ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿ ಹಸಿರು ಪಟಾಕಿ ಬಳಸಿ ಆಚರಿಸಿ : ಡಾ. ಕೆ ವಿದ್ಯಾಕುಮಾರಿ

 ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿ ಹಸಿರು ಪಟಾಕಿ ಬಳಸಿ ಆಚರಿಸಿ : ಡಾ. ಕೆ ವಿದ್ಯಾಕುಮಾರಿ
Share this post

ಉಡುಪಿ, ನವೆಂಬರ್ 07, 2023: ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿ ಹಸಿರು ಪಟಾಕಿ ಬಳಕೆಯೊಂದಿಗೆ ಆಚರಿಸಿ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಬೇಕೆಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

ಜಿಲ್ಲಾ ವ್ಯಾಪ್ತಿಯಲ್ಲಿ ಪಟಾಕಿಗಳ ಮಾರಾಟ ಮತ್ತು ನಿಯಂತ್ರಿಸುವ ಕುರಿತು ಮಾತನಾಡಿದ ಅವರು, ಈ ಬಾರಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶವಿದ್ದು, ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೇಟ್ ಮೇಲೆ ಹಸಿರು ಪಟಾಕಿಯ ಚಿಹ್ನೆಯಿದ್ದು, ಕ್ಯೂಆರ್ ಕೋಡ್ ಇರುವ ಪಟಾಕಿಗಳನ್ನೇ ಉಪಯೋಗಿಸಬೇಕು.

ನವೆಂಬರ್ 12 ರಿಂದ 15 ರವರೆಗೆ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಉಳಿದ ಪಟಾಕಿಗಳನ್ನು ಬಳಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ಮಾಡಿರುತ್ತದೆ.

ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಹಾಗೂ ಇವುಗಳನ್ನು ಬಳಸುವಾಗ ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದಂತೆ ಬಳಸಬೇಕು. ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಹಾಗೂ ನಿಷೇಧಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಸುಡುಮದ್ದುಗಳನ್ನು ಸ್ಪೋಟಿಸುವಂತಿಲ್ಲ.

ತಹಶೀಲ್ದಾರರು, ವೃತ್ತ ನಿರೀಕ್ಷಕರು, ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಪಟಾಕಿ ಮಾರಾಟಗಾರರ ಗೋದಾಮುಗಳನ್ನು ಪರಿಶೀಲಿಸಿ, ಅಲ್ಲಿ ಹಸಿರು ಪಟಾಕಿಯಲ್ಲದೆ, ಇನ್ನಾವುದಾದರೂ ನಿಷೇದಿತ ಪಟಾಕಿಗಳನ್ನು ದಾಸ್ತಾನು ಮಾಡಿದ್ದಲ್ಲಿ, ಇಡೀ ಗೋದಾಮನ್ನು ಮುಟ್ಟುಗೋಲು ಹಾಕಿಕೊಂಡು ಸಂಬಂಧಿತ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.

ತಾತ್ಕಾಲಿಕ ಪಟಾಕಿ ಮಳಿಗೆ ತೆರೆಯುವ ಮಾಲೀಕರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಮಳಿಗೆಗಳನ್ನು ತೆರೆಯಬೇಕು. ಅನುಮತಿ ನೀಡುವಾಗ ಸೂಚಿಸಿರುವ ಷರತ್ತುಗಳನ್ನು ತಪ್ಪದೇ ಪಾಲಿಸಬೇಕು.
ಸಾರ್ವಜನಿಕರಿಗೆ ಹಾಗೂ ಮಕ್ಕಳಲ್ಲಿ ಅರಿವು ಮೂಡಿಸಲು ಪರಿಣಾಮಕಾರಿಯಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪರಿಸರ ಸ್ನೇಹಿ ದೀಪಾವಳಿ ಹಬ್ಬದ ಕುರಿತು ಸಾರ್ವಜನಿಕ ಸ್ಥಳಗಳಾದ ಮೆಟ್ರೊ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾಲ್ ಗಳಲ್ಲಿ ಕರಪತ್ರ/ ಭಿತ್ತಿಪತ್ರಗಳನ್ನು ಹಂಚುವ ಮೂಲಕ ಹಾಗೂ ಟಿ.ವಿ ಮತ್ತು ರೇಡಿಯೋಗಳಲ್ಲಿ ಪ್ರಚಾರ ಪಡಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಬೇಕು.

ಹೊರ ರಾಜ್ಯಗಳಿಂದ ಅನಧಿಕೃತವಾಗಿ ಯಾವುದೇ ರೀತಿಯ ನಿಷೇದಿತ ಪಟಾಕಿಗಳನ್ನು ಸಾಗಾಟ ಮಾಡುವ ನಿರೀಕ್ಷೆಯಿದ್ದು ದೀಪಾವಳಿ ಹಬ್ಬ ಮುಗಿಯುವವರೆಗೂ ಜಿಲ್ಲೆಯ ಎಲ್ಲಾ ಗಡಿಭಾಗಗಳ ಚೆಕ್ ಪೋಸ್ಟ್ಗಳನ್ನು ವಾಣಿಜ್ಯ ಇಲಾಖೆಯ ಅಧಿಕಾರಿಗಳು ತಪಾಸಣೆ ಮಾಡಿ, ನಿಷೇಧಿತ ಪಟಾಕಿಗಳು ಇದ್ದಲ್ಲಿ ಮುಟ್ಟುಗೋಲು ಹಾಕಿಕೊಳ್ಳಬೇಕು.

ದೀಪಾವಳಿ ಸಮಯದಲ್ಲಿ ಉತ್ಪಾದನೆಯಾಗುವ ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿಯ ಕುರಿತು ಸ್ಥಳೀಯ ಸಂಸ್ಥೆಗಳು ಕ್ರಮಹಿಸಬೇಕು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!