ಗ್ರಾಮೀಣ ಜನರ ಸಮಸ್ಯೆ ನಿವಾರಣೆಗೆ ಗ್ರಾಮ ವಾಸ್ತವ್ಯ: ಡಾ. ರಾಜೇಂದ್ರ
.
ಮಂಗಳೂರು,ಮಾ.19, 2022: ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಜನರ ಸಮಸ್ಯೆಗಳನ್ನು ಬಗೆಹರಿಸಿ, ಅವರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ತಿಳಿಸಿದರು.
ಅವರು ಮಾ.19ರ ಶನಿವಾರ ಉಲ್ಲಾಳ ತಾಲೂಕಿನ ಬಾಳೆಪುಣಿ ಗ್ರಾಮ ಪಂಚಾಯತ್‍ನ ಹೂಹಾಕುವಕಲ್ಲು ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ `ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.
ಗ್ರಾಮಸ್ಥರ ಸಮಸ್ಯೆಗಳನ್ನು ತಿಳಿದು, ಸ್ಥಳದಲ್ಲಿಯೇ ಪರಿಹರಿಸುವ ಉದ್ದೇಶದಿಂದ ಗ್ರಾಮ ವಾಸ್ತವ್ಯವನ್ನು ಹಮ್ಮಿಕೊಳ್ಳಲಾಗಿದೆ, ಇಲ್ಲಿ ಅಹವಾಲುಗಳನ್ನು ಪರಿಶೀಲಿಸಿ ಕೆಲವೊಂದು ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ನೀಡಲಾಗಿದೆ, ಉಳಿದಂತೆ ರಸ್ತೆ, ನಿವೇಶನ, ಕುಡಿಯುವ ನೀರಿಗೆ ಸಂಬಂಧಿಸಿದಂತೆ ದೀರ್ಘಾವಧಿ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಇರುವ ಹಳೆಯ ಬೊರ್‍ವೆಲ್ ಅನ್ನು ದುರಸ್ಥಿ ಪಡಿಸಿಕೊಟ್ಟು, ಪೈಪ್ ಲೈನ್ ಜೋಡಣೆಗೆ ಆದೇಶ ನೀಡಲಾಗಿದೆ, ಒಂದು ವೇಳೆ ಹಳೆ ಬೋರ್‍ವೆಲ್ ಉಪಯೋಗವಾಗದಿದ್ದಲ್ಲೀ ಕ್ಷಿಪ್ರಗತಿಯಲ್ಲಿ ಜಲಜೀವನ್ ಯೋಜನೆಯಡಿ ಹೊಸ ಬೋರ್‍ವೆಲ್ ಕೊರೆಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ, ಜತೆಗೆ ಶಿಥಿಲಗೊಂಡಿರುವ ರಸ್ತೆ, ಕೆರೆಗಳ ದುರಸ್ಥಿಗೆ ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.
ಹಲವು ವರ್ಷಗಳಿಂದ ಪರಿಸರ ಇಲಾಖೆಯ ಸುಪರ್ದಿಯಲ್ಲಿರುವ ಸುಮಾರು 15 ಎಕರೆ ಜಾಗ ಬಳಕೆಯಾಗಿಲ್ಲ, ಅದನ್ನು ಕಂದಾಯ ಇಲಾಖೆಗೆ ಹಿಂಪಡೆದು ಸ್ಥಳೀಯ ಪಂಚಾಯತ್‍ಗೆ ನೀಡುವ ಮೂಲಕ ಗ್ರಾಮದ ನಿವೇಶನ ರಹಿತರಿಗೆ ಮನೆ ನಿರ್ಮಿಸಿ ಕೊಡಲಾಗುವುದು, ಈ ಗ್ರಾಮದಲ್ಲಿ ನಿವೇಶನಕ್ಕಾಗಿ ನಿವೇಶನ ರಹಿತರು ಸಾಕಷ್ಟು ಸಂಖ್ಯೆಯಲ್ಲಿ ಅದಕ್ಕಾಗಿ ಅಹವಾಲು ಸಲ್ಲಿಸಿದ್ದಾರೆ. ಈ ಜಾಗ ಕಳೆದ 15 ವರ್ಷಗಳಿಂದ ಬಳಕೆ ರಹಿತವಾಗಿ ಪಾಳುಬಿದ್ದಿದೆ. ಈ ಜಾಗವನ್ನು ಕಂದಾಯ ಇಲಾಖೆ ಸ್ವಾಧೀನಪಡಿಸಿಕೊಂಡು ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಯವರು ಭರವಸೆ ನೀಡಿದರು.