ಎಸ್.ಡಿ.ಎಂ: ಡಾ.ಶಂಕರನಾರಾಯಣ, ಯುವರಾಜ ಪೂವಣಿ ಅವರಿಗೆ ಬೀಳ್ಕೊಡುಗೆ
ಉಜಿರೆ, ಜೂನ್ 17, 2022: ಎಸ್.ಡಿ.ಎಂ ಕಾಲೇಜಿನ ಅಧ್ಯಾಪಕರ ಸಂಘವು ಇತ್ತೀಚೆಗೆ ನಿವೃತ್ತರಾದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಡಾ.ಶಂಕರನಾರಾಯಣ ಮತ್ತು ಕಛೇರಿ ಅಧೀಕ್ಷಕ ಯುವರಾಜ ಪೂವಣಿ ಅವರನ್ನು ಸನ್ಮಾನಿಸಿ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು.
ಎಸ್.ಡಿ.ಎಂ ಸಂಸ್ಥೆಯ ಉಪಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಅವರು ಡಾ.ಶಂಕರನಾರಾಯಣ ಮತ್ತು ಯುವರಾಜ ಪೂವಣಿ ಅವರ ಸೇವಾ ವೈಖರಿ ಮತ್ತು ವೃತ್ತಿಪರ ಬದ್ಧತೆಯನ್ನು ಪ್ರಶಂಸಿಸಿದರು. ವೃತ್ತಿಪರ ಬದುಕಿನಲ್ಲಿ ಸಂಸ್ಥೆಯ ಬೆಳವಣಿಗೆಗಾಗಿ ಸದಾ ತಮ್ಮನ್ನು ತೊಡಗಿಸಿಕೊಂಡಾಗ ಸಂಸ್ಥೆಯ ಮುನ್ನಡೆ ಸಾಧ್ಯವಾಗುತ್ತದೆ. ಅಂಥ ಮುನ್ನಡೆಗೆ ಪೂರಕವಾದ ವೃತ್ತಿಬದ್ಧತೆಯು ಹಲವರಿಗೆ ಪ್ರೇರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಉದಯಚಂದ್ರ ಪಿ.ಎನ್. ಅವರು ನಿವೃತ್ತರಾದ ಡಾ.ಶಂಕರನಾರಾಯಣ ಮತ್ತು ಯುವರಾಜ ಪೂವಣಿ ಅವರಿಗೆ ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಾ.ಶಂಕರನಾರಾಯಣ ಅವರು ತಮ್ಮ ವೃತ್ತಿಪರ ಅನುಭವದ ವಿವಿಧ ನೆನಪುಗಳನ್ನು ಪ್ರಸ್ತಾಪಿಸಿದರು. ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಸಾಹಿತ್ಯದ ಪರಿಚಯ ಮತ್ತು ಭಾಷಾ ಸಾಮರ್ಥ್ಯ ರೂಢಿಸುವ ಅನಿವಾರ್ಯತೆಯನ್ನು ಮನಗಂಡು ಇಂಗ್ಲಿಷ್ ಬೋಧನೆಯಲ್ಲಿ ತೊಡಗಿಸಿಕೊಂಡ ಆರಂಭಿಕ ದಿನಗಳನ್ನು ಮೆಲುಕುಹಾಕಿದರು.
ಬೋಧನೆಯ ವೃತ್ತಿಯಲ್ಲಿ ತೊಡಗಿಸಿಕೊಂಡು ಸಂಸ್ಥೆಯ ವಿವಿಧ ಹಂತಗಳನ್ನು ನಿರ್ವಹಿಸುತ್ತಾ ಅನೇಕ ಮೌಲ್ಯಗಳನ್ನು ವ್ಯಕ್ತಿತ್ವದ ಭಾಗವಾಗಿಸಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.
ಒಟ್ಟು 34 ವರ್ಷಗಳ ಬೋಧಕ ವೃತ್ತಿಪರ ಅನುಭವವು ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಲು ನೆರವಾಯಿತು. ಸಾಹಿತ್ಯ ಸಂಶೋಧನೆಯಲ್ಲಿ ತೊಡಗಿಸಿಕೊಂಡ ನಂತರ ಹೊಸ ಆಯಾಮಗಳಲ್ಲಿ ಇಂಗ್ಲಿಷ್ ಮತ್ತು ಭಾಷೆಯ ಅನೇಕ ಸಾಧ್ಯತೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ಹೊಸ ಹುಮ್ಮಸ್ಸಿನೊಂದಿಗೆ ಕೆಲಸದಲ್ಲಿ ನಿರತರಾದಾಗ ವೃತ್ತಿಪರವಾದ ಹೊಸ ಟ್ರೆಂಡ್ ರೂಪಿಸಬಹುದು ಎಂಬ ಆತ್ಮವಿಶ್ವಾಸ ಮೂಡಿತು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಛೇರಿ ಅಧೀಕ್ಷಕ ಯುವರಾಜ ಪೂವಣಿ ಅವರು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯನ್ನು ಸೇರಿದ ನಂತರ ಹೊಸ ಬಗೆಯಲ್ಲಿ ವೃತ್ತಿಪರ ಕೌಶಲ್ಯವನ್ನು ರೂಢಿಸಿಕೊಳ್ಳಲು ಸಾಧ್ಯವಾಯಿತು ಎಂದರು.
ಸಂಸ್ಥೆಯ ಬೆಳವಣಿಗೆಯೊಂದಿಗೆ ಸಾಮಾಜಿಕ ಹಿತರಕ್ಷಣೆಯ ಆಲೋಚನೆಯನ್ನೂ ಕಾರ್ಯಗತಗೊಳಿಸಬಹುದು ಎಂಬ ಹೆಮ್ಮೆ ಮತ್ತು ಭರವಸೆಯನ್ನು ಎಸ್.ಡಿ.ಎಂ ಸಂಸ್ಥೆಯೊಂದಿಗಿನ ವೃತ್ತಿಪರ ನಂಟು ಮೂಡಿಸಿತು ಎಂದು ನುಡಿದರು.
ಡಾ.ಶಂಕರನಾರಾಯಣ ಬಗ್ಗೆ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪ್ರೊ.ಜಿ.ಆರ್.ಭಟ್, ಯುವರಾಜ ಪೂವಣಿ ಅವರ ಬಗ್ಗೆ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಶಲೀಪ್ ಕುಮಾರಿ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಎಸ್.ಡಿ.ಎಂ ಪದವಿಪೂರ್ವ ಕಾಲೇಜಿನ ಪ್ರೊ.ದಿನೇಶ ಚೌಟ ಉಪಸ್ಥಿತರಿದ್ದರು.
ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ. ಭಾಸ್ಕರ ಹೆಗಡೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ.ಶಂಕರನಾರಾಯಣ ಮತ್ತು ಯುವರಾಜ ಪೂವಣಿ ಅವರ ವೃತ್ತಿಪರ ವೈಶಿಷ್ಟ್ಯತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಹಾಯಕ ಪ್ರಾಧ್ಯಾಪಕ ಸುವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕಿ ವೈದೇಹಿ ವಂದಿಸಿದರು.