ಬಿ ಪ್ರಭಾಕರ್ ಭಂಡಾರಿ ಮುಡಿಗೆ ಮಲಬಾರ್ ಗೋಲ್ಡ್ ವಿಶ್ವ ರಂಗ ಪುರಸ್ಕಾರ- 2022
ಹರಿದ್ವರ್ಣದ ಸಿರಿ ತುಂಬಿ ತುಳುಕುವ ತುಳುವ ನಾಡು ಕಲೆ ಕಲಾವಿದ ಕಲಾರಸಿಕರಿಗೊಂದು ಸುಂದರ ಬೀಡು. ಆತ್ಮೀಯತೆಯ ಸ್ಪರ್ಶವಿರುವ ಈ ತುಳು ಭಾಷೆ ಇಲ್ಲಿಯ ಸೊಬಗು. ಆ ಸೊಬಗಿನ ಸವಿಯನ್ನು ಸದಾ ಸಲಹುತ್ತಾ ಏಳಿಗೆಯನ್ನು ಬಯಸುತ್ತಾ ಸುರ ಸುಂದರ ಸೌರಭವನ್ನು ಗಡಿಯಾಚೆಗಿನ ನಾಡುಗಳಿಗೆ ನಾಟಕ, ಕ್ರೀಡೆ, ನಟನೆ, ಸಂಘಟನೆಗಳ ಮೂಲಕ ಪಸರಿಸುತ್ತ ತುಳು ಮಾತೆಯ ಸೇವೆಗೈಯುತ್ತಿರುವ ತುಳು ರಂಗಭೂಮಿಯ ಹೆಮ್ಮೆಯ ರಂಗಕರ್ಮಿ ಬಿ. ಪ್ರಭಾಕರ ಭಂಡಾರಿ.
ತುಕ್ರ ಗಿರಿಜಾ ದಂಪತಿಗಳ ಷಷ್ಟ್ಯ ಮ ಗರ್ಭ ಸಂಜಾತ -ಈ ಸ್ನೇಹ ಜೀವಿಯ ಹುಟ್ಟೂರು ಮಹಿಷಮರ್ಧಿನಿ ತಾಯಿಯೂರು ಬೈಲೂರು. ಪ್ರಾಥಮಿಕ ಶಿಕ್ಷಣ ಬೈಲೂರಲ್ಲಿ. ಕ್ರಿಶ್ಚಿಯನ್ ಹೈಸ್ಕೂಲ್ ನಂತರ ಪದವಿ ಪೂರ್ವ ಗವರ್ನ್ಮೆಂಟ್ ಜೂನಿಯರ್ ಕಾಲೇಜ್ ನಲ್ಲಿ. ವೃತ್ತಿಪರ ಶಿಕ್ಷಣ ಉಡುಪಿಯ ಎಂಜಿಎಂ ಕಾಲೇಜ್ ನಲ್ಲಿ. ಕೂಡಲೆ ದೊರಕಿತು ಉದ್ಯೋಗ – ಮೆಡಿಕಲ್ ರೆಕಾರ್ಡ್ ಟೆಕ್ನೀಶಿಯನ್ ಆಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ.
ಕರ್ತವ್ಯದ ಮೇಲಿನ ಭಕ್ತಿ ಶ್ರದ್ಧೆ ಶಿಫಾರಸ್ಸು ಮಾಡಿತ್ತು ಮುಂಬಡ್ತಿಗೆ … ಡೆಪ್ಯುಟಿ ಮೆಡಿಕಲ್ ರೆಕಾರ್ಡ್ ಆಫೀಸರ್ ಪದವಿ ವೃತ್ತಿಗೆ ಗೌರವ ತಂದುಕೊಟ್ಟಿತು. ಈ ನಡುವೆ ಒಂದು ತಿಂಗಳ ಕಾಲ ಮಾಹೆ ವಿಶ್ವವಿದ್ಯಾಲಯವು ಸಿಕ್ಕಿಂ ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ದಾಖಲೆಗಳ ಮೇಲ್ವಿಚಾರಕರಾಗಿ ನೇಮಿಸಿ ಸಿಕ್ಕಿಂಗೆ ಕಳುಹಿಸಿರುವುದು ಸಂಸ್ಥೆ ಇವರ ಮೇಲಿಟ್ಟಿರುವ ಅಪಾರ ನಂಬಿಕೆಗೆ ಸಾಕ್ಷಿ. ಅತೀ ಹೆಚ್ಚು – ಸಂಸ್ಥೆಗಾಗಿ ಸುಮಾರು 40 ವರ್ಷಗಳ ಸುಧೀರ್ಘ ಸೇವೆಗೈದ ಕೆಲವೇ ಕ್ರಿಯಾಶೀಲ ಉದ್ಯೋಗಿಗಳಲ್ಲಿ ಇವರೂ ಒಬ್ಬರು ಎಂಬ ಹೆಗ್ಗಳಿಕೆ ಸಂತಸ ನೀಡಿತ್ತು. ಈ ಮಧ್ಯೆ, ಐಎಸ್ಒ ಆಡಿಟರ್ ಮತ್ತು ಕಸ್ತೂರ್ಬಾ ಆಸ್ಪತ್ರೆಯ ಕ್ರೀಡಾ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದು ಇನ್ನೊಂದು ಹೆಮ್ಮೆಯ ವಿಷಯ.
ಇನ್ನು ಬಾಲ್ಯದಿಂದಲೇ ಕಲೆ ಸಂಸ್ಕೃತಿಯ ಬಗ್ಗೆ ಹೆಚ್ಚು ಹುಚ್ಚು ಹಿಡಿಸಿಕೊಂಡವರು. ಪ್ರಭಾಕರ್. ಅವರ ಆಸಕ್ತಿಗಳಿಗೆ ಮಣೆ ಹಾಕಿದ್ದು ಬೈಲೂರಿನ ಕಲಾಕಿರಣ್ ಕ್ಲಬ್. ಈ ಕಲಾ ಸಂಸ್ಥೆಯ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷನಾಗಿ ಕೊನೆಗೆ ಅಧ್ಯಕ್ಷನಾಗಿಯೂ ಹಲವು ವರ್ಷ ದುಡಿದು ಯುವಕರನ್ನೆಲ್ಲ ಸಂಘಟಿಸಿ ಸಂಸ್ಥೆಯ ಕೀರ್ತಿಪತಾಕೆಯನ್ನು ಉತ್ತುಂಗಕ್ಕೇರಿಸಿದರು. ಈ ಸಂದರ್ಭದಲ್ಲಿ ಇವರ ನಾಯಕತ್ವದಲ್ಲಿ ಸಂಸ್ಥೆಗೊಂದು ಸೂರು ದೊರೆಯಿತು. ಇದರ ಜೊತೆಗೆ ಈತ ಒಬ್ಬ ಒಳ್ಳೆಯ ಸಂಘಟಕನೆನ್ನುವುದಕ್ಕೆ ಸಾಕ್ಷಿಯಾದದ್ದು ತಾನು ಕಲಿತ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಶಾಲೆಗೊಂದು ಸುಂದರ ರಂಗ ಮಂಟಪ ನಿರ್ಮಿಸಿ ಕೊಟ್ಟದ್ದು ಅಲ್ಲಿ ಹಲವಾರು ನಾಟಕೋತ್ಸವ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ನಾಟಕಗಳನ್ನು ಕಟ್ಟುತ್ತ ನಾಟಕಗಳಲ್ಲಿ ಕಥಾನಾಯಕನಾಗಿ, ಖಳ ಹಾಗೂ ಹಾಸ್ಯ ಪಾತ್ರಗಳಿಗೂ ಜೀವ ತುಂಬುತ್ತಿದ್ದವರು ಶ್ರೀಯುತ ಭಂಡಾರಿಯವರು.
ಕಡೀರ ಮಗೆ ನಾಟಕದ ಮಂಗಳಮುಖಿಯ ಹಾಸ್ಯಮಯ ಪಾತ್ರ, ಭರತ್ ಕುಮಾರ್ ಪೊಲಿಪು ನಿರ್ದೇಶನದ “ಮಲ್ತಿ ಪಾಪ ಮಾಜಂದ್ ” ನಾಟಕದಲ್ಲಿ ಕಥಾನಾಯಕನ ಪಾತ್ರ ನಿರ್ವಹಿಸಿ ಮೆಚ್ಚುಗೆ ಪಡೆದದ್ದು ಮಧುರ ಅನುಭವ ಎನ್ನುತ್ತಾರೆ ಪ್ರಭಾಕರ್.
ಪಟ್ಲದ ಪ್ರಗತಿ ಯುವಕ ಮಂಡಲ ಹಾಗೂ ಚಿಟ್ಪಾಡಿಯ ವಿಜಯ ವೀರ ಸಂಘ ನಾಟಕ ನಿರ್ದೇಶನಕ್ಕೆ ಅವಕಾಶ ಮಾಡಿಕೊಟ್ಟಿತ್ತು. ತುಳುನಾಡಿನ ಹೆಮ್ಮೆಯ ತುಳು ರಂಗ ಸಂಸ್ಥೆ ತುಳು ಕೂಟದ ಸಕ್ರಿಯ ಸದಸ್ಯನಾಗಿ ದುಡಿಯುತ್ತಿರುವುದು ಸಮಾಜ ಗುರುತಿಸುವಂತೆ ಮಾಡಿದೆ ಎನ್ನುವುದು ಮನದಾಳದ ನಂಬಿಕೆ. ದಿ.ಸಂಜೀವ ಭಂಡಾರಿ ನೆನಪಿನ ಭಾವಗೀತೆ ಸ್ಪರ್ಧೆ, ಹಾಗೂ ದಿ. ಕೆಮ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳು ನಾಟಕ ಸ್ಪರ್ಧೆಯ ಸಂಚಾಲಕನಾಗಿ ಸಂಸ್ಥೆಯ ಹಾಗೂ ತುಳು ಭಾಷೆಯ ಗೌರವಕ್ಕೆ ಎಳ್ಳಷ್ಟೂ ಚ್ಯುತಿಬಾರದಂತೆ ನಡೆಸಿಕೊಂಡು ಹೋಗುತ್ತಿರುವುದು ಒಂದು ಗುರುತರ ಜವಾಬ್ದಾರಿ ಹಾಗೂ ಹೆಮ್ಮೆಯ ವಿಷಯ.
ಪ್ರಭಾಕರ್ ರವರ ಕ್ರಿಯಾಶೀಲತೆ ಹಾಗೂ ಪ್ರತಿಭೆ ಕೇವಲ ನಾಟಕ ರಂಗಕ್ಕೆ ಸೀಮಿತವಾಗಿರದೆ ಕ್ರಿಕೆಟ್, ಬ್ಯಾಡ್ಮಿಂಟನ್, ವಾಲಿಬಾಲ್ ಇತ್ಯಾದಿ ಕ್ರೀಡೆಗಳಲ್ಲಿ ಪರಿಣತನಾಗಿದ್ದು ಒಳ್ಳೆಯ ಕ್ರೀಡಾಪಟುವೆನಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗುತ್ತಿರುವ ಲಗೋರಿ, ಚಿನ್ನಿದಾಂಡು, ಸೊಪ್ಪಿನ ಆಟ ಹೀಗೆ ಹಲವು ಗ್ರಾಮೀಣ ಆಟಗಳನ್ನು ಹಳ್ಳಿ ಪ್ರದೇಶಗಳಲ್ಲಿ ಆಯೋಜಿಸುತ್ತಾ, ತೀರ್ಪು ಗಾರರಾಗಿಯೂ ಭಾಗವಹಿಸುತ್ತ ಗ್ರಾಮೀಣ ಕ್ರೀಡಾ ಜಗತ್ತಿಗೆ ಒಂದಷ್ಟು ಬೆಳಕು ಚೆಲ್ಲುತ್ತಿದ್ದಾರೆ.
ಪ್ರಭಾಕರ್ ಕರಾವಳಿಯ ಗಂಡುಕಲೆ ಯಕ್ಷಗಾನದ ಕಲಾವಿದನೂ ಹೌದು. ಪುಂಡು ವೇಷ, ಕಿರಾತ, ಸುಪಾರ್ಶ್ವ ಕ ಹೀಗೆ ಅಭಿನಯಿಸಿದ ವಿಭಿನ್ನ ಪಾತ್ರಗಳ ಪೈಕಿ ದೇವಿ ಮಹಾತ್ಮೆಯ ಚಂಡ, ಶುಂಭ ಪಾತ್ರ ಇವರಿಗೆ ಖುಷಿ ನೀಡಿದ ಪಾತ್ರಗಳು. ಹೀಗೆ ಬಹುಮುಖ ಪ್ರತಿಭೆಯ ಮೃದುಸ್ವಭಾವದ ಗಂಭೀರ ವ್ಯಕ್ತಿ ಪ್ರಭಾಕರ್ ರವರ ಪ್ರೀತಿಯ ಎರಡು ಮಕ್ಕಳು ಪ್ರಕೃತಿ ಹಾಗೂ ಪ್ರತೀಕ್ಷಾ ಇವರ ಜೀವದೆರಡು ಕುಡಿಗಳು. ಇನ್ನು ಪತ್ನಿ ವಿಜಯಲಕ್ಷ್ಮಿ ..ಹೆಣ್ಣು ಸಂಸಾರದ ಕಣ್ಣು …ಎಂಬಂತೆ ಓರ್ವ ಶಿಕ್ಷಕಿಯಾಗಿದ್ದುಕೊಂಡು ಸಂಸಾರವನ್ನು ಸರಿದೂಗಿಸಿಕೊಂಡು ಪತಿಯ ಚಟುವಟಿಕೆಗಳಲ್ಲೂ ಕಾಯಾ ವಾಚಾ ಮನಸಾ ಬೆಂಗಾವಲಾಗಿ ನಿಂತವರು.
ಇಂತಹ ಅದ್ಭುತ ನಟ, ಸಂಘಟಕ ಶ್ರೀ ಬಿ. ಪ್ರಭಾಕರ ಭಂಡಾರಿಯವರು ಸಂಸ್ಕೃತಿ ವಿಶ್ವಪ್ರತಿಷ್ಠಾನ ರಿ. ಉಡುಪಿ ಮತ್ತು ಮಲಬಾರ್ ಗೋಲ್ಡ್ & ಡೈಮಂಡ್ಸ್, ಉಡುಪಿ ಶಾಖೆಯು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಐದು ಜನ ಶ್ರೇಷ್ಟ ರಂಗಸಾಧಕರಲ್ಲಿ ಸಂಘಟಕ – ತುಳು ರಂಗಭೂಮಿ ಶೀರ್ಷಿಕೆಯಡಿಯಲ್ಲಿ ಕೊಡ ಮಾಡುತ್ತಿರುವ ಈ ಬಾರಿಯ “ಮಲಬಾರ್ ವಿಶ್ವ ರಂಗ ಪುರಸ್ಕಾರ – 2022 “ಕ್ಕೆ ಭಾಜನರಾಗಿರುತ್ತಾರೆ.
ಲೇಖನ: ರಾಜೇಶ್ ಭಟ್ ಪಣಿಯಾಡಿ .