ಉಡುಪಿಯ ಶ್ರೀಕ್ರಷ್ಣನಿಗೆ ಕೋಟಿ ತುಳಸಿ ಅರ್ಚನೆ
ಉಡುಪಿ, ಡಿ 18, 2023: ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯ ಹಾಗೂ ಶ್ರೀಶ್ರೀ ವಿದ್ಯಾಸಾಗರ ಶ್ರೀಪಾದರ ಅನುಗ್ರಹದೊಂದಿಗೆ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಸಭಾ ಕಡಿಯಾಳಿ ಶಾಖೆಯು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ ಬ್ರಹ್ಮಾವರ, ದಕ್ಷಿಣ ಕನ್ನಡ ಸೇರಿದಂತೆ ಎಲ್ಲಾ ಬ್ರಾಹ್ಮಣ ಸಮುದಾಯದ ಸಹಾಯ ಸಹಕಾರದೊಂದಿಗೆ ಉಡುಪಿಯ ಶ್ರೀಕೃಷ್ಣನಿಗೆ ನಾಲ್ಕಾವರ್ತಿ ಶ್ರೀ ವಿಷ್ಣು ಸಹಸ್ರ ನಾಮಾವಳೀ ಸಹಿತ ” ಕೋಟಿ ತುಳಸಿ ಅರ್ಚನೆ “ಯನ್ನು ರಾಜಾಂಗಣದಲ್ಲಿ ದಿನಾಂಕ ಡಿಸೆಂಬರ್ 31 ಮುಂಜಾನೆ 7.30ರಿಂದ 12 ಗಂಟೆಯವರೆಗೆ ನಡೆಸುವ ಸಂಕಲ್ಪ ಮಾಡಿದೆ.
ಡಿಸೆಂಬರ್ 17 ರಂದು ಈ ಬಗ್ಗೆ ಕಡಿಯಾಳಿಯ ಕಾತ್ಯಾಯಿನಿ ಸಭಾ ಭವನದಲ್ಲಿ ಸಮಾಲೋಚನೆ ಹಾಗೂ ಪೂರ್ವಭಾವೀ ಸಭೆಯನ್ನು ಕರೆಯಲಾಗಿತ್ತು.
ಸಭೆಗೆ ಅತಿಥಿಗಳಾದ ಬ್ರಾಹ್ಮಣ ಮಹಾಸಭಾ ಉಡುಪಿ ಜಿಲ್ಲೆಯ ಅಧ್ಯಕ್ಷ ಸುಧಾಕರ ಭಟ್, ನಿಯೋಜಿತ ಅಧ್ಯಕ್ಷ ಸಂದೀಪ ಕುಮಾರ ಮಂಜ, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀ ಮಂಜುನಾಥ ಉಪಾಧ್ಯ ವಿಪ್ರಮಹಿಳಾ ಅಧ್ಯಕ್ಷೆ ಶ್ರೀಮತಿ ಶೋಭಾ ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತ ತಮ್ಮಿಂದಾದ ತನು ಮನ ಧನ ಇತ್ಯಾದಿ ಸಂಪೂರ್ಣ ಸಹಕಾರ ನೀಡುವುದರೊಂದಿಗೆ ಈ ಪುಣ್ಯ ಯಜ್ಞದ ಗುರಿ ತಲುಪಲು ಅಗತ್ಯವಿರುವ ಸುಮಾರು 2500 ಕ್ಕೂ ಮಿಕ್ಕಿ ಬ್ರಾಹ್ಮಣ ಬಂಧುಗಳನ್ನು ಸೇರಿಸುವಲ್ಲಿ ಪ್ರಯತ್ನಿಸುವ ಭರವಸೆಯನ್ನು ನೀಡಿದರು.
ವೇದಿಕೆಯಲ್ಲಿ ತುಶಿಮಾಮ ಮಾತೃ ಸಂಸ್ಥೆಯ ಅಧ್ಯಕ್ಷ ರವಿ ಪ್ರಕಾಶ್ ಕಾರ್ಯದರ್ಶಿ ಜಯರಾಮ ಆಚಾರ್ಯ ಗೌರವಾಧ್ಯಕ್ಷ ಶ್ರೀ ಅರವಿಂದಾಚಾರ್ಯ ಹಾಗೂ ಕಡಿಯಾಳಿ ಶಾಖೆಯ ಅಧ್ಯಕ್ಷ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹವ್ಯಕ ಸಂಘದ ಅಧ್ಯಕ್ಷ ಪಾದೆಕಲ್ಲು ವಿಷ್ಣು ಭಟ್, ತೌಳವ ಮಾಧ್ವ ಮಂಡಲದ ಅಧ್ಯಕ್ಷ ವೆಂಕಟೇಶ್ ಭಟ್, ಬೈಲೂರು, ಕೊಡವೂರು, ಹೆಬ್ರಿ, ಕಡಿಯಾಳಿ ವಲಯದ ಅಧ್ಯಕ್ಷರು, ಕೂಟ ಮಹಾಜಗತ್ತು, ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ , ಶ್ರೀಕ್ರಷ್ಣ ಮಠದ ವಿಷ್ಣು ಸಹಸ್ರ ನಾಮಾವಳಿ ಬಳಗ ಹೀಗೆ ಹಲವು ಬ್ರಾಹ್ಮಣ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದು ಸಲಹೆ ಸೂಚನೆಗಳನ್ನು ನೀಡಿ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ನೀಡಿದರು.
ತುಶಿಮಾಮದ ಕೋಶಾಧಿಕಾರಿ ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಬಂದ ಎಲ್ಲ ಅತಿಥಿಗಳನ್ನು ಸ್ವಾಗತಿಸಿ ಅಧ್ಯಕ್ಷ ರಘುಪತಿ ಉಪಾದ್ಯ ವಂದಿಸಿ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ಕಾರ್ಯಕ್ರಮ ನಿರೂಪಿಸಿದರು.