ಮಾ.13 ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮ
ಮಂಗಳೂರು.ಮಾ.11, 2023: ಇಂದಿನ ಮಕ್ಕಳು ಭವಿಷ್ಯದಲ್ಲಿ ಗುಣಮಟ್ಟದ ಜೀವನ ನಡೆಸಲು ಉತ್ತಮ ಶಿಕ್ಷಣ ಅಗತ್ಯ, ಅದಕ್ಕಾಗಿ ಸುಧಾರಿತ ಆರೋಗ್ಯ ಹೊಂದಿರಬೇಕು. ಈ ಹಿನ್ನಲೆಯಲ್ಲಿ 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳ ನಿವಾರಣಾ ಮಾತ್ರೆ ನೀಡುವ ಕಾರ್ಯಕ್ರಮವನ್ನು ಮಾ.13ರಂದು ಹಮ್ಮಿಕೊಳ್ಳಲಾಗಿದೆ.
1ರಿಂದ 19ವರ್ಷದೊಳಗಿನ ಮಕ್ಕಳಲ್ಲಿ ಜಂತುಹುಳ ಕಾಣಿಸಿಕೊಳ್ಳುತ್ತಿರುವುದರಿಂದ ಅವರಿಗೆ ಜಂತುಹುಳ ಮಾತ್ರೆಯನ್ನು ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲಾ, ಕಾಲೇಜುಗಳಲ್ಲಿ ಹಾಗೂ ಅಂಗನವಾಡಿಗಳಲ್ಲಿ ಉಚಿತವಾಗಿ ನೀಡಲಾಗುವುದು.
ಅಂದು ಜಂತುಹುಳ ಮಾತ್ರೆ ಪಡೆಯದೆ ಬಾಕಿ ಉಳಿದ ಮಕ್ಕಳಿಗೆ ಮಾ.14ರಿಂದ 25ರ ಮಾಪ್–ಅಪ್ ದಿನಗಳಂದು ಮಾತ್ರೆ ನೀಡಲಾಗುತ್ತದೆ. ಅಂಗನವಾಡಿಗೆ ದಾಖಲಾಗದ ಮಕ್ಕಳು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಮೂಲಕ ಕಡ್ಡಾಯವಾಗಿ ಜಂತುಹುಳ ಮಾತ್ರೆಯನ್ನು ನೀಡಲಾಗುತ್ತದೆ.
ಇದು ಚೀಪುವ ಮಾತ್ರೆಯಾಗಿದ್ದು, ಈ ಮಾತ್ರೆಯನ್ನು ಮಧ್ಯಾಹ್ನ ಊಟದ ನಂತರ ಶಾಲೆಗಳಲ್ಲಿ ಶಾಲಾ ಶಿಕ್ಷಕರ ಮತ್ತು ಅಂಗನವಾಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯವರ ಉಪಸ್ಥಿತಿಯಲ್ಲಿ ನೀಡಲಾಗುವುದು. 1ವರ್ಷದಿಂದ 2ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ, 2ರಿಂದ 19ವರ್ಷದೊಳಗಿನ ಮಕ್ಕಳಿಗೆ 1ಮಾತ್ರೆಯನ್ನು ನೀಡಲಾಗುತ್ತದೆ.
ಜಂತುಹುಳ ಹರಡಲು ಸಾಧ್ಯತೆಗಳಿರುವ ಸಮುದಾಯದಲ್ಲಿ ಸಾಮಾನ್ಯವಾಗಿ ಕಂಡು ಬರುವ ದೈನಂದಿನ ನಡವಳಿಕೆಗಳು:
1) ಬರಿಕಾಲಿನಲ್ಲಿ ಬಯಲಿನಲ್ಲಿ ಆಟವಾಡುವುದು
2) ಕೈಗಳನ್ನೇ ತೊಳೆಯದೇ ಆಹಾರ ಸೇವಿಸುವುದು
3) ಬಾಹ್ಯ ಪ್ರದೇಶದಲ್ಲಿ/ಬಯಲಿನಲ್ಲಿ ಮಲ ವಿಸರ್ಜನೆ
4) ಶೌಚಾಲಯ ಬಳಸಿದ ನಂತರ ಕೈಗಳನ್ನು ಸರಿಯಾಗಿ ತೊಳೆಯದಿರುವುದು
5) ತರಕಾರಿ, ಹಣ್ಣುಹಂಪಲುಗಳನ್ನು ತೊಳೆಯದೇ ಸೇವಿಸುವುದು
6) ಆಹಾರ ಪದಾರ್ಥಗಳನ್ನು ಮುಚ್ಚಿಡದೇ ತೆರೆದಿಡುವುದು.
ಜಂತುಹುಳ ಭಾದೆ ಹೇಗೆ ಹರಡುತ್ತದೆ: ಜಂತುಹುಳ ಭಾದೆ ನೈರ್ಮಲ್ಯತೆಯ ಕೊರತೆ ಹಾಗೂ ವೈಯುಕ್ತಿಕ ಶುಚಿತ್ವದ ಕೊರತೆಯಿಂದ ಉಂಟಾಗುತ್ತದೆ. ಜಂತುಹುಳ ಸೋಂಕಿನ ಮಣ್ಣನ್ನು ಸ್ಪರ್ಶಿಸುವುದರಿಂದ ಜಂತುಹುಳ ಬಾಧೆ ಬರುತ್ತದೆ.
ಜಂತುಹುಳ ಭಾದೆಯ ಲಕ್ಷಣಗಳು:
ತೀವ್ರ ಜಂತುಹುಳ ಬಾಧೆಯಿಂದಾಗಿ ಹೊಟ್ಟೆನೋವು, ಭೇದಿ, ಹಸಿವಿಲ್ಲದಿರುವುದು ಹಾಗೂ ಸುಸ್ತು ಕಂಡುಬರುತ್ತದೆ.
ಜಂತುಹುಳ ಭಾದೆಯಿಂದ ಆರೋಗ್ಯ ಮತ್ತು ಪೌಷ್ಠಿಕತೆಯ ಮೇಲೆ ಉಂಟಾಗುವ ಪರಿಣಾಮಗಳು:
ಜಂತುಹುಳ ರಕ್ತವನ್ನು ಹೀರುವುದರಿಂದ ಮಕ್ಕಳಲ್ಲಿ ರಕ್ತಹೀನತೆ ಉಂಟಾಗುತ್ತದೆ. ಮಕ್ಕಳ ಬೆಳವಣಿಗೆಗೆ ಅಗತ್ಯವಿರುವ ಪೌಷ್ಠಿಕಾಂಶಗಳನ್ನು ಜಂತುಹುಳ ಹೀರುವುದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗುತ್ತದೆ. ಅಪೌಷ್ಟಿಕತೆಯಿಂದಾಗಿ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಜಂತುಹುಳ ಕರುಳಿನಲ್ಲಿರುವ ವಿಟಮಿನ್ ಎ ಪೌಷ್ಠಿಕಾಂಶವನ್ನು ಹೀರುತ್ತದೆ.
ಜಂತುಹುಳ ಭಾದೆಯಿಂದ ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಸಾಮಥ್ರ್ಯದ ಮೇಲೆ ಉಂಟಾಗುವ ಪರಿಣಾಮಗಳು:
ಜಂತುಹುಳ ಭಾದೆಯಿಂದಾಗಿ ಮಕ್ಕಳು ಹೆಚ್ಚಾಗಿ ರೋಗಗ್ರಸ್ತರಾಗುತ್ತಿದ್ದು, ಶಾಲೆಗಳಿಗೆ ಗೈರು ಹಾಜರಾತಿಯಾಗುವುದು ಅಥವಾ ತರಗತಿಯಲ್ಲಿ ಪಾಠದ ಬಗ್ಗೆ ಏಕಾಗ್ರತೆ ನೀಡಲು ವಿಫಲರಾಗುತ್ತಾರೆ.
ಮಕ್ಕಳ ಶಾರೀರಿಕ ಹಾಗೂ ಭೌದ್ದಿಕ ಬೆಳವಣಿಗೆ ಕುಂಠಿತವಾಗಿ ಭವಿಷ್ಯದಲ್ಲಿ ಅವರ ಕೆಲಸ ಮಾಡುವ ಸಾಮಥ್ರ್ಯ ಕಡಿಮೆಯಾಗಬಹುದು.
ಜಂತುಹುಳ ನಿವಾರಣೆಗೆ ಔಷಧಿ – ವಿಶ್ವ ಸಂಸ್ಥೆಯು ಪ್ರಮಾಣೀಕರಿಸಿದ ಆಲ್ಬೆಂಡಝೋಲ್ 400 ಮಿ. ಗ್ರಾಂ ಮಾತ್ರೆ ಉಚಿತವಾಗಿ ಸಿಗುತ್ತದೆ.
ಆಲ್ಬೆಂಡಝೋಲ್ ಮಾತ್ರೆಯನ್ನು 1ರಿಂದ 2ವರ್ಷದ ಮಕ್ಕಳಿಗೆ ಅರ್ಧ ಮಾತ್ರೆಯನ್ನು ಹುಡಿ ಮಾಡಿ ಎದೆ ಹಾಲಿನಲ್ಲಿ ಬೆರೆಸಿ ಕೊಡಬೇಕು. 2ರಿಂದ 19ವರ್ಷದೊಳಗಿನ ಮಕ್ಕಳಿಗೆ 1 ಪೂರ್ಣ ಮಾತ್ರೆಯನ್ನು ಚೀಪಿ ತಿನ್ನಲು ಕೊಡಬೇಕು.
ಜಂತುಹುಳ ಭಾದೆ ನಿವಾರಣೆಯ ಉಪಯೋಗಗಳು:
ರಕ್ತಹೀನತೆಯನ್ನು ತಡೆಗಟ್ಟುವುದು, ಪೌಷ್ಠಿಕತೆಯಲ್ಲಿ ಸುಧಾರಣೆ, ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಏಕಾಗ್ರತೆ, ಕಲಿಕೆಯ ಶಕ್ತಿ ಹಾಗೂ ಶಾಲಾ ಹಾಜರಾತಿ ಸುಧಾರಿಸುವುದು. ಜಂತುಹುಳ ಭಾದೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು ನಿಯಂತ್ರಣಾಗುತ್ತದೆ.
ಮಕ್ಕಳಿಗೆ ಜಂತುಹುಳ ನಿವಾರಣಾ ಮಾತ್ರೆಯನ್ನು ಕೊಡಿಸಿ, ಮಕ್ಕಳ ಆರೋಗ್ಯ ಸುಧಾರಣೆ ಹೊಂದಿ ಕಲಿಕೆಯಲ್ಲಿ ಏಕಾಗ್ರತೆಯನ್ನು ಸಾಧಿಸಲು ನೆರವಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.