ಉಜಿರೆ: ಎಸ್.ಡಿ.ಎಂ ಕಾಲೇಜಿನ ವಾಣಿಜ್ಯ ವಿಭಾಗದಿಂದ ʻಉದಯೋತ್ಸವʼ
ಉಜಿರೆ ಡಿ. 04, 2022: ತನ್ನ ಪ್ರತೀ ತರಗತಿಯಲ್ಲೂ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವ ಪ್ರೇರಕ ಶಕ್ತಿಯಾಗಿ, ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಮೂಲಕ ಸಾಕಷ್ಟು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಅತ್ಯುತ್ತಮ ಶಿಕ್ಷಕ ಡಾ. ಉದಯಚಂದ್ರ ಪಿ.ಎನ್ ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಜಯಕುಮಾರ್ ಶೆಟ್ಟಿ ಹೇಳಿದರು.
ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ.ಪಿ.ಎನ್ ಉದಯಚಂದ್ರ ಅವರ ಸೇವಾನಿವೃತ್ತಿ ಹಿನ್ನೆಲೆಯಲ್ಲಿ ವಾಣಿಜ್ಯ ವಿಭಾಗ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಕೇಂದ್ರ, ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ವಿಭಾಗ ಹಾಗೂ ಬಿ.ವೋಕ್ ರೀಟೈಲ್ ಹಾಗೂ ಸಪ್ಲೈ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ್ದ ʻಉದಯೋತ್ಸವʼ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಸ್.ಡಿ.ಎಂ ಕಾಲೇಜಿನಲ್ಲಿ 37 ವರ್ಷ ಸೇವೆ ಸಲ್ಲಿಸಿದ ಡಾ. ಪಿ.ಎನ್ಉದಯಚಂದ್ರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಪಣತೊಟ್ಟವರು. ಅಲ್ಲದೇ ವಿಭಾಗದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿ ವಾಣಿಜ್ಯ ವಿಭಾಗವನ್ನು ಅಭಿವೃದ್ಧಿಪಡಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಸಸ್ಯಶಾಸ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಎ.ಕುಮಾರ ಹೆಗ್ಡೆ ಮಾತನಾಡಿ ಉದಯಚಂದ್ರರ ಕಾರ್ಯಪ್ರವೃತ್ತಿ ಹಾಗೂ ಹವ್ಯಾಸಗಳ ಕುರಿತು ವರ್ಣಿಸಿದರು. ಬರವಣಿಗೆ ಕಲೆ, ಸಾಹಿತ್ಯ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ಇವರ ನಿವೃತ್ತ ಜೀವನ ಸುಗಮವಾಗಿರಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮೂಡುಬಿದಿರೆ ಧವಳ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ರವೀಶ್, ಉಪನ್ಯಾಸಕ ಪ್ರೊ.ಅಜಯಕುಮಾರ ಕೊಂಬ್ರಬೈಲ್ , ಸುದರ್ಶನ್ ಬೇಲೂರು ಉದಯಚಂದ್ರ ನಿವೃತ್ತಿ ಜೀವನಕ್ಕೆ ಶುಭಕೋರಿದರು.
ವಾಣಿಜ್ಯ ವಿಭಾಗದ ವಿವಿಧ ಶಾಖೆಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಉದಯಚಂದ್ರ ಅವರೊಂದಿಗಿನ ಒಡನಾಟದ ಕುರಿತು ತಮ್ಮ ಅನುಭವ ಹಂಚಿಕೊಂಡರು.
ಉಪನ್ಯಾಸಕರು, ವಿದ್ಯಾರ್ಥಿಗಳು ಡಾ.ಯು.ಪಿ.ಉದಯಚಂದ್ರ-ಮನೋರಮಾ ದಂಪತಿಗಳನ್ನು ಸನ್ಮಾನಿಸಿ, ಅವರ ವೃತ್ತಿ ಜೀವನವನ್ನು ಮೆಲುಕುಹಾಕಿಸುವ ವಿಷೇಶ ಆಲ್ಬಂ ಉಡುಗೊರೆಯಾಗಿ ನೀಡಿದರು.
ಕಾರ್ಯಕ್ರಮವನ್ನು ವಾಣಿಜ್ಯವಿಭಾಗದ ಡೀನ್ ಪ್ರೊ.ಶಕುಂತಲಾ ಸ್ವಾಗತಿಸಿ, ವಾಣಿಜ್ಯವಿಭಾಗದ ಮುಖ್ಯಸ್ಥೆ ಡಾ.ರತ್ನಾವತಿ ವಂದಿಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ವಾಣಿಜ್ಯ ವಿಭಾಗದಲ್ಲಿ ಸೇವೆಸಲ್ಲಿಸಿದ ಉಪನ್ಯಾಸಕರು, ಹಳೇ ವಿದ್ಯಾರ್ಥಿಗಳು ಭಾಗವಹಿಸಿದ್ದರು.