ಮರಳು ಗ್ರಾಹಕರ ಕುಂದುಕೊರತೆಗಳ ಆಲಿಕೆಗೆ ಸಹಾಯವಾಣಿ ಆರಂಭ: ಜಿಲ್ಲಾಧಿಕಾರಿ ಸೂಚನೆ

 ಮರಳು ಗ್ರಾಹಕರ ಕುಂದುಕೊರತೆಗಳ ಆಲಿಕೆಗೆ ಸಹಾಯವಾಣಿ ಆರಂಭ: ಜಿಲ್ಲಾಧಿಕಾರಿ ಸೂಚನೆ
Share this post

ಮಂಗಳೂರು,ಜೂ.17, 2022: ಜಿಲ್ಲೆಯ ಮರಳು ಗ್ರಾಹಕರ ಕುಂದುಕೊರತೆಗಳನ್ನು ಆಲಿಸಲು ತುರ್ತಾಗಿ ಸಹಾಯವಾಣಿಯೊಂದನ್ನು ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಬಿ.ಎಂ. ಲಿಂಗರಾಜ್ ಅವರಿಗೆ ನಿರ್ದೇಶನ ನೀಡಿದರು.

ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜೂ.17ರ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮರಳು ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮರಳು ಕುರಿತಂತೆ ಜಿಲ್ಲೆಯ ಸಾರ್ವಜನಿಕರ ಸಮಸ್ಯೆಗಳ ಆಲಿಸಲು ಹಾಗೂ ಅವುಗಳನ್ನು ಬಗೆಹರಿಸಲು ಅನುಕೂಲವಾಗುವಂತೆ ಆದಷ್ಟು ಬೇಗ ಜಿಲ್ಲೆಯಲ್ಲಿ ಸಹಾಯವಾಣಿಯೊಂದನ್ನು ಪ್ರಾರಂಭಿಸುವಂತೆ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳೂರು ತಾಲೂಕು ವ್ಯಾಪ್ತಿಯ ಫಲ್ಗುಣಿ ನದಿ ಪಾತ್ರದ ಆದ್ಯಪಾಡಿ ಅಣೆಕಟ್ಟು ಹಾಗೂ ಬಂಟ್ವಾಳ ತಾಲೂಕು ವ್ಯಾಪ್ತಿಯ ನೇತ್ರಾವತಿ ನದಿ ಪಾತ್ರದ ಶಂಬೂರು ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಹೂಳು ತೆಗೆಯುವ ಕೆಲಸ ಆರಂಭವಾಗಿದ್ದು, ಈಗಾಗಲೇ ಶೇಖರಣೆಗೊಂಡಿರುವ ಮರಳನ್ನು ಗ್ರಾಹಕರಿಗೆ ಸೂಕ್ತ ಸಮಯಲ್ಲಿ ತಲುಪಿಸುವ ವ್ಯವಸ್ಥೆ ಮಾಡುವಂತೆ ಅವರು ತಿಳಿಸಿದರು.

ಮರಳು ಮಿತ್ರ ಆಪ್ ಅಭಿವೃದ್ಧಿಗೊಂಡಿದ್ದು, ಮರಳಿನ ಗುಣಮಟ್ಟವನ್ನು ಗ್ರಾಹಕರ ಇದೀಗ ಆನ್‍ಲೈನ್ ಮೂಲಕವೂ ಪರಿಶೀಲಿಸಿಕೊಂಡು, ಆ ನಂತರ ಮರಳನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳಬಹುದಾಗಿದೆ, ಇದರ ಬಗ್ಗೆ ವ್ಯಾಪಕ ಪ್ರಚಾರವಾಗಬೇಕು, ಅದು ಜನಸಾಮಾನ್ಯರಿಗೆ ಉಪಯೋಗವಾಗಬೇಕು ಎಂದರು.

ಮರಳುಗಾರಿಕೆ ನಡೆಯುವ ಮತ್ತು ಅಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆಗಳಾಗದಂತೆ ಎಚ್ಚರಿಕೆ ವಹಿಸಬೇಕು, ಶಾಲೆಗಳಿರುವ ರಸ್ತೆಗಳಲ್ಲಿ ಮರಳು ವಾಹನಗಳು ನಿಧಾನವಾಗಿ ಚಲಿಸಬೇಕು, ಜಿಲ್ಲೆಯಲ್ಲಿ ಮರಳಿನ ಸಂಗ್ರಹ ಪ್ರಮಾಣ, ಬುಕ್ಕಿಂಗ್ ಮಾಡಿದ ಗ್ರಾಹಕರು, ಈಗಾಗಲೇ ಮರಳು ತಲುಪಿದವರ ಪಟ್ಟಿಯನ್ನು ಪ್ರತಿವಾರ ಸಿದ್ದಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು, ಮರಳುಗಾರಿಕೆ ವ್ಯಾಪ್ತಿಯ ಪ್ರದೇಶದಲ್ಲಿ ಕಡ್ಡಾಯವಾಗಿ ಸಿ.ಸಿ. ಟಿವಿ ಅಳವಡಿಸಬೇಕು ಹಾಗೂ ಮರಳು ಸಾಗಾಟ ವಾಹನಗಳಿಗೆ ಜಿಪಿಎಸ್ ಅಳವಡಿಸುವಂತೆ ಅವರು ಗಣಿ ಇಲಾಖೆಗೆ ಸೂಚಿಸಿದರು.

ರಾಜ್ಯ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಎಸ್. ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಣೆ, ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ತಹಶೀಲ್ದಾರ್ ಪುರಂದರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!