ಉಡುಪಿ ಜಿಲ್ಲೆಯ 2.58 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಣೆ

 ಉಡುಪಿ ಜಿಲ್ಲೆಯ 2.58 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಣೆ
Share this post

ಉಡುಪಿ, ಆ 08, 2022: ಜಿಲ್ಲೆಯಲ್ಲಿ ಆಗಸ್ಟ್ 10 ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಜಿಲ್ಲೆಯ 1 ರಿಂದ 19 ವರ್ಷದೊಳಗಿನ 2,58,920 ಮಕ್ಕಳಿಗೆ ಅಲ್‌ಬೆಂಡಾಜೋಲ್ ಮಾತ್ರೆಯನ್ನು ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.

ಸರ್ಕಾರಿ, ಅನುದಾನಿತ, ಖಾಸಗಿ ಶಾಲೆ, ಅಂಗನವಾಡಿ, ರೆಸಿಡೆನ್ಶಿಯಲ್ ಸ್ಕೂಲ್, ಐ.ಟಿ.ಐ ನರ್ಸಿಂಗ್ ಕಾಲೇಜು, ಪ್ರಥಮ ವರ್ಷದ ಪದವಿ ಹಾಗೂ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಆಯಾ ಶಾಲಾ- ಕಾಲೇಜುಗಳಲ್ಲಿ ಮಾತ್ರೆಗಳನ್ನು ನೀಡಲಾಗುವುದು. ಅಂಗನವಾಡಿ ಮಕ್ಕಳಿಗೆ ಹಾಗೂ ಶಾಲೆಯಿಂದ ಹೊರಗುಳಿದ 19 ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿಗಳಲ್ಲಿ ಅಲ್‌ಬೆಂಡಾಜೋಲ್ ಮಾತ್ರೆಗಳನ್ನು ವಿತರಿಸಲು ಆಶಾ ಕಾರ್ಯಕರ್ತೆಯರು ಕ್ರಮವಹಿಸಲಿದ್ದಾರೆ.

1 ರಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ ಹಾಗೂ 2 ರಿಂದ 19 ವರ್ಷದೊಳಗಿನವರಿಗೆ ಇಡೀ ಮಾತ್ರೆಯನ್ನು ನೀಡಲಾಗುವುದು. ಚಿಕ್ಕ ಮಕ್ಕಳು ಮಾತ್ರೆಯನ್ನು ಹುಡಿ ಮಾಡಿ ನೀರಿನೊಂದಿಗೆ ಅಥವಾ ಚೀಪಿ ಸೇವಿಸಬೇಕು. ಆಗಸ್ಟ್ 10 ರಂದು ಬಿಟ್ಟು ಹೋದ ಮಕ್ಕಳಿಗೆ ಹಾಗೂ ಸೌಖ್ಯವಿಲ್ಲದ ಮಕ್ಕಳಿಗೆ ಗುಣಮುಖರಾದ ನಂತರ ಆ. 17 ರ ಮಾಪ್ ಅಪ್ ದಿನದಂದು ಮಾತ್ರೆಗಳನ್ನು ನೀಡಲಾಗುವುದು. ಇತರೆ ಔಷಧಿ ಸೇವಿಸುತ್ತಿರುವ ಮಕ್ಕಳು ವೈದ್ಯರ ಸಲಹೆ ಪಡೆದು ಅಲ್‌ಬೆಂಡಾಜೋಲ್ ಮಾತ್ರೆಗಳನ್ನು ಸೇವಿಸಬೇಕು.

ಜಂತುಹುಳು ಬಾಧೆಯಿಂದ ರಕ್ತಹೀನತೆ, ಪೌಷ್ಠಿಕ ಆಹಾರದ ಕೊರತೆ ಮತ್ತು ದೈಹಿಕ ಹಾಗೂ ಬೌದ್ಧಿಕ ಬೆಳೆವಣಿಗೆಗೆ ತೊಂದರೆ ಉಂಟಾಗುತ್ತದೆ. ಅಲ್‌ಬೆಂಡಾಜೋಲ್ ಮಾತ್ರೆಗಳನ್ನು ನೀಡುವುದರಿಂದ ಹೊಟ್ಟೆ ಹುಳುಗಳು ನಾಶವಾಗಿ ರೋಗನಿರೋಧಕ ಶಕ್ತಿ ಹೆಚ್ಚಾಗಿ, ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದೆ.

ನೈರ್ಮಲ್ಯತೆಯ ಕೊರತೆ, ವೈಯಕ್ತಿಕ ಶುಚಿತ್ವದ ಕೊರತೆ ಹಾಗೂ ಜಂತುಹುಳ ಸೋಂಕಿನ ಮಣ್ಣನ್ನು ಸ್ಪರ್ಶಿಸುವುದರಿಂದ ಈ ರೋಗವು ಬಾಧಿಸಲಿದ್ದು, ಹೊಟ್ಟೆನೋವು, ಭೇಧಿ, ಹಸಿವಿಲ್ಲದಿರುವುದು ಹಾಗೂ ಸುಸ್ತು ಈ ರೋಗದ ಲಕ್ಷಣವಾಗಿದೆ.

ಉಗುರುಗಳ ಸ್ವಚ್ಛತೆಯಿಂದ, ಆಹಾರ ಸೇವನೆ ಮೊದಲು ಹಾಗೂ ಶೌಚಾಲಯ ಬಳಕೆಯ ನಂತರ ಕೈಗಳನ್ನು ಸಾಬೂನಿನಿಂದ ತೊಳೆಯುವುದರಿಂದ, ಶುದ್ಧೀಕರಿಸಿದ ನೀರಿನ ಸೇವನೆ, ಆಹಾರ ಪದಾರ್ಥಗಳನ್ನು ಮುಚ್ಚಿಡುವುದರಿಂದ, ಹಣ್ಣು ಹಾಗೂ ತರಕಾರಿಗಳನ್ನು ಉಪಯೋಗಿಸುವ ಮೊದಲು ಶುದ್ಧ ನೀರಿನಿಂದ ತೊಳೆಯುವುದರಿಂದ, ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡುವುದರಿಂದ, ಮಲವಿಸರ್ಜನೆಗೆ ಶೌಚಾಲಯ ಬಳಸುವುದರಿಂದ ಹಾಗೂ ನಡೆಯುವಾಗ ಪಾದರಕ್ಷೆಗಳನ್ನು ಬಳಸಿದ್ದಲ್ಲಿ ಜಂತುಹುಳುವಿನ ಬಾಧೆಯಿಂದ ರಕ್ಷಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!