ಮಂಕಿಪಾಕ್ಸ್ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳಿಗೆ ಜಿಲ್ಲಾಧಿಕಾರಿ ಸೂಚನೆ

 ಮಂಕಿಪಾಕ್ಸ್ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳಿಗೆ ಜಿಲ್ಲಾಧಿಕಾರಿ ಸೂಚನೆ
Share this post

ಮಂಗಳೂರು,ಜು.19, 2022: ನಗರದ ಹೊರವಲಯದಲ್ಲಿರುವ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾನ್ಪರೆನ್ಸ್ ಹಾಲ್‍ನಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಅಧ್ಯಕ್ಷತೆಯಲ್ಲಿ ಮಂಕಿಪಾಕ್ಸ್ ಹರಡದಂತೆ ಕೈಗೊಳ್ಳಬೇಕಾದ ಮುಂಜಾಗತಾ ಕ್ರಮಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.

ಸಭೆಯ ಆರಂಭದಲ್ಲಿ ಕೇರಳ ರಾಜ್ಯದಲ್ಲಿ ಮಂಕಿ ಫಾಕ್ಸ್ ಪ್ರಕರಣಗಳು ಪತ್ತೆಯಾದ ಬಗ್ಗೆ ವಿವರಿಸಿದ ಜಿಲ್ಲಾಧಿಕಾರಿಯವರು, ಹೆಚ್ಚಿನ ಕೇರಳ ಪ್ರಯಾಣಿಕರು ಮಂಗಳೂರಿನ ವಿಮಾನ ನಿಲ್ದಾಣದಿಂದ ಕೇರಳಕ್ಕೆ ರಸ್ತೆ ಮಾರ್ಗವಾಗಿ ಸಂಚರಿಸುವುದರಿಂದ, ಮಂಗಳೂರಿನ ವಿಮಾನ ನಿಲ್ದಾಣದ ಸಿಬ್ಬಂದಿಗಳಿಗೆ ಮಂಕಿ ಫಾಕ್ಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಏರ್‍ಲೈನ್ಸ್ ಸಿಬ್ಬಂದಿಗಳು ವಿಮಾನ ಲ್ಯಾಂಡಿಂಗ್ ಆಗುವ ಮೊದಲೆ ವಿಮಾನದಲ್ಲಿ ಜ್ವರ ಹಾಗೂ ಚರ್ಮದ ಗುಳ್ಳೆಗಳು ಬರುವರನ್ನು ಪತ್ತೆ ಹಚ್ಚಬೇಕು, ಆ ಲಕ್ಷಣಗಳುಳ್ಳವರು ಕಂಡು ಬಂದರೆ ಅವರನ್ನು ಪ್ರತ್ಯೇಕಿಸಬೇಕು ಹಾಗೂ ವಿಮಾನ ನಿಲ್ದಾಣದಲ್ಲಿರುವ ಆರೋಗ್ಯಾಧಿಕಾರಿಗಳಿಂದ ತಪಾಸಣೆ ಮಾಡಿಸಬೇಕು ಹಾಗೂ ಆಗಿಂದಾಗ್ಗೆ ಇದರ ಬಗ್ಗೆ ಮನವರಿಕೆ ಮಾಡಬೇಕು. ವಿಮಾನ ಲ್ಯಾಂಡ್ ಆದ ಮೇಲೆ ಪ್ರಯಾಣಿಕರನ್ನು ಮೇಲ್ವಿಚಾರಣೆ ಮಾಡುವ ಸಿಬ್ಬಂದಿಗಳು ಜ್ವರ ಹಾಗೂ ಚರ್ಮದ ಗುಳ್ಳೆಯ ಬಗ್ಗೆ ಪ್ರಯಾಣಿಕರಿಂದ ಖಚಿತ ಪಡಿಸಿಕೊಳ್ಳಬೇಕು. ರೋಗ ಲಕ್ಷಣಗಳಿರುವ ಪ್ರಯಾಣಿಕರನ್ನು (ಸಂಶಯಾಸ್ಪದ) ಪ್ರತ್ಯೇಕಿಸಿ ಆಂಬುಲೆನ್ಸ್ ನಲ್ಲಿ ಈಗಾಲೇ ವೆನ್ ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ತೆರೆಯಲಾದ ಮಂಕಿ ಫಾಕ್ಸ್ ಐಸೋಲೇಶನ್ ವಾರ್ಡ್‍ಗೆ ದಾಖಲಿಸುವಂತೆ ಸೂಚಿಸಿದರು.

ಮಂಕಿ ಫಾಕ್ಸ್ ಹರಡದಂತೆ ಜಾಗೃತಿ ಮೂಡಿಸುವ ಕನ್ನಡ, ಮಲಯಾಳಂ, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಐ.ಇ.ಸಿ ಸ್ಟ್ಯಾಂಡಿಗಳನ್ನು ಸಿದ್ದಪಡಿಸಲು ಜಿಲ್ಲೆಯ ಕೋವಿಡ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಮಾಹಿತಿ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಯವರು, ವಿಮಾನ ನಿಲ್ದಾಣದ ಅಧಿಕಾರಿಗಳು, ಸ್ಟ್ಯಾಂಡಿಗಳನ್ನು ತಯಾರಿಸಿ ವಿವಿಧ ಸ್ಥಳಗಳಲ್ಲಿ ಪ್ರರ್ದಶಿಸುವಂತೆ ಸೂಚಿಸಿದರು.

ಮಂಕಿಪಾಕ್ಸ್ ಜಾಗೃತಿ ಮೂಡಿಸುವ ವಿವಿಧ ಫೋಟೋಗಳನ್ನು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಾಟ್ಸ್ ಗ್ರೂಪ್‍ನಲ್ಲಿ ಶೇರ್ ಮಾಡಲು ವಿಮಾನ ನಿಲ್ದಾಣ ಆರೋಗ್ಯಾಧಿಕಾರಿ ಹಾಗೂ ಏರ್‍ಲೈನ್ಸ್ ಅಧಿಕಾರಿಯವರಿಗೆ ನಿರ್ದೇಶನ ನೀಡಿದರು.

ಮಂಕಿ ಫಾಕ್ಸ್ ಬಗ್ಗೆ ಕ್ಯಾಬ್ ಚಾಲಕರಿಗೆ ವಿಮಾನನಿಲ್ದಾಣದ ಅಧಿಕಾರಿಗಳು ಅರಿವು ಮೂಡಿಸಬೇಕು, ವಿಮಾನ ನಿಲ್ದಾಣದ ಡಿಜಿಟಲ್ ಡಿಸ್‍ಪ್ಲೇಯಲ್ಲಿ ಹಾಗೂ ಮೈಕ್ ಮೂಲಕ ಅರಿವು ಮೂಡಿಸಬೇಕು, ಮಂಕಿ ಫಾಕ್ಸ್ ಹರಡದಂತೆ ಜಿಲ್ಲಾಡಳಿತ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ, ಜನರು ಭಯಭೀತರಾಗದೆ ಅರಿವು ಮೂಡಿಸುವಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವಂತೆ ಕೋರಿದರು.

ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್ ಬಿ.ವಿ, ಕೋವಿಡ್ ನೋಡಲ್ ಅಧಿಕಾರಿ ಡಾ.ಅಶೋಕ್ ಹೆಚ್ , ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್ ಕೆ., ವಿಮಾನ ನಿಲ್ದಾಣದ ಹೆಡ್ ಆಪರೇಷನ್ ಆಫಿಸರ್ ಶ್ರೀಕಾಂತ್ ಟಾಟಾ, ವಿಮಾನ ನಿಲ್ದಾಣ ವೈದ್ಯಾಧಿಕಾರಿ ಡಾ. ನಿಶಿತ, ಏರ್‍ಲೈನ್ಸ್ ಮುಖ್ಯಸ್ಥರು, ಕಸ್ಟಮ್ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!