ಶಿವಾಜಿ ಅವರ ದೇಶಾಭಿಮಾನವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಿ : ಡಾ. ಕೆ ವಿದ್ಯಾಕುಮಾರಿ

 ಶಿವಾಜಿ ಅವರ ದೇಶಾಭಿಮಾನವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಿ : ಡಾ. ಕೆ ವಿದ್ಯಾಕುಮಾರಿ
Share this post

ಉಡುಪಿ, ಫೆಬ್ರವರಿ 20, 2024: ಛತ್ರಪತಿ ಶಿವಾಜಿ ಅವರ ಆದರ್ಶ, ಶಿಸ್ತು ಹಾಗೂ ದೇಶಾಭಿಮಾನವನ್ನು ವಿದ್ಯಾರ್ಥಿಗಳು ಮೈಗೊಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.

ಅವರು ನಗರದ ಸರಕಾರಿ ಬಾಲಕಿಯರ ಪ್ರೌಢಶಾಲೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತು (ರಿ) ಹಾಗೂ ಛತ್ರಪತಿ ಶಿವಾಜಿ ವಿವಿದ್ದೋದೇಶ ಸಹಕಾರ ಸಂಘ (ರಿ.) ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ತಾಯಿಯ ಪ್ರೇರಣೆಯಿಂದ ಉತ್ತಮ ವ್ಯಕ್ತಿತ್ವವನ್ನು ಮೈಗೊಡಿಸಿಕೊಂಡ ಶಿವಾಜಿಯು ಸ್ತ್ರೀಯರ ಕುರಿತು ಅಪಾರ ಗೌರವವನ್ನು ಹೊಂದಿದವರಾಗಿದ್ದು, ಇದು ಯುವಜನತೆಗೆ ಮಾದರಿಯಾಗಿದೆ. ವಿದ್ಯಾರ್ಥಿನಿಯರು ಒಳ್ಳೆಯ ಶಿಕ್ಷಣವನ್ನು ಪಡೆದು ಸ್ವಾವಲಂಬಿಗಳಾಗಿ ಬದುಕು ನಡೆಸುವಂತೆ ಕರೆ ನೀಡಿದರು.

ಉಪನ್ಯಾಸವನ್ನು ನೀಡಿದ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ ಶಿವಾಜಿಯವರ ಕುರಿತು ಮಾತನಾಡಿ, ಗೆರಿಲ್ಲ ಯುದ್ಧಗಳ ಮೂಲಕ ಶತ್ರುಗಳನ್ನು ಸದೆ ಬಡಿದು ತಮ್ಮ ಸೈನ್ಯದ ಸಂಖ್ಯೆಯನ್ನು ಏರಿಸಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ. ಅತ್ಯಂತ ಮಹತ್ವಕಾಂಕ್ಷಿ ನಾಯಕರಾಗಿದ್ದ ಶಿವಾಜಿ ದಚ್ಚರು, ಪೋರ್ಚುಗೀಸರು ಮತ್ತು ಪ್ರೆಂಚರ ವಿರುದ್ಧ ಹೋರಾಡುವ ಮೂಲಕ ಸಾಂಕೇತಿಕವಾಗಿ ಸ್ವಾತಂತ್ರ‍್ಯ ಹೋರಾಟವನ್ನು ಆರಂಭಿಸಿದರು ಎಂದರು.

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕರ್ನಾಟಕ ಕ್ಷತ್ರೀಯ ಮರಾಠ ಸಮುದಾಯ (ರಿ) ಅಧ್ಯಕ್ಷ ಪ್ರಕಾಶ್ ರಾವ್, ಛತ್ರಪತಿ ಶಿವಾಜಿ ವಿವಿದ್ದೋದೇಶ ಸಹಕಾರ ಸಂಘ (ರಿ.) ಉಡುಪಿ ಇದರ ಅಧ್ಯಕ್ಷ ದಿನೇಶ್ ಸಿ ನಾಯಕ್ ಮೊರೆ, ಶಾಲೆಯ ಬೋಧಕರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಮಹೇಶ್ ನಿರೂಪಿಸಿ, ಶಾಲಾ ಮುಖ್ಯೋಪಾಧ್ಯಾಯನಿ ಇಂದಿರಾ ಬಿ. ವಂದಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!