ಕಸ ವಿಲೇವಾರಿ ಘಟಕಕ್ಕೆ ಹೋಗುವ ಕಸವನ್ನು ಕಡಿಮೆ ಮಾಡಲು ಸಾರ್ವಜನಿಕರಲ್ಲಿ ಅರಿವು ಮೂಡಿಸಿ: ಗಂಗೂಬಾಯಿ ಮಾನಕರ
ಕಾರವಾರ, ಆ.17, 2023: ಕಸ ವಿಲೇವಾರಿ ಘಟಕಕ್ಕೆ ಹೋಗುವ ಕಸವನ್ನು ಕಡಿಮೆ ಮಾಡಲು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಕಸದಿಂದ ರಸ ಮಾಡುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಘನತ್ಯಾಜ್ಯ ವಸ್ತು ವಿಲೇವಾರಿ ಕುರಿತ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ ಪರಿಣಾಮಕಾರಿಯಾಗಿ ವಿಲೇವಾರಿ ಮಾಡುವ ಹೊಣೆ ಸ್ಥಳೀಯ ನಗರ ಸಂಸ್ಥೆಗಳದಾಗಿರುತ್ತದೆ. ಈ ನಿಟ್ಟಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ನಾಗರಿಕರು ಮನೆಯಲ್ಲೇ ತ್ಯಾಜ್ಯ ವಿಂಗಡಿಸಿ ಕಸದ ಗಾಡಿಗೆ ನೀಡಬೇಕು. ಇದರಿಂದ ತ್ಯಾಜ್ಯ ಮರುಬಳಕೆಗೆ ಸಹಕಾರಿಯಾಗಿದೆ. ಹಸಿ ಕಸದಿಂದ ನಮ್ಮ ಮನೆ, ಟೆರೇಸ್ ಗಾರ್ಡನ್, ಹೊಲಗಳಿಗೆ ಕಾಂಪೋಸ್ಟ್ ಗೊಬ್ಬರ ತಯಾರು ಮಾಡಿಕೊಳ್ಳಬಹುದು. ಅದರಿಂದ ನಿಮಗೂ ಅನುಕೂಲ, ಸಂಗ್ರಹಿಸುವುದಕ್ಕೂ ಅನುಕೂಲ ಎಂದು ಜಿಲ್ಲಾಧಿಕಾರಿ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಸಂತೋಷ ಬಿ.ಕೆ ಅವರು ಮಾತನಾಡಿ ಘನತಾಜ್ಯ ವಿಲೇವಾರಿ ಸಂಬಂಧಿಸಿದಂತೆ ಎಲ್ಲಾ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಹಾಗೂ ಘನತಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳಬೇಕು ಎಂದು ಅವರು ಹೇಳಿದರು.
ಘನ ತ್ಯಾಜ್ಯ ಘಟಕಕ್ಕೆ ಅಧಿಕಾರಿಗಳು ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಹೇಳಿದರು.
ಏಕ ಬಳಕೆ ಪ್ಲಾಸ್ಟಿಕ್ ನಿಷೇಧವಿದ್ದರೂ ಕೆಲವೊಂದು ಕಡೆ ಅಂಗಡಿಗಳಲ್ಲಿ ಬಳಕೆ ಮತ್ತು ಮಾರಾಟ ಮಾಡಲಾಗುತ್ತಿದೆ. ಅಂತಹವರ ಮೇಲೆ ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ನಗರಸಭೆ, ಪಟ್ಟಣ ಪಂಚಾಯತ್, ಮತ್ತು ಪುರಸಭೆ ಅಧಿಕಾರಿಗಳು ಹಲವು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಸ್ಟೇಲ್ಲಾ ವರ್ಗಿಸ್, ಉಪ ಪರಿಸರ ಅಧಿಕಾರಿ ಗಣಪತಿ ಹೆಗಡೆ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇತರರು ಇದ್ದರು.