ಬಳ್ಪ ಗ್ರಾಮದಲ್ಲಿ ಪೂರ್ಣಗೊಂಡ ಕಾಮಗಾರಿಗಳ ಪಟ್ಟಿ ಒದಗಿಸಲು ಸಂಸದರ ಸೂಚನೆ

 ಬಳ್ಪ ಗ್ರಾಮದಲ್ಲಿ ಪೂರ್ಣಗೊಂಡ ಕಾಮಗಾರಿಗಳ ಪಟ್ಟಿ ಒದಗಿಸಲು ಸಂಸದರ ಸೂಚನೆ
Share this post

ಮಂಗಳೂರು,ಆ.23, 2022: ಸಂಸದರ ಆದರ್ಶ ಗ್ರಾಮದಡಿ ಆಯ್ಕೆಯಾಗಿರುವ ಕಡಪ ತಾಲೂಕಿನ ಬಳ್ಪ ಗ್ರಾಮದ ಸಂಪೂರ್ಣ ಅಭಿವೃದ್ಧಿಗಾಗಿ ಹಲವಾರು ಕಾಮಗಾರಿಗಳು ಹಾಗೂ ವಿವಿಧ ಯೋಜನೆಗಳ ಅನುಷ್ಠಾನಕ್ಕೆ 60 ಕೋಟಿ ರೂ.ಗಳನ್ನು ಒದಗಿಸಲಾಗಿದೆ, ಬರುವ ಸೆಪ್ಟಂಬರ್ 2ರಂದು ಅಲ್ಲಿ ಪೂರ್ಣಗೊಂಡಿರುವ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಇನ್ನೂ ನೆರವೇರಿಸಬೇಕಾಗಿರುವ ಕಾಮಗಾರಿಗಳಿಗೆ ಶಿಲನ್ಯಾಸ ನೆರವೇರಿಸಲು ಪಟ್ಟಿಯೊಂದನ್ನು ಸಿದ್ದಪಡಿಸುವಂತೆ ಸಂಸದರಾದ ನಳಿನ್ ಕುಮಾರ್ ಕಟೀಲ್ ಬಳ್ಪ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.

ಅವರು ಆ. 23ರ ಮಂಗಳವಾರ ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಸದರ ಆದರ್ಶ ಗ್ರಾಮದಲ್ಲಿ ದೇಶದ ಯಾವುದೇ ಗ್ರಾಮದಲ್ಲೂ 60 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿಲ್ಲ, ಜಿಲ್ಲೆಯ ಬಳ್ಪ ಗ್ರಾಮದಲ್ಲಿ ಮಾತ್ರ ಇಷ್ಟು ಮೊತ್ತದ ಹಣವನ್ನು ಖರ್ಚು ಮಾಡಲಾಗುತ್ತಿದೆ, ಅಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳನ್ನು ಸೆಪ್ಟಂಬರ್ 2ರಂದು ಲೋಕಾರ್ಪಣೆ ಮಾಡಲಾಗುವುದು ಹಾಗೂ ಬಾಕಿ ಉಳಿದ ಕಾಮಗಾರಿಗಳಿಗೆ ಶಿಲನ್ಯಾಸ ನೆರವೇರಿಸಲು ಪಟ್ಟಿ ಸಿದ್ದಪಡಿಸುವಂತೆ ತಿಳಿಸಿದರು.

ಕಲ್ಲಡ್ಕ ಫ್ಲೈ ಓವರ್ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸಂಸದರು ಸೂಚಿಸಿದಾಗ, ಮುಂದಿನ ವರ್ಷದ ಅಕ್ಟೋಬರ್ ಅಥವಾ ನವೆಂಬರ್‍ನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ ತಿಳಿಸಿದರು.

ಜಿಲ್ಲೆಗೊಂದು ಗೋಶಾಲೆ ಸ್ಥಾಪನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 47.50 ಲಕ್ಷ ರೂ.ಗಳು ಬಿಡುಗಡೆಯಾಗಿವೆ, 10 ಎಕರೆ ಜಾಗಕ್ಕೆ ತಂತಿ ಮೇಲೆ ಅಳವಡಿಸಲಾಗುತ್ತಿದ್ದು, ಈಗಾಗಲೇ ಎರಡು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ, ಅವುಗಳಲ್ಲಿ ನೀರು ಲಭಿಸಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಸಭೆಗೆ ಮಾಹಿತಿ ನೀಡಿದರು.

ಲೋಕೋಪಯೋಗಿ ಇಲಾಖೆ ವತಿಯಿಂದ ಎಸ್‍ಸಿಪಿ-ಟಿಎಸ್‍ಪಿ ಯೋಜನೆಯಡಿ ಬಾಕಿ ಉಳಿದಿದ್ದ ಕಾಮಗಾರಿಗಳು ಮಳೆಯಿಂದಾಗಿ ತಡೆಹಿಡಿಯಲಾಗಿದ್ದು, ಮುಂದಿನ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ್ ಸಭೆಗೆ ತಿಳಿಸಿದರು.

ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ ಕುರಿತಂತೆ, ಮುಂಬರುವ ಸೆಪ್ಟೆಂಬರ್ 15ರೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ನಂತರ ಪಾರ್ಕ್ ಸ್ಥಾಪನೆಯ ಪ್ರಕ್ರಿಯೆಗಳು ಶೀಘ್ರವಾಗಲಿವೆ ಎಂದು ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ವಿವರಿಸಿದರು.

ಪ್ರಧಾನ ಮಂತ್ರಿ ಸ್ವಾ-ನಿಧಿ ಯೋಜನೆಯ ಮೊದಲ ಹಾಗೂ ಎರಡನೇ ಹಂತದಲ್ಲಿ ಬಾಕಿ ಇರುವ ಅರ್ಹ ಫಲಾನುಭವಿಗಳ ಸಾಲ ಸೌಲಭ್ಯವನ್ನು ಕೂಡಲೇ ಮಂಜೂರು ಮಾಡಬೇಕು ಸಂಸದರು ಸೂಚನೆ ನೀಡಿದರು, ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಮೊದಲ ಹಂತದಲ್ಲಿ 240 ಅರ್ಜಿಗಳು ಬಾಕಿ ಉಳಿದಿದ್ದು ಕೂಡಲೇ ಅವುಗಳನ್ನು ಇತ್ಯರ್ಥ ಪಡಿಸಲಾಗುವುದು ಎಂದು ತಿಳಿಸಿದರು.

ಪ್ರಧಾನಮಂತ್ರಿ ಜೀವನ್ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆಯಲ್ಲಿ ಜಿಲ್ಲೆಗೆ 14 ಲಕ್ಷ ಗುರಿ ನೀಡಲಾಗಿದ್ದು, 8 ಲಕ್ಷ ರೈತರು ನೋಂದಣಿಯಾಗಿದ್ದು ಉಳಿದ ಫಲಾನುಭವಿಗಳ ಆಯ್ಕೆಗೆ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಕೂಡಲೇ ಕ್ರಮವಹಿಸುವಂತೆ ಜಿಲ್ಲಾ ಪಂಚಾಯತ್ ಸಿಇಓ ಸೂಚಿಸಿದರು.

14ನೇ ಹಣಕಾಸು ಯೋಜನೆಯಡಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬಾಕಿ ಉಳಿದ ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ ಹಾಗೂ ಕಾಮಗಾರಿಗಳ ಬಿಲ್ಲು ತಯಾರಿಸಿ ಪಾವತಿಗಾಗಿ ಸಲ್ಲಿಸಲಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಸಭೆಗೆ ಮಾಹಿತಿ ನೀಡಿದರು.

ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ರಹಿತ ಮನೆಗಳಿಗೆ ಮಂಗಳೂರು ವಿಭಾಗದಲ್ಲಿ ಮೊದಲ ಹಂತದಲ್ಲಿ 25 ಮನೆಗಳಿಗೆ ಹಾಗೂ ಎರಡನೇ ಹಂತದಲ್ಲಿ 31 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿ ಸಭೆಗೆ ತಿಳಿಸಿದರು.

ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯಾದ ರೈತ ವಿದ್ಯಾನಿಧಿಯಡಿ ಜಿಲ್ಲೆಯ ರೈತರ ಮಕ್ಕಳಿಗೆ ಸೌಲಭ್ಯ ಒದಗಿಸಿಕೊಡಲು ಕೃಷಿ ಇಲಾಖೆ ಮತ್ತಷ್ಟು ಚುರುಕಾಗಬೇಕು,  ಇಲಾಖೆಯ ಜಂಟಿ ನಿರ್ದೇಶಕರು ಜಿಲ್ಲೆಯಲ್ಲಿ ಹೆಚ್ಚು ಮಕ್ಕಳನ್ನು ವಿದ್ಯಾ ನಿಧಿ ಯೋಜನೆಯಡಿ ನೋಂದಾಯಿಸಲಾಗಲು ಅಗತ್ಯ ಚಟುವಟಿಕೆಗಳನ್ನು ಕೈಗೊಳ್ಳಬೇಕು, ಜಿಲ್ಲೆಯಲ್ಲಿ ಇದೂವರೆಗೆ 35,000 ವಿದ್ಯಾರ್ಥಿಗಳು ವಿದ್ಯಾನಿಧಿ ಯೋಜನೆಯಡಿ ನೋಂದಾಯಿತರಾಗಿದ್ದಾರೆ, ಒಂದೂವರೆ ಲಕ್ಷದಷ್ಟು ಮಕ್ಕಳನ್ನು ನೋಂದಾಯಿಸುವ ಗುರಿ ಹಾಕಿಕೊಳ್ಳಬೇಕೆಂದು ಜಿ.ಪಂ. ಸಿಇಓ ಡಾ. ಕುಮಾರ್ ಅವರು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸೀತಾ ಅವರಿಗೆ ಸೂಚಿಸಿದರು.

ಈ ಬಾರಿ ಹೆಚ್ಚು ಮಳೆಯಾದ ಕಾರಣ ಮುಂಗಾರು ಹಂಗಾಮಿನಲ್ಲಿ 300 ಎಕರೆ ಪ್ರದೇಶದಷ್ಟು ಭತ್ತವನ್ನು ನಾಟಿ ಮಾಡಲು ಆಗಲಿಲ್ಲ, ಹಿಂಗಾರು ಹಂಗಾಮಿನಲ್ಲಿ ಆ ವ್ಯತ್ಯಾಸವನ್ನು ಸರಿಪಡಿಸಲಾಗುವುದು, ಜಿಲ್ಲೆಯಲ್ಲಿ ಪಂಚಮುಖಿ ಸಹ್ಯಾದ್ರಿ ಹಾಗೂ ಕೆಂಪು ಮುಖ ಸಹ್ಯಾದ್ರಿ ಭತ್ತದ ತಳಿಗಳಿಗೆ ಹೆಚ್ಚಿನ ಬೇಡಿಕೆಯಿದೆ, ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಈ ತಳಿಗಳನ್ನು ರೈತರಲ್ಲೇ ಜನಪ್ರಿಯಗೊಳಿಸಲಾಗುತ್ತಿದೆ, ಈ ಬಾರಿಯ ನೆರೆಯಿಂದಾಗಿ 220 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ, ಪರಿಹಾರ ಆಪ್‍ನಲ್ಲಿ ದಾಖಲಿಸಲು ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಆಪ್ ತೆರೆದ ಕೂಡಲೇ ಬೆಳೆ ಹಾನಿಗೀಡಾದ ರೈತರನ್ನು ಅದರಲ್ಲಿ  ನೋಂದಾಯಿಸಲಾಗುವುದು ಎಂದು ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.

ಜಲ್ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಮೊದಲ ಹಂತದ ಕಾಮಗಾರಿಗಳನ್ನು ಸೆಪ್ಟೆಂಬರ್ 15ರೊಳಗೆ ಪೂರ್ಣಗೊಳಿಸಲೇಬೇಕೆಂದು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ, ಅದರಂತೆ ಮಂಗಳೂರು ತಾಲೂಕು ಹೊರತು ಪಡಿಸಿದರೆ ಉಳಿದ ತಾಲೂಕುಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ, ಮಂಗಳೂರು ತಾಲೂಕಿನಲ್ಲಿ ಸೆಪ್ಟೆಂಬರ್ 15ರೊಳಗೆ ಮೊದಲ ಹಂತದ ಕಾಮಗಾರಿಗಳು ಪೂರ್ಣಗೊಳ್ಳದಿದ್ದರೆ ಸಂಬಂಧಿಸಿದ ಎಂಜಿನಿಯರ್ ಮತ್ತು ಕಂಟ್ರಾಕ್ಟರ್‍ಗಳನ್ನು ನೇರ ಹೊಣೆ ಮಾಡಲಾಗುವುದು ಹಾಗೂ ಕ್ರಮಕೈಗೊಳ್ಳಲಾಗುವುದು, ಈ ಬಗ್ಗೆ ಸಂಬಂಧಿಸಿದವರಿಗೆ ನೋಟಿಸ್ ಸಹ ನೀಡಲಾಗಿದೆ ಎಂದು ಜಿ.ಪಂ. ಸಿಇಓ ಡಾ. ಕುಮಾರ್ ಎಚ್ಚರಿಕೆ ನೀಡಿದರು.

ಮಹಾತ್ಮ ಗಾಂಧಿ ಗ್ರಾಮೀಣ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗೆ  2022ರ ಜೂನ್ ಮಾಹೆಗೆ ನಿಗದಿ ಪಡಿಸಲಾಗಿದ್ದ ಗುರಿಯನ್ನು ಸಾಧಿಸಲಾಗಿದೆ, ಈ ಯೋಜನೆಯಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಕೆರೆ ಅಭಿವೃದ್ಧಿ ಪಡಿಸುವ ಹಾಗೂ ಶಾಲೆಯ ಕ್ರೀಡಾಂಗಣವನ್ನು ನಿರ್ಮಿಸುವ ಗುರಿ ಹೊಂದಲಾಗಿದೆ, ಕೆರೆಗಳ ಅಭಿವೃದ್ಧಿ ಹಾಗೂ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ 5 ಕಿ.ಮೀ.ಗಳ ರಸ್ತೆ ಅಭಿವೃದ್ಧಿಪಡಿಸುವ ಕೆಲಸ ಆಗುತ್ತಿದೆ, ಶಾಲೆಗಳಲ್ಲಿ ಮಕ್ಕಳ ಶೌಚಾಲಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 174 ಶಾಲೆಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ, ಅಂಗನವಾಡಿಗಳಲ್ಲಿ ಕಾಂಪೌಂಡ್ ನಿರ್ಮಾಣ ಕಾರ್ಯ ಆರಂಭಗೊಂಡಿದೆ ಎಂದು ಡಾ. ಕುಮಾರ್ ತಿಳಿಸಿದರು.

ನಮ್ಮ ಕ್ಲಿನಿಕ್ ಯೋಜನೆಯಡಿ ಜಿಲ್ಲೆಗೆ 14 ಕ್ಲಿನಿಕ್‍ಗಳು ದೊರೆತಿದ್ದು, ಮಂಗಳೂರು ನಗರದಲ್ಲಿ 7 ಹಾಗೂ ಉಳಿದ ಏಳನ್ನು ವಿವಿಧ ತಾಲೂಕುಗಳಲ್ಲಿ ಸ್ಥಾಪಿಸಲಾಗುವುದು, ಈ ಕ್ಲಿನಿಕ್ ಗಳಲ್ಲಿ ವೈದ್ಯರು, ನರ್ಸ್ ಹಾಗೂ ಅಗತ್ಯ ಸಿಬ್ಬಂದಿಗಳಿರಲಿದ್ದಾರೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇರದ ಕಡೆಗೆ ಈ ಕ್ಲಿನಿಕ್‍ಗಳನ್ನು ಆರಂಭಿಸುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಈ ವೇಳೆ ಪ್ರತಿಕ್ರಿಯಿಸಿದ ಸಿಇಓ ಡಾ. ಕುಮಾರ್ ಅವುಗಳನ್ನು ಕಟ್ಟಡ ನಿರ್ಮಾಣ ಕಾರ್ಮಿಕರು ಹೆಚ್ಚಿನ ಪ್ರದೇಶಗಳಲ್ಲಿ ಆರಂಭಿಸುವಂತೆ ಸಲಹೆ ನೀಡಿದರು.

ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಪ್ರಧಾನ ಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಇದುವರೆಗೂ ಕೈಗೊಂಡ ಕಾಮಗಾರಿಗಳಲ್ಲಿ ಪೂರ್ಣಗೊಂಡ ಕಾಮಗಾರಿಗಳ ಪಟ್ಟಿಗಳನ್ನು ನೀಡುವಂತೆ ಸಂಸದರು ತಿಳಿಸಿದರು. ಈ ಕಾಮಗಾರಿಗಳನ್ನು ಪ್ರಧಾನ ಮಂತ್ರಿಗಳಿಂದ ಉದ್ಘಾಟಿಸಲು ಅನುಕೂಲವಾಗುವುದು ಹಾಗಾಗಿ ಕೂಡಲೇ ಪಟ್ಟಿ ಒದಗಿಸುವಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ತಿಳಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!