ಉಜಿರೆ: ಆ 15 ರಂದು ವಿಶಿಷ್ಠ ರೀತಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ
ಉಜಿರೆ, ಆ 13, 2022: ರಾಜ್ಯ ಸಭಾ ಸದಸ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸೋಮವಾರ ಬೆಳಗ್ಗೆ ಗಂಟೆ 8.45ಕ್ಕೆ ಉಜಿರೆಯಲ್ಲಿ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಅಮೃತಮಹೋತ್ಸವದ ಸಂದೇಶ ನೀಡುವರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ಕೆ.ಜಿ. ಯಿಂದ ಪಿ.ಜಿ. ವರೆಗಿನ ಎಲ್ಲಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಶಿಕ್ಷಕವೃಂದ, ಎನ್.ಸಿ.ಸಿ. ಕೆಡೆಟ್‍ಗಳು, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಸಮಾರಂಭದಲ್ಲಿ ಭಾಗವಹಿಸುವರು.
ವಿಶಿಷ್ಠ ಕಾರ್ಯಕ್ರಮ: ಹೆಗ್ಗಡೆಯವರ ಪರಿಕಲ್ಪನೆ ಮತ್ತು ನಿರ್ದೇಶನದಂತೆ ವಿನೂತನ ಕಾರ್ಯಕ್ರಮ ಒಂದನ್ನು ಆಯೋಜಿಸಲಾಗಿದೆ.
ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ದೇಶದ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸುತ್ತಾರೆ. ಇಷ್ಟರ ವರೆಗೆ ದೇಶದ ಪ್ರಗತಿಗೆ ಹಿರಿಯರು ಶ್ರಮಿಸಿದ್ದಾರೆ. ಮುಂದಿನ ಹೊಣೆಗಾರಿಕೆಯನ್ನು ಯುವಜನತೆಗೆ ಒಪ್ಪಿಸುವ ಸೃಷ್ಟಿಯಿಂದ 75 ಮಂದಿ 75 ವರ್ಷ ಪೂರೈಸಿದ ಹಿರಿಯ ನಾಗರಿಕರಿಂದ 75 ಮಂದಿ ಯುವಕ, ಯುವತಿಯರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿ ದೇಶಪ್ರೇಮ, ದೇಶಭಕ್ತಿಯೊಂದಿಗೆ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವ ಕರ್ತವ್ಯ ಮತ್ತು ಹೊಣೆಗಾರಿಕೆಯನ್ನು ಹಸ್ತಾಂತರಿಸಲಾಗುವುದು.
ಗುರು-ಹಿರಿಯರ ಪಕ್ವ ಅನುಭವ ಮತ್ತು ಮಾರ್ಗದರ್ಶನದಲ್ಲಿ ಯುವಜನತೆ ರಾಷ್ಟ್ರ ನಿರ್ಮಾಣದ ಪವಿತ್ರ ಕಾರ್ಯದಲ್ಲಿ ಭಾಗವಹಿಸಬೇಕೆಂಬುದು ಹೆಗ್ಗಡೆಯವರ ಆಶಯ ಮತ್ತು ಅಪೇಕ್ಷೆಯಾಗಿದೆ.