ಎಲೆ ಚುಕ್ಕಿ ರೋಗ: ಮುನ್ನೆಚ್ಚರಿಕಾ ಕ್ರಮಕ್ಕೆ ರೂ. 10 ಕೋಟಿ ಅನುದಾನ
ಕೊಪ್ಪ (ಚಿಕ್ಕಮಗಳೂರು), ನ 27, 2022: ಅಡಿಕೆ ಬೆಳೆಗೆ ತಗಲಿರುವ ಎಲೆ ಚುಕ್ಕಿ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದ ನಾಲ್ಕೂ ಜಿಲ್ಲೆಗಳಿಗೆ ಈ ಮೊತ್ತವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರಿಹರಪುರ ಹೆಲಿಪ್ಯಾಡ್ ನಲ್ಲಿ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಸರಕಾರದ ನಿರ್ದೇಶನದಂತೆ ವಿಶ್ವವಿದ್ಯಾಲಯದ ತಂಡ ಅಧ್ಯಯನ ಕೈಗೊಂಡಿದೆ. ಕೇಂದ್ರ ಸರ್ಕಾರದ ತಜ್ಞರು ಕೂಡ ಚಿಕ್ಕಮಗಳೂರಿಗೆ ಬಂದು ಅಧ್ಯಯನ ಮಾಡಿದ್ದಾರೆ. ನಿರಂತರವಾಗಿ ಮಳೆ ಇರುವುದರಿಂದ ಹಾಗೂ ಗಾಳಿಯಿಂದ ಇದು ಹರಡುತ್ತಿದೆ. ಫಂಗಸ್ ನಿವಾರಣೆಗೆ ಔಷಧಿ ಸಿಂಪಡನೆ ಮಾಡಲಾಗುವುದು. ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ವಿಜ್ಞಾನಿಗಳು ಶಿಫಾರಸು ಮಾಡುವ ಕ್ರಮಗಳನ್ನು ಕೂಡಲೇ ಕೈಗೊಳ್ಳಲಾಗುವುದು ಎಂದರು.
ಶಾಸಕ ಕುಮಾರಸ್ವಾಮಿ ಅವರ ಮೇಲೆ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಈಗಾಗಲೇ ಮಾತನಾಡಿ ಎಲ್ಲಾ ರೀತಿಯ ರಕ್ಷಣೆ ನೀಡಲು ಹಾಗೂ ತನಿಖೆ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.