಿಗೆ ಸಂಬಂಧಿಸಿದ ಇತರ ದಾಖಲೆಗಳೊಂದಿಗೆ ಹತ್ತಿರದ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಬೇಕು. ಅಥವಾ ವೆಬ್‍ಸೈಟ್ ವಿಳಾಸ https://cetonline.karnataka.gov.in/kreis24d/ ಮೂಲಕ ಅರ್ಜಿ ಸಲ್ಲಿಸಬಹುದು.
ವಿಶೇಷ ವರ್ಗಕ್ಕೆ ಸಂಬಂಧಿಸಿದ, ಸಫಾಯಿ ಕರ್ಮಚಾರಿ, ಚಿಂದಿ ಆಯುವವರು, ಚಿತಾಗಾರದ ಕಾರ್ಮಿಕರ, ಗುರುತಿಸಿದ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಮಕ್ಕಳು. ಬಾಲಕಾರ್ಮಿಕರು, ಜೀತಾ ವಿಮುಕ್ತ ಮಕ್ಕಳು, ರಕ್ಷಿಸಲ್ಪಟ್ಟ ದೇವದಾಸಿಯರ ಮಕ್ಕಳು, ಎಚ್.ಐ.ವಿ ಗೆ ತುತ್ತಾದ ಪೋಷಕರ ಮಕ್ಕಳು, ಶೇ. 25ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ವಿಶೇಷ ಚೇತನ ಮಕ್ಕಳು, ಒಬ್ಬ ಪೋಷಕರನ್ನು ಹೊಂದಿರುವ ಮಕ್ಕಳು, ಅನಾಥ ಮಕ್ಕಳು, ಗುರುತಿಸಿರುವ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ – ಅತಿ ಸೂಕ್ಷ್ಮ ಸಮುದಾಯದ, ಸೈನಿಕರು ಮತ್ತು ಮಾಜಿ ಸೈನಿಕರು, ಸರಕಾರಿ ಯೋಜನೆಗಳಿಂದ ಸ್ಥಳಾಂತರಗೊಂಡ ಪೋಷಕರ ಮಕ್ಕಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಆಶ್ರಮ ವಸತಿ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳು ವೆಬ್‍ಸೈಟ್ ಮೂಲಕ ಮೀಸಲಾತಿಗೆ ಸಂಬಂಧಿಸಿದ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರಿ ಮೂಲಕ ಪಡೆದು ದಕ್ಷಿಣ ಕನ್ನಡ ಜಿಲ್ಲೆಯ ವಾಸ್ತವ್ಯ ದೃಡೀಕರಣದೊಂದಿಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಹತ್ತಿರದ ವಸತಿ ಶಾಲಾ ಪ್ರಾಂಶುಪಾಲರನ್ನು ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.