ಉಡುಪಿ ಜಿಲ್ಲೆಯಲ್ಲಿ 10000 ಜನರಿಂದ ಯೋಗಾಭ್ಯಾಸ ಕಾರ್ಯಕ್ರಮ: ಕೂರ್ಮಾರಾವ್ ಎಂ

 ಉಡುಪಿ ಜಿಲ್ಲೆಯಲ್ಲಿ 10000 ಜನರಿಂದ ಯೋಗಾಭ್ಯಾಸ ಕಾರ್ಯಕ್ರಮ: ಕೂರ್ಮಾರಾವ್ ಎಂ
Share this post

ಉಡುಪಿ, ಜುಲೈ 1, 2022: ಜನಸಾಮಾನ್ಯರಲ್ಲಿ ಯೋಗದ ಮಹತ್ವ ಹಾಗೂ ಅದರಿಂದ ದೇಹಕ್ಕೆ ಆಗುವ ಪ್ರಯೋಜನ ಕುರಿತು ಅರಿವು ಮೂಡಿಸುವುದು ಸೇರಿದಂತೆ ಯೋಗವನ್ನು ನಿತ್ಯ ಜೀವನದ ಒಂದು ಭಾಗವಾಗಿ ಅಳವಡಿಸಿಕೊಳ್ಳಲು ಆಗಸ್ಟ್ 12, 13 ಮತ್ತು 14 ರಂದು ಯೋಗಾಥಾನ್ ಕಾರ್ಯಕ್ರಮವನ್ನು ಜಿಲ್ಲಾಮಟ್ಟದಲ್ಲಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ ನಲ್ಲಿ, ಜಿಲ್ಲೆಯಲ್ಲಿ ಯೋಗಾಥಾನ್ ಕಾರ್ಯಕ್ರಮ ಏರ್ಪಡಿಸುವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ನಡೆಯುವ ಯೋಗಾಥಾನ್ ಕಾರ್ಯಕ್ರಮಕ್ಕೆ 10000 ಜನರಿಗೆ ಏಕಕಾಲದಲ್ಲಿ ಒಂದೆಡೆ ತರಬೇತಿ ನೀಡಿ,ಯೋಗವನ್ನು ತಮ್ಮ ದೈನಂದಿನ ಚಟುವಟಿಕೆಗಳನ್ನಾಗಿಸಿಕೊಳ್ಳುವುದರೊಂದಿಗೆ ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯವಂತರನ್ನಾಗಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ , ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡಲಾಗುವುದು ಎಂದರು.

ಯೋಗಾಭ್ಯಾಸಕ್ಕೆ ಸಾರ್ವಜನಿಕರು ಸೇರಲು ಅನುಕೂಲವಾಗುವ ಸೂಕ್ತ ಸ್ಥಳವನ್ನು ಗುರುತಿಸಿ, ಅಲ್ಲಿ ಎಲ್ಲಾ ಅಗತ್ಯ ಮೂಲ ಸೌಕರ್ಯಗಳನ್ನು ಕೈಗೊಳ್ಳಬೇಕು, ಕಾರ್ಯಕ್ರಮದಲ್ಲಿ ಜಿಲ್ಲೆಯ ಯೋಗ ಸಂಸ್ಥೆಗಳು, ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಲು ಅನುಕೂಲವಾಗುವಂತೆ ವಿವಿಧ ಸ್ವಯಂ ಸೇವಾ ಸಂಘಟನೆಗಳ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಹಕಾರವನ್ನು ಪಡೆಯುವಂತೆ ಸೂಚಿಸಿದರು.

ಜಿಲ್ಲೆಯ ಎಲ್ಲಾ ಸಾರ್ವಜನಿಕರು ಈ ಯೋಗಾಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ನೊಂದಣಿ ಮಾಡಲು, ಆನ್‌ಲೈನ್ ನೊಂದಣಿಯನ್ನು [email protected] ಹಾಗೂ ಆಫ್‌ಲೈನ್ ನೊಂದಣಿಯನ್ನು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮಾಡಬಹುದಾಗಿದೆ ಎಂದರು.

ಯುವಜನರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಕಾಲೇಜುಗಳಲ್ಲಿ ಪ್ರಾಂಶುಪಾಲರ ಸಹಕಾರ ಪಡೆಯಬೇಕು.ಯೋಗ ತರಬೇತಿ ನೀಡಲು ಯೋಗ ಶಿಕ್ಷಕರನ್ನು ಗುರುತಿಸಬೇಕು, ಕಾರ್ಯಕ್ರಮಕ್ಕೆ ಶಿಬಿರಾರ್ಥಿಗಳು ಭಾಗವಹಿಸಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.

ಉಡುಪಿ ಜಿಲ್ಲೆ ಘೋಷಣೆಯಾಗಿ 25 ವರ್ಷಗಳು ಸಂಪೂರ್ಣವಾಗುತ್ತಿದ್ದು, ಇದರ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!