ಯಶಸ್ಸಿನ ಹಾದಿಗೆ ಕೌಶಲ್ಯ, ಆತ್ಮವಿಶ್ವಾಸ ಅತ್ಯಗತ್ಯ: ಡಾ. ಎ ಜಯಕುಮಾರ್ ಶೆಟ್ಟಿ
ಉಜಿರೆ, ಡಿ 22, 2022: ಉದ್ಯಮದಲ್ಲಿ ಯಶಸ್ಸು ಕಾಣಲು ಕೌಶಲ್ಯ ಬಹಳ ಮುಖ್ಯ. ತತ್ವಪಾಲನೆ ಮಾನವೀಯ ಮೌಲ್ಯವನ್ನು ಇಮ್ಮಡಿಗೊಳಿಸಲು ಸಹಕಾರಿಯಾಗುತ್ತದೆ ಎಂದು ಎಸ್. ಡಿ. ಎಂ ಕಾಲೇಜು ಪ್ರಾಂಶುಪಾಲ ಡಾ. ಎ ಜಯಕುಮಾರ್ ಶೆಟ್ಟಿ ಹೇಳಿದರು.
ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಡಿಸೆಂಬರ್ 17 ರಂದು ಭೌತಶಾಸ್ತ್ರ ವಿಭಾಗದಿಂದ ಸೆಮಿನಾರ್ ಹಾಲ್‌ನಲ್ಲಿ ಆಯೋಜಿಸಿದ ಫಿಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ವಿಷಯವನ್ನು ಕಲಿಯುವ ಮೂಲಕ ಉದ್ಯೋಗವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯ ನಮ್ಮಲ್ಲಿದೆ. ಈ ಮೂಲಕ ವೇಗವಾಗಿ ಜಗತ್ತನ್ನು ಬದಲಾಯಿಸಬಹುದು. ಸಾಮಾಜಿಕ ಅಭಿವೃದ್ಧಿಗಾಗಿ ಅವುಗಳಿಗೆ ಪೂರಕವಾಗುವಂತಹ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕತೆಯತ್ತ
ಸಾಗುತ್ತದೆ ಎಂದರು.
ಮುಖ್ಯ ಅತಿಥಿ, ಮೂಡಬಿದ್ರೆ ಶ್ರೀ ಮಹಾವೀರ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ರಮೇಶ್ ಭಟ್ ಎಂ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಆಸಕ್ತಿದಾಯಕ ವಿಚಾರ ವಿನಿಮಯದಿಂದ ಜ್ಞಾನ ವೃದ್ಧಿಯಾಗುತ್ತದೆ. ಇಂತಹ ಉಪಯುಕ್ತ ಕಾರ್ಯಕ್ರಮ ವಿದ್ಯಾರ್ಥಿ ಜೀವನದಲ್ಲಿ ಬಹುಮುಖ್ಯವೆಂದು ಅಭಿಪ್ರಾಯಪಟ್ಟರು.
ಎಲ್ಲಾ ಚಟುವಟಿಕೆಗಳಲ್ಲೂ ನಮ್ಮನ್ನು ನಾವು ತೊಡಗಿಸಿಕೊಂಡಾಗ ಸರ್ವತೋಮುಖ ಬೆಳವಣಿಗೆ ಸಾಧ್ಯ. ಶೈಕ್ಷಣಿಕ ಹಂತದಲ್ಲೇ ಉತ್ತಮ ವ್ಯಕ್ತಿತ್ವವನ್ನು ಅಳವಡಿಸಿಕೊಂಡಾಗ ನಮ್ಮ ಅಭಿವೃದ್ಧಿ ಸಾಧ್ಯವಗುತ್ತದೆ ಎಂದು
ಎಸ್. ಡಿ. ಎಂ. ಸ್ನಾತಕೋತ್ತರ ಕೇಂದ್ರ‍್ರದ ಡೀನ್ ಡಾ. ವಿಶ್ವನಾಥ ಪಿ ಹೇಳಿದರು.
ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ಎಸ್, ಸಹಾಯಕ ಪ್ರಾದ್ಯಾಪಕ ಡಾ. ಹಾಲೇಶಪ್ಪ ಉಪಸ್ಥಿತರಿದ್ದರು. ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ವಿಷ್ಣು ಕಾರ್ಯಕ್ರಮ ನಿರೂಪಿಸಿ, ಸಂಧ್ಯಾ ವಂದಿಸಿದರು.