ಸಾವಯವ ಸಿರಿ ಯೋಜನೆ: ಅರ್ಜಿ ಆಹ್ವಾನ
ಕಾರವಾರ ಮೇ. 7, 2022: “ಸಾವಯವ ಸಿರಿ” ಎಂಬ ನೂತನ ಯೋಜನೆಯನ್ನು ಕೃಷಿ ಇಲಾಖೆ ಮೂಲಕ ರಾಜ್ಯಾದ್ಯಂತ ಅನುಷ್ಟಾನಗೊಳಿಸಲು ಜಿಲ್ಲೆಯಲ್ಲಿ ಸಾವಯವ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನೊಂದಾಯಿತ ಸಾಮಾಜಿಕ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ.
ಆಸಕ್ತ ಅರ್ಹ ನೊಂದಾಯಿತ ಸಾಮಾಜಿಕ ಸಂಸ್ಥೆಗಳು ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಿಂದ ಸಾವಯವ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರಬೇಕು. ಸಾವಯವ ಕೃಷಿ ಸಂಬಂಧಿತ ತರಬೇತಿ/ಕಾರ್ಯಾಗಾರಗಳನ್ನು ಆಯೋಜಿಸಲು ಅವಶ್ಯಕವಾದ ಮೂಲಭೂತ ಸೌಲಭ್ಯಗಳನ್ನು ಹೊಂದಿರಬೇಕು.
ಕನಿಷ್ಠ 10 ಹೆ. ವ್ಯವಸಾಯ ಯೋಗ್ಯ ಪ್ರದೇಶವನ್ನು ಹೊಂದಿರಬೇಕು. ಹಾಲಿ ಸಂಸ್ಥೆಗಳಲ್ಲಿ ಗೋಶಾಲೆಗಳನ್ನು ನಿರ್ವಹಿಸುತ್ತಿರಬೇಕು. ಆಯಾ ವ್ಯಾಪ್ತಿಯ ಕೃಷಿ ವಿಶ್ವವಿದ್ಯಾನಿಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಹಾಗೂ ಈ ಹಿಂದೆ ಸರ್ಕಾರದ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮದಡಿ ಕಾರ್ಯನಿರ್ವಹಿಸಿರುವ ಸಂಸ್ಥೆಗಳಿಗೆ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸುವವರು ಅರ್ಹತಾ ಅಂಶಗಳಿಗೆ ಸಂಬಂಧಿತ ದಾಖಲಾತಿಗಳನ್ನು ಅರ್ಜಿಯೊಂದಿಗೆ ಮೇ. 12 ರೊಳಗಾಗಿ ಜಂಟಿ ಕೃಷಿ ನಿರ್ದೇಶಕರು, ಉತ್ತರ ಕನ್ನಡ, ಕಾರವಾರ ಕಚೇರಿಯಲ್ಲಿ ಸಲ್ಲಿಸಬೇಕು.
ಯೋಜನೆಯ ಲಾಭ ಪಡೆಯಬೇಕೆಂದು ಇಚ್ಛೆಯುಳ್ಳ ಸಂಸ್ಥೆಗಳು ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಜಂಟಿ ಕೃಷಿ ನಿರ್ದೇಶಕರು, ಉಪ ಕೃಷಿ ನಿರ್ದೇಶಕರು ಅಥವಾ ತಾಲೂಕಾ ಸಹಾಯಕ ಕೃಷಿ ನಿರ್ದೇಶಕರವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.